×
Ad

ಪ್ರೇಮ ಸಂಬಂಧವನ್ನು ನಾವು ತಡೆದು ನಿಲ್ಲಿಸುವುದು ಹೇಗೆ? ಅಪ್ರಾಪ್ತ ಬಾಲಕಿ ಸಾವಿನ ಕುರಿತು ಮಮತಾ ಹೇಳಿಕೆ

Update: 2022-04-11 22:30 IST

ಕೊಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹನ್ಸಖಾಲಿಯಲ್ಲಿ ಇತ್ತೀಚೆಗೆ ಮೃತಪಟ್ಟ 9 ನೇ ತರಗತಿಯ ಬಾಲಕಿಯ ಮರಣ ಬಂಗಾಳ ರಾಜಕಾರಣದಲ್ಲಿ ಮಹತ್ವವನ್ನು ಪಡೆದಿದೆ. ಬಿಜೆಪಿಯು ಈ ಸಾವನ್ನು ಬಳಸಿ ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿದ್ದು, ಸರ್ಕಾರವು ಬಾಲಕಿಯ ಸಾವಿಗೆ ಸಂಬಂಧಪಟ್ಟ ಆರೋಪಿಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದೆ.

ಬಾಲಕಿ ಮೃತಪಟ್ಟ ಐದು ದಿನಗಳ ಬಳಿಕ ಆಕೆಯ ಪೋಷಕರು ತಮ್ಮ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಪಾರ್ಟಿಯೊಂದಕ್ಕೆ ತೆರಳಿದಾಗ ಸ್ಥಳೀಯ ಟಿಎಂಸಿ ಮುಖಂಡನ ಪುತ್ರ ಹಾಗೂ ಇತರರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ನಡುವೆ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದು, ಬಾಲಕಿ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಹೇಗೆ ತೀರ್ಮಾನಿಸಿದ್ದೀರಿ? ಆಕೆ ಗರ್ಭಿಣಿಯಾಗಿದ್ದರೇ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಆರೋಪಿಗೂ ಮೃತ ಬಾಲಕಿಗೂ ಪ್ರೇಮ ಸಂಬಂಧವಿತ್ತು. ಮೃತಪಟ್ಟ ಬಳಿಕ ಅಂತ್ಯಸಂಸ್ಕಾರ ನಡೆಸಿ ಐದು ದಿನಗಳ ಬಳಿಕ ಪೊಲೀಸರಿಗೆ ದೂರು ನೀಡಿದರೆ ಅವರು ತನಿಖೆ ನಡೆಸುವುದು ಹೇಗೆ ಎಂದು ಕೇಳಿದ್ದಾರೆ. ಅಲ್ಲದೆ,  ಲವ್‌ ಜಿಹಾದ್‌ ಹೆಸರಿನಲ್ಲಿ ಪ್ರೇಮಿಗಳನ್ನು ತಡೆದು ನಿಲ್ಲಿಸಲು ನಾವು ಯುಪಿ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲ.. ಆದರೂ, ಪ್ರಕರಣಕ್ಕೆ ಸಂಬಂಧಿಸಿ ಟಿಎಂಸಿ ಮುಖಂಡನ 21 ವರ್ಷದ ಮಗನನ್ನು ಬಂಧಿಸಲಾಗಿದೆ. ಬಿಜೆಪಿ ಈ ಪ್ರಕರಣವನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಬಯಸುತ್ತಿದೆ ಎಂದು ಹೇಳಿದ್ದಾರೆ.

 ಎಪ್ರಿಲ್ 5 ರಂದು ಆರೋಪಿಯ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ಬಾಲಕಿ ಸಾವನ್ನಪ್ಪಿದ್ದಾಳೆ. ಆಕೆ ಮನೆಗೆ ಹಿಂದಿರುಗಿದಾಗ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಳು. ರಾತ್ರಿ ನಂತರ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪೋಷಕರು ಏಪ್ರಿಲ್ 10 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ.

"ಸಾವಿಗೆ ಕಾರಣ ಏನು ಎಂದು ಪೊಲೀಸರಿಗೆ ಇನ್ನೂ ಅರ್ಥವಾಗುತ್ತಿಲ್ಲ. ನಾನು ಅವರನ್ನು ಕೇಳಿದೆ. ನೀವು ಇದನ್ನು ಅತ್ಯಾಚಾರ ಎಂದು ಕರೆಯುತ್ತೀರಾ ಅಥವಾ ಅವಳು ಗರ್ಭಿಣಿಯೇ? ಇದು ಪ್ರೇಮ ಪ್ರಕರಣವೇ? ನೀವು ಈ ಬಗ್ಗೆ ವಿಚಾರಿಸಿದ್ದೀರಾ? ಇದು ದುರದೃಷ್ಟಕರ ಘಟನೆಯಾಗಿದೆ. ," ಎಂದು ಬ್ಯಾನರ್ಜಿ ಹೇಳಿದ್ದಾರೆ.

ಬಾಲಕಿ ಮತ್ತು ಆರೋಪಿಯ ನಡುವಿನ ಸಂಬಂಧ ಆಕೆಯ ಕುಟುಂಬ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ.

ನೀವು (ಹುಡುಗಿಯ ಕುಟುಂಬದವರು) ಮೃತದೇಹದ ಅಂತಿಮ ಸಂಸ್ಕಾರವನ್ನೂ ನಡೆಸಿದ್ದೀರಿ, ನಾನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮಾತನಾಡುತ್ತಿದ್ದೇನೆ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆಯೇ ಅಥವಾ ಅವಳು ಗರ್ಭಿಣಿಯಾಗಿದ್ದಾಳೆಯೇ ಅಥವಾ ಸಾವಿಗೆ ಬೇರೆ ಯಾವುದೇ ಕಾರಣವಿದೆಯೇ ಎಂಬುದಕ್ಕೆ ಪುರಾವೆಯನ್ನು ಎಲ್ಲಿಂದ ಪಡೆಯುತ್ತಾರೆ? ಯಾರೋ ಕಪಾಳಮೋಕ್ಷ ಮಾಡಿದ ನಂತರ ಅವಳು ಅಸ್ವಸ್ಥಳಾದಳೋ ಎಂದು ಪೊಲೀಸರು ಹೇಗೆ ಕಾರಣ ಹುಡುಕುತ್ತಾರೆ" ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
 
ಪ್ರಕರಣದ ಬಗ್ಗೆ ವಿಸ್ಕೃತ ತನಿಖೆ ನಡೆಯುತ್ತಿದೆ. ಮಕ್ಕಳ ಆಯೋಗಕ್ಕೆ ತನಿಖೆ ಮಾಡಲು ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ಬಗೆಗಿನ ಮಮತಾ ಹೇಳಿಕೆಯನ್ನು ಪ್ರತಿಪಕ್ಷಗಳು ಕಟುವಾಗಿ ಟೀಕಿಸಿದ್ದು, ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕ್ಷುಲ್ಲಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

"ನಾಡಿಯಾದ ಹಂಸಖಾಲಿಯಲ್ಲಿ 14 ವರ್ಷದ ಬಾಲಕಿಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯನ್ನು ಕ್ಷುಲ್ಲಕವಾಗಿ ವಿವರಿಸುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರದ್ದು ಆಘಾತಕಾರಿ ಹೇಳಿಕೆ. ಇದು ಪ್ರೇಮ ಪ್ರಕರಣವೇ ಅಥವಾ ಯೋಜಿತವಲ್ಲದ ಗರ್ಭಧಾರಣೆಯ ಪ್ರಕರಣವೇ ಎಂದು ಅವರು ಸಂತ್ರಸ್ತೆಯನ್ನು ಪ್ರಶ್ನಿಸುತ್ತಾರೆ! ಏಕೆಂದರೆ ಆರೋಪಿ ಟಿಎಂಸಿ ನಾಯಕನ ಮಗ” ಎಂದು  ಬಿಜೆಪಿಯ ಹಿರಿಯ ನಾಯಕ ಮತ್ತು ಪಶ್ಚಿಮ ಬಂಗಾಳದ ಪಕ್ಷದ ಸಹ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕೂಡ ಬ್ಯಾನರ್ಜಿ ಅವರ ಟೀಕೆಗಳಿಗೆ ಛೀಮಾರಿ ಹಾಕಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News