ಮಹಾರಾಷ್ಟ್ರದಲ್ಲಿ 20 ಇಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗಾಹುತಿ

Update: 2022-04-12 18:49 GMT

ಹೊಸದಿಲ್ಲಿ,ಎ.12: ಮಹಾರಾಷ್ಟ್ರದ ನಾಸಿಕ್ನಲ್ಲಿ ಟ್ರಕ್ವೊಂದರಲ್ಲಿ ಸಾಗಿಸುತ್ತಿದ್ದ ಕನಿಷ್ಠ 20 ಇಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಯಿಂದ ನಾಶಗೊಂಡಿವೆ. ಎ.9ರಂದು ಈ ಸ್ಕೂಟರ್ಗಳನ್ನು ಜಿತೇಂದ್ರ ಇವಿ ಕಂಪನಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಫ್ಯಾಕ್ಟರಿಯ ಸಮೀಪವೇ ಅವುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು.

ಟ್ರಕ್ನಲ್ಲಿ 40 ಇಲೆಕ್ಟ್ರಿಕ್ ಸ್ಕೂಟರ್ ಗಳಿದ್ದು,ಎಲ್ಲವೂ ಬೆಂಕಿಯಿಂದಾಗಿ ಹಾನಿಗೀಡಾಗಿವೆ ಎಂದು ಕೆಲವು ವರದಿಗಳು ತಿಳಿಸಿವೆ. ಇದು ಕಳೆದ ಮೂರು ವಾರಗಳಲ್ಲಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬೆಂಕಿ ಅವಘಡಕ್ಕೆ ತುತ್ತಾಗಿರುವ ಐದನೇ ಘಟನೆಯಾಗಿದೆ. ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹತ್ತಿಕೊಳ್ಳುವ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ತನಿಖೆಗೆ ಕೇಂದ್ರವು ಆದೇಶಿಸಿದೆ. ಇಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಬಳಸಲಾಗಿರುವ ಬ್ಯಾಟರಿಗಳು ಮತ್ತು ಇತರ ಸಂಬಂಧಿತ ವ್ಯವಸ್ಥೆಗಳ ಗುಣಮಟ್ಟ ಇಂತಹ ಘಟನೆಗಳಿಗೆ ಕಾರಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕ್ಷೇತ್ರವು ಅಗಾಧ ಬೆಳವಣಿಗೆಯನ್ನು ಕಂಡಿದ್ದು,ಈ ವಾಹನಗಳ ಸೂಕ್ತ ಸುರಕ್ಷತಾ ನಿಯಂತ್ರಣ ಮತ್ತು ಸಮಗ್ರ ಗುಣಮಟ್ಟ ಪರೀಕ್ಷೆಗಳಿಗೆ ಒತ್ತಡಗಳು ಹೆಚ್ಚುತ್ತಿವೆ. ತಮ್ಮ ತಂಡದ ಸಕಾಲಿಕ ಕಾರ್ಯಾಚರಣೆಯಿಂದ ಸ್ಥಿತಿಯನ್ನು ತಕ್ಷಣ ನಿಯಂತ್ರಣಕ್ಕೆ ತರಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿರುವ ಜಿತೇಂದ್ರ ಇವಿ ಕಂಪನಿಯ ವಕ್ತಾರರು,ಸುರಕ್ಷತೆಯು ಅತ್ಯಂತ ಮುಖ್ಯವಾಗಿದೆ. ಅವಘಡಕ್ಕೆ ಮೂಲ ಕಾರಣವನ್ನು ಕಂಡುಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News