ಈದ್ ಬಳಿಕ ಪಾಕ್ ಗೆ ಆಗಮಿಸಲಿರುವ ನವಾಝ್ ಶರೀಫ್ ?

Update: 2022-04-11 18:36 GMT

ಇಸ್ಲಮಾಬಾದ್, ಎ.11: ಮಾಜಿ ಪ್ರಧಾನಿ ನವಾಝ್ ಶರೀಫ್ ಈದ್ ಬಳಿಕ ಲಂಡನ್‌ನಿಂದ ಪಾಕ್ ಗೆ ವಾಪಸಾಗುವ ನಿರೀಕ್ಷೆಯಿದೆ ಎಂದು ಪಿಎಂಎಲ್-ಎನ್‌ನ ಹಿರಿಯ ಮುಖಂಡ ಜಾವೇದ್ ಲತೀಫ್ ಹೇಳಿದ್ದಾರೆ.

ಇಮ್ರಾನ್ ಖಾನ್ ಪದಚ್ಯುತಿಯ ಬಳಿಕ ದೇಶದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ 3 ಬಾರಿಯ ಪ್ರಧಾನಿ, ಪಿಎಂಎಲ್-ಎನ್‌ನ ಪರಮೋಚ್ಛ ಮುಖಂಡ ಶರೀಫ್ ಪಾಕ್‌ಗೆ ವಾಪಸಾಗಲು ನಿರ್ಧರಿಸಿದ್ದು ಈ ವಿಷಯವನ್ನು ಮೈತ್ರಿಕೂಟದ ಮಿತ್ರಪಕ್ಷಗಳ ಜತೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದವರು ಹೇಳಿದ್ದಾರೆ. ದೇಶದಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆ ಉಲ್ಲೇಖಿಸಿದ ಲತೀಫ್, ಈಗಿನ ಸಮ್ಮಿಶ್ರ ಸರಕಾರ 6 ತಿಂಗಳಿಗಿಂತ ಹೆಚ್ಚು ಬಾಳುವುದಿಲ್ಲ ಮತ್ತು ಹೊಸದಾಗಿ ಚುನಾವಣೆ ನಡೆಸುವುದೇ ರಾಜಕೀಯ ಅಸ್ಥಿರತೆಗೆ ಸೂಕ್ತ ಪರಿಹಾರ ಎಂದರು.

2017ರಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿದ್ದ ಶರೀಫ್ ವಿರುದ್ಧ ಇಮ್ರಾನ್ ಖಾನ್ ಸರಕಾರ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿತ್ತು. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು 4 ವಾರಗಳ ಅನುಮತಿಯನ್ನು ಲಾಹೋರ್ ಹೈಕೋರ್ಟ್ ನೀಡಿದ ಹಿನ್ನೆಲೆಯಲ್ಲಿ 2019ರ ನವೆಂಬರ್ನಲ್ಲಿ ಲಂಡನ್‌ಗೆ ಚಿಕಿತ್ಸೆಗೆಂದು ತೆರಳಿದ್ದ ಶರೀಫ್, ಆರೋಗ್ಯ ಸುಧಾರಿಸಿ ಪ್ರಯಾಣ ನಡೆಸಬಹುದು ಎಂದು ವೈದ್ಯರು ಪ್ರಮಾಣ ಪತ್ರ ನೀಡಿದೊಡನೆ ಪಾಕ್‌ಗೆ ಹಿಂತಿರುಗಿ ವಿಚಾರಣೆ ಎದುರಿಸುವುದಾಗಿ ಹೈಕೋರ್ಟ್ಗೆ ಮುಚ್ಚಳಿಕೆ ನೀಡಿದ್ದರು.

ಪಾಕಿಸ್ತಾನ: ಪ್ರಯಾಣ ತಡೆ ಪಟ್ಟಿಗೆ ಇಮ್ರಾನ್ 6 ಆಪ್ತರ ಹೆಸರು ಸೇರ್ಪಡೆ

 ಇಸ್ಲಮಾಬಾದ್, ಎ.11: ಪಾನಿಸ್ತಾನದ ಉನ್ನತ ತನಿಖಾ ಸಂಸ್ಥೆಯು ಪದಚ್ಯುತ ಪ್ರಧಾನಿ ಇಮ್ರಾನ್ಖಾನ್ ಅವರ 6 ಆಪ್ತರ ಹೆಸರನ್ನು ದೇಶ ಬಿಟ್ಟು ಹೋಗದಂತೆ ತಡೆಯಲು ಅವಕಾಶ ನೀಡುವ ಪ್ರಯಾಣ ತಡೆ ಪಟ್ಟಿಗೆ ಸೇರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ಸೋಮವಾರ ವರದಿ ಮಾಡಿದೆ.

  ಇಮ್ರಾನ್ ಖಾನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಅಝಮ್ ಖಾನ್, ರಾಜಕೀಯ ವ್ಯವಹಾರಕ್ಕೆ ಸಂಬಂಧಿಸಿದ ಮಾಜಿ ವಿಶೇಷ ಸಹಾಯಕ ಶಹಬಾರ್ ಗಿಲ್, ಆಂತರಿಕ ವಿಷಯಕ್ಕೆ ಸಂಬಂಧಿಸಿದ ಮಾಜಿ ಸಲಹೆಗಾರ ಶಹಝಾದ್ ಅಕ್ಬರ್, ಪಂಜಾಬ್ ಪ್ರಾಂತದ ಡೈರೆಕ್ಟರ್ ಜನರಲ್ ಗೊಹರ್ ನಫೀಸ್, ಪಂಜಾಬ್ ವಲಯದ ಫೆಡರಲ್ ತನಿಖಾ ಸಂಸ್ಥೆಯ ಡಿಜಿ ಮುಹಮ್ಮದ್ ರಿಝ್ವೆನ್ ಹೆಸರನ್ನು ಪ್ರಯಾಣ ತಡೆ ಪಟ್ಟಿಗೆ ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅನುಮತಿ ಪಡೆಯದೆ ಅವರು ದೇಶ ಬಿಟ್ಟು ತೆರಳಲು ಅವಕಾಶವಿರುವುದಿಲ್ಲ ಎಂದು ವರದಿ ಹೇಳಿದೆ. 

ರವಿವಾರ ಇಮ್ರಾನ್ ಖಾನ್ ಅವರ ಪಕ್ಷ ಪಿಟಿಐಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅರ್ಸಲನ್ ಖಾಲಿದ್ ಹೆಸರನ್ನೂ ಪ್ರಯಾಣ ತಡೆ ಪಟ್ಟಿಗೆ ಸೇರಿಸಲಾಗಿತ್ತು. ನಿರ್ಧಿಷ್ಟ ಜನರು ದೇಶಬಿಟ್ಟು ತೆರಳುವುದನ್ನು ಕ್ಷಿಪ್ರವಾಗಿ ತಡೆಯುವ ಉದ್ದೇಶದಿಂದ ಫೆಡರಲ್ ತನಿಖಾ ಸಂಸ್ಥೆ ಪ್ರಯಾಣ ತಡೆ ಪಟ್ಟಿ ವ್ಯವಸ್ಥೆಯನ್ನು 2003ರಿಂದ ಆರಂಭಿಸಿದೆ. ಇದಕ್ಕೂ ಮುನ್ನ ಜಾರಿಯಲ್ಲಿದ್ದ ‘ನಿರ್ಗಮನ ನಿಯಂತ್ರಣ ಪಟ್ಟಿ’ ಪ್ರಕ್ರಿಯೆಗೆ ಚಾಲನೆ ನೀಡಲು ದೀರ್ಘ ಸಮಯದ ಅಗತ್ಯವಿದ್ದ ಕಾರಣ ಹೊಸ ವ್ಯವಸ್ಥೆ ಆರಂಭಿಸಲಾಗಿದೆ.


ಅಕ್ರಮ ಹಣ ವರ್ಗಾವಣೆ ಪ್ರಕರಣ: ಶರೀಫ್, ಪುತ್ರನ ದೋಷಾರೋಪಣೆ ಮುಂದೂಡಿದ ನ್ಯಾಯಾಲಯ

ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಝ್ ಶರೀಫ್ ಮತ್ತು ಅವರ ಪುತ್ರ ಹಂಝ ಶಹಬಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪಣೆ ಪ್ರಕ್ರಿಯೆಯನ್ನು ಎಪ್ರಿಲ್ 27ರವರೆಗೆ ಮುಂದೂಡಿರುವುದಾಗಿ ಪಾಕಿಸ್ತಾನದ ನ್ಯಾಯಾಲಯ ಸೋಮವಾರ ಘೋಷಿಸಿದೆ. ಅಲ್ಲದೆ, ಇವರಿಬ್ಬರ ನಿರೀಕ್ಷಣಾ ಜಾಮೀನಿನ ಅವಧಿಯನ್ನೂ ಎಪ್ರಿಲ್ 27ರವರೆಗೆ ವಿಸ್ತರಿಸಿರುವುದಾಗಿ ನ್ಯಾಯಾಲಯದ ಆದೇಶ ತಿಳಿಸಿದೆ.

ನ್ಯಾಯಾಲಯದ ಕಲಾಪಕ್ಕೆ ವೈಯಕ್ತಿಕ ಹಾಜರಾತಿಯಿಂದ 1 ದಿನಕ್ಕೆ ವಿನಾಯಿತಿ ನೀಡಬೇಕೆಂದು ಶರೀಫ್ ಸೋಮವಾರ ಸಲ್ಲಿಸಿದ್ದ ಅರ್ಜಿಯನ್ನು ಫೆಡರಲ್ ತನಿಖಾ ಸಂಸ್ಥೆ(ಎಫ್ಐಎ) ವಿಶೇಷ ನ್ಯಾಯಾಲಯ ಸೋಮವಾರ ಪುರಸ್ಕರಿಸಿತು ಮತ್ತು ತಂದೆ ಹಾಗೂ ಮಗನ ನಿರೀಕ್ಷಣಾ ಜಾಮೀನು ವಾಯ್ದೆಯನ್ನು ಎಪ್ರಿಲ್ 27ರವರೆಗೆ ವಿಸ್ತರಿಸಿತು ಎಂದು ನ್ಯಾಯಾಲಯದ ಅಧಿಕಾರಿನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ವಿರುದ್ಧ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರವಾದ ಹಿನ್ನೆಲೆಯಲ್ಲಿ ಇಮ್ರಾನ್ಖಾನ್ರನ್ನು ಪದಚ್ಯುತಗೊಳಿಸಲಾಗಿದ್ದು ನೂತನ ಪ್ರಧಾನಿಯನ್ನು ಸೋಮವಾರ ಆಯ್ಕೆ ಮಾಡುವ ಸಂದರ್ಭ ತಾನು ಸದನದಲ್ಲಿ ಇರುವ ಅಗತ್ಯವಿದೆ . ಆದ್ದರಿಂದ ನ್ಯಾಯಾಲಯದಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯತಿ ನೀಡಬೇಕು ಎಂದು ಶಹಬಾರ್ ಶರೀಫ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.


ಇಮ್ರಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಕೋರಿದ ಅರ್ಜಿ ವಜಾ

 ಇಸ್ಲಮಾಬಾದ್, ಎ.11: ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಹಾಗೂ ಅವರ ಸಂಪುಟದಲ್ಲಿದ್ದ ಹಲವು ಸಚಿವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಅನುಮತಿ ಕೋರಿದ್ದ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಇಸ್ಲಮಾಬಾದ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

   ಇಮ್ರಾ‌ನ್‌ ಖಾನ್ ಹಾಗೂ ಅವರ ಸಂಪುಟದ ಸಚಿವರನ್ನು ವಿಮಾನ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಬೇಕು ಮತ್ತು ತನ್ನ ಸರಕಾರದ ಪದಚ್ಯುತಿಗೆ ವಿದೇಶದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಇಮ್ರಾನ್ಖಾನ್ ಆರೋಪದ ಬಗ್ಗೆ ತನಿಖೆಗೆ ಆದೇಶಿಸುವಂತೆಯೂ ಅರ್ಜಿದಾರರು ಕೋರಿದ್ದರು. ಇದನ್ನೂ ತಿರಸ್ಕರಿಸಿರುವ ಹೈಕೋರ್ಟ್, 1 ಲಕ್ಷ ರೂ. ದಂಡ ಪಾವತಿಸುವಂತೆ ಅರ್ಜಿದಾರ ಮೌಲ್ವಿ ಇಕ್ಬಾಲ್ ಹೈದರ್ಗೆ ಆದೇಶಿಸಿದೆ ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಈ ಮಧ್ಯೆ, ತನ್ನ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯಕ್ಕೆ ಸೋಲಾದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧಿಕಾರಿಗಳು ಅಮೆರಿಕದಲ್ಲಿನ ಪಾಕಿಸ್ತಾನದ ರಾಯಭಾರಿಯ ಮೂಲಕ ಬೆದರಿಕೆ ಪತ್ರ ರವಾನಿಸಿದ್ದು ಎಂದು ಆರೋಪಿಸಿದ್ದ ಇಮ್ರಾನ್ಖಾನ್, ಆ ಪತ್ರವನ್ನು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಉಮರ್ ಅಟಾ ಬಂದಿಯಾಲ್ಗೆ ರವಾನಿಸಿದ್ದಾರೆ ಎಂದು ವರದಿಯಾಗಿದೆ.


 ಇಮ್ರಾನ್ ಬೆಂಬಲಿಗರ ಬೃಹತ್ ಪ್ರತಿಭಟನೆ: ಅಮೆರಿಕದ ವಿರುದ್ಧ ಆಕ್ರೋಶ

ಇಮ್ರಾನ್‌ ಖಾನ್‌ ರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿರುವುದನ್ನು ವಿರೋಧಿಸಿ ದೇಶದಾದ್ಯಂತ ಹಲವು ನಗರಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿರುವ ಇಮ್ರಾನ್‌ ಖಾನ್ ಅವರ ಪಿಟಿಐ ಪಕ್ಷದ ಕಾರ್ಯಕರ್ತರು, ದೇಶಕ್ಕೆ ಆಮದು ಸರಕಾರದ ಅಗತ್ಯವಿಲ್ಲ ಎಂದು ಘೋಷಣೆ ಕೂಗಿ ಅಮೆರಿಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

 ತನ್ನ ಪದಚ್ಯುತಿಗೆ ಅಮೆರಿಕ ಷಡ್ಯಂತ್ರ ರೂಪಿಸಿದೆ ಎಂದು ಇಮ್ರಾನ್ ಆರೋಪಿಸಿದ್ದರು. ಇಸ್ಲಮಾಬಾದ್, ಕರಾಚಿ, ಪೇಶಾವರ, ಮಲಕಾಂದ್, ಮುಲ್ತಾನ್ ಖಾನೆವಾಲ್, ಖೈಬರ್, ಝಂಗ್, ಕ್ವೆಟ್ಟಾ ಸಹಿತ ಪ್ರಮುಖ ನಗರಗಳಲ್ಲಿ ಪಿಟಿಐ ಬೆಂಬಲಿಗರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ರವಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 3 ಗಂಟೆಯವರೆಗೆ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ಆರಂಭಕ್ಕೂ ಮುನ್ನ ಟ್ವೀಟ್ ಮಾಡಿದ್ದ ಇಮ್ರಾನ್‌ ಖಾನ್, ಪಾಕಿಸ್ತಾನದಲ್ಲಿ ಸರಕಾರ ಬದಲಾವಣೆಗೆ ನಡೆದಿರುವ ವಿದೇಶದ ಪಿತೂರಿಯ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಈ ಪ್ರತಿಭಟನೆ ನಾಂದಿ ಹಾಡಲಿದೆ ಎಂದಿದ್ದರು. ಜನತೆಯೇ ಯಾವಾಗಲೂ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ರಕ್ಷಣೆಯ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿ ಬೆಂಬಲಿಗರನ್ನು ಉತ್ತೇಜಿಸಿದ್ದರು.

     ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿನ ಲಾಲ್ ಹವೇಲಿಯಲ್ಲಿ ಜಮಾಯಿಸಿದ ಪಿಟಿಐ (ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್) ಪಕ್ಷದ ಕಾರ್ಯಕರ್ತರು, ಇಮ್ರಾನ್‌ ಖಾನ್ ಅವರ ಜನಾದೇಶವನ್ನು ಕದಿಯಲಾಗಿದೆ ಎಂದು ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಪಿಟಿಐ ಮುಖಂಡ, ಮಾಜಿ ಸಚಿವ ಶೇಖ್ ರಶೀದ್, ಎಪ್ರಿಲ್ 29ರಂದು ಪಕ್ಷವು ಲಾಲ್ಹವೇಲಿಯಿಂದ ಜೈಲ್ಭರೋ ಪ್ರತಿಭಟನೆ ನಡೆಸಲಿದ್ದು ತಾನು ಕೂಡಾ ಪಾಲ್ಗೊಳ್ಳುವುದಾಗಿ ಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News