ಆತ್ಮಹತ್ಯೆಯಲ್ಲ, ಕೊಲೆ!

Update: 2022-04-13 04:25 GMT

ಸಚಿವ ಈಶ್ವರಪ್ಪ ಅವರ ವಿರುದ್ಧ ಶೇ. 40 ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಮೃತದೇಹ ಉಡುಪಿಯ ಹೊಟೇಲೊಂದರಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದೆ. ಅಷ್ಟೇ ಅಲ್ಲ, ಆತ್ಮಹತ್ಯೆಗೆ ಮುನ್ನ ‘ನನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ’ ಎಂದು ಪಾಟೀಲ್ ಬರೆದಿರುವ ಪತ್ರವೂ ದೊರಕಿದೆ. ರಾಜ್ಯ ಸರಕಾರದೊಳಗಿರುವ ಭ್ರಷ್ಟ ವ್ಯವಸ್ಥೆ ಕೊನೆಗೂ ಸಂತೋಷ್ ಪಾಟೀಲ್ ಅವರನ್ನು ನುಂಗಿ ನೀರು ಕುಡಿದಿದೆ. ತನಗೆ ನ್ಯಾಯ ಕೊಡಿ ಎಂದು ಪಾಟೀಲ್ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಈಶ್ವರಪ್ಪ ಅವರ ಸೂಚನೆಯ ಮೇರೆಗೆ ಕಳೆದ ವರ್ಷ ರಸ್ತೆ ಕಾಮಗಾರಿ ನಡೆಸಿದ್ದು, ಸರಕಾರ ತನಗೆ ನೀಡಬೇಕಾದ ಕೋಟ್ಯಂತರ ರೂಪಾಯಿಯನ್ನು ಬಾಕಿಯುಳಿಸಲಾಗಿದೆ.

ಸಚಿವ ಈಶ್ವರಪ್ಪ ಶೇ. 40 ಕಮಿಷನ್ ಕೇಳುತ್ತಿದ್ದಾರೆ. ದಯವಿಟ್ಟು ನನ್ನ ಬಾಕಿ ಹಣವನ್ನು ಕೊಡಿಸಿ ಎಂದು ಅವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿದ್ದರೆ ಈಶ್ವರಪ್ಪನವರ ಅಸಲಿ ಮುಖ ಬಹಿರಂಗವಾಗುತ್ತಿತ್ತು. ಮಾತ್ರವಲ್ಲ, ಒಂದು ಜೀವ ಉಳಿಯುತ್ತಿತ್ತು. ಆದರೆ ಪ್ರಧಾನಿ ಮೋದಿಯವರಿಗೆ ಬರೆದ ಪತ್ರವೂ ಸರಕಾರವನ್ನು ಎಚ್ಚರಿಸಲಿಲ್ಲ. ಬದಲಿಗೆ ಗುತ್ತಿಗೆದಾರ ಪಾಟೀಲ್ ವಿರುದ್ಧವೇ ದೂರು ದಾಖಲಾಯಿತು. ಜೊತೆಗೆ ರಾಜಕೀಯ ಬೆದರಿಕೆಯೂ ಅವರಿಗೆ ಬರುತ್ತಿತ್ತು ಎನ್ನಲಾಗಿದೆ. ತನ್ನ ಬಾಕಿ ಹಣ ಇನ್ನು ಸಿಗಲಾರದು ಎನ್ನುವುದು ಅರಿತು ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ಇದು ರಾಜಕೀಯ ಕೊಲೆಯಾಗಿರುವ ಸಾಧ್ಯತೆಯೂ ಇದೆ.

ಈ ಹಿಂದೆ ಡಿ.ಕೆ. ರವಿ ಅವರು ಖಾಸಗಿ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಾಗ ಅಂದಿನ ಕಾಂಗ್ರೆಸ್ ಸರಕಾರದ ತಲೆಗೆ ಆತ್ಮಹತ್ಯೆಯನ್ನು ಕಟ್ಟಲಾಗಿತ್ತು. ಅದೊಂದು ಕೊಲೆ ಎಂದು ಆರೋಪಿಸಿ ಬಿಜೆಪಿ ರಾದ್ಧಾಂತ ಎಬ್ಬಿಸಿತ್ತು. ಆದರೆ ಅದಕ್ಕೆ ಯಾವ ಸಾಕ್ಷವೂ ಇರಲಿಲ್ಲ. ಆದರೆ ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತನಗೆ ಈಶ್ವರಪ್ಪರಿಂದ ಅನ್ಯಾಯವಾಗಿದೆ ಎಂದು ಸ್ವತಃ ಪ್ರಧಾನಿಗೇ ಪತ್ರ ಬರೆದಿದ್ದರು. ಅಷ್ಟೇ ಅಲ್ಲ, ಇದೀಗ ಮರಣ ಪತ್ರದಲ್ಲೂ ಈಶ್ವರಪ್ಪ ಅವರನ್ನು ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ಸಂಭವಿಸಿದ ಬಳಿಕವೂ ಈಶ್ವರಪ್ಪ ಈವರೆಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಸರಕಾರ ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ನೀಡಿಲ್ಲ್ಲ. ಬದಲಿಗೆ ಅವರನ್ನು ರಕ್ಷಿಸುವ ಹೇಳಿಕೆಗಳನ್ನು ನೀಡುತ್ತಿದೆ. ಯಾವುದೋ ಗಲ್ಲಿಯಲ್ಲಿ ಇಬ್ಬರು ಬೈಕ್ ಸವಾರರ ನಡುವೆ ಜಗಳವಾಗಿ ಚಾಕು ಇರಿತ ನಡೆದರೆ ತಕ್ಷಣ ಅದರ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯಿಸುತ್ತಾರೆ. ಎಲ್ಲೋ ಒಬ್ಬ ಕ್ರಿಮಿನಲ್ ಹಿನ್ನೆಲೆಯಿರುವ ಆರೋಪಿಯನ್ನು ಇನ್ಯಾರೋ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳು ಕೊಂದು ಹಾಕಿದರೆ ಬಿಜೆಪಿಯ ನಾಯಕರು ಸಾಲು ಸಾಲಾಗಿ ಅಲ್ಲಿಗೆ ಧಾವಿಸುತ್ತಾರೆ. ಮೃತನ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನೆರವನ್ನು ನೀಡುತ್ತಾರೆ. ಆದರೆ ಇಲ್ಲಿ, ರಸ್ತೆ ಕಾಮಗಾರಿ ನಡೆಸಿದ ತನ್ನ ನಾಲ್ಕು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿ ಎಂದು ಬೇಡಿಕೊಂಡರೂ ಅದಕ್ಕೆ ಗಮನ ಕೊಡದೆ ಸರಕಾರವೊಂದು ಆತನ ಸಾವಿಗೆ ಕಾರಣವಾಗುತ್ತದೆ. ಈತನೂ ಹಿಂದೂ ಧರ್ಮಕ್ಕೆ ಸೇರಿದವನೇ ಆಗಿದ್ದಾನೆ. ಅಷ್ಟೇ ಅಲ್ಲ, ಬಿಜೆಪಿಯ ಕಾರ್ಯಕರ್ತನಾಗಿಯೂ ಈತ ಕೆಲಸ ಮಾಡಿದ್ದಾನೆ. ಆದರೆ ಈತನ ಸಾವಿಗೆ ಗೃಹ ಸಚಿವರು ಈವರೆಗೆ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ. ಸಾರ್ವಜನಿಕವಾಗಿ ಉದ್ವಿಗ್ನಕಾರಿ ಭಾಷಣ ಮಾಡುತ್ತಾ ಸಮಾಜದ ಶಾಂತಿ ಕದಡುವ ಮೂಲಕವೇ ಇಂದು ಸುದ್ದಿಯಲ್ಲಿರುವ ಈಶ್ವರಪ್ಪ ಇದೀಗ ತಮ್ಮದೇ ಪಕ್ಷದ ಕಾರ್ಯಕರ್ತನೂ ಆಗಿರುವ ವ್ಯಕ್ತಿಯೊಬ್ಬನ ಸಾವಿಗೆ ಕಾರಣರಾಗಿದ್ದಾರೆ. ಮಾತು ಮಾತಿಗೆ ‘ಹಿಂದೂ ಹಿಂದೂ’ ಎಂದು ಬಾಯಿ ಬಡಿದುಕೊಳ್ಳುವ ಈಶ್ವರಪ್ಪ ಅವರು ಈಗ ಈ ಸಾವಿಗೆ ಏನು ಹೇಳುತ್ತಾರೆ?

  ನಾವಿಂದು ಯಾವುದೇ ಕಳಪೆ ಕಾಮಗಾರಿಗಳಿಗಾಗಿ ಗುತ್ತಿಗೆದಾರರನ್ನು ದೂರುತ್ತೇವೆ. ಗುತ್ತಿಗೆದಾರರು ಹಣ ಹೊಡೆಯುತ್ತಿದ್ದಾರೆ ಎಂದೂ ಆರೋಪಿಸುತ್ತೇವೆ. ಆದರೆ ಇದೇ ಸಂದರ್ಭದಲ್ಲಿ ಒಬ್ಬ ಗುತ್ತಿಗೆದಾರ ಒಂದು ಕಾಮಗಾರಿಕೆಯನ್ನು ಕೈಗೆ ತೆಗೆದುಕೊಳ್ಳಲು ರಾಜಕಾರಣಿಗಳು, ಅಧಿಕಾರಿಗಳಿಗೆ ಅದೆಷ್ಟು ಕಮಿಶನ್ ನೀಡಬೇಕಾಗುತ್ತದೆ ಎನ್ನುವುದನ್ನು ನಾವು ಮರೆಯುತ್ತೇವೆ. ಗುತ್ತಿಗೆದಾರನೊಬ್ಬ ಕೆಲಸ ವಹಿಸಿಕೊಂಡಾಕ್ಷಣ ಹಣ ಬಿಡುಗಡೆಯಾಗುವುದಿಲ್ಲ. ಎಷ್ಟೋ ಗುತ್ತಿಗೆದಾರರು ರಾಜಕಾರಣಿಗಳ ಅಥವಾ ಅಧಿಕಾರಿಗಳ ಕಾರಣದಿಂದಾಗಿ ಹೂಡಿದ ಹಣವನ್ನು ಸೂಕ್ತ ಸಮಯದಲ್ಲಿ ಪಡೆಯಲಾಗದೆ ಬೀದಿಗೆ ಬಿದ್ದದ್ದಿವೆ. ರಾಜಕೀಯ ಅಥವಾ ಇನ್ನಿತರ ಕಾರಣಗಳನ್ನು ನೀಡಿ ಗುತ್ತಿಗೆದಾರರನ್ನು ಸತಾಯಿಸುವುದು ಕೂಡ ನಡೆಯುತ್ತದೆ. ನಾಳೆ ಕಾಮಗಾರಿಗಳಲ್ಲಿ ಯಾವುದೇ ತಪ್ಪುಗಳು ಕಂಡರೂ ಅದರ ಹೊಣೆಯನ್ನು ಗುತ್ತಿಗೆದಾರನೇ ಹೊರಬೇಕಾಗುತ್ತದೆ. ಆದರೆ ಈ ತಪ್ಪುಗಳಿಗೆ ಪರೋಕ್ಷವಾಗಿ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳೂ ಕೈ ಜೋಡಿಸಿರುತ್ತಾರೆ ಎನ್ನುವುದನ್ನು ನಾವು ಮರೆತಿರುತ್ತೇವೆ. ಇದೀಗ ಈಶ್ವರಪ್ಪ ಅವರ ಶೇ. 40 ಕಮಿಶನ್ ಪ್ರಕರಣ, ಕಾಮಗಾರಿಗಳಲ್ಲಿ ನಡೆಯುವ ಭಾರೀ ಭ್ರಷ್ಟಾಚಾರಗಳನ್ನು ಬಹಿರಂಗಪಡಿಸಿದೆ. ದುರದೃಷ್ಟವಶಾತ್ ಇಂತಹ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿಯಬೇಕಾದ ಜನರು, ಹಿಜಾಬ್, ಹಲಾಲ್, ಜಟ್ಕಾ ಮೊದಲಾದ ಕೆಲಸಕ್ಕೆ ಬಾರದ ವಿಷಯಗಳಲ್ಲಿ ಮೈ ಮರೆತಿದ್ದಾರೆ. ಶೇ. 40 ಕಮಿಶನ್ ಆರೋಪ ಮಾಡಿದಾಗಲೇ ವಿರೋಧ ಪಕ್ಷಗಳು ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಬೇಕಾಗಿತ್ತು. ಇದೀಗ ಈ ಕಮಿಶನ್ ಲಾಬಿ ಒಂದು ಜೀವವನ್ನೇ ಬಲಿ ತೆಗೆದುಕೊಂಡಿದೆ.

ತನ್ನ ಸಾವಿಗೆ ಈಶ್ವರಪ್ಪ ಅವರ ಶೇ. 40 ಕಮಿಶನ್ ಕಾರಣ ಎನ್ನುವುದನ್ನೂ ಸಂತೋಷ್ ಅವರು ಸಾಯುವ ಮೊದಲು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಆ ಕಾರಣದಿಂದ ತಕ್ಷಣ ಈಶ್ವರಪ್ಪ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು. ಸಂತೋಷ್ ಪಾಟೀಲ್ ಅವರದು ಆತ್ಮಹತ್ಯೆಯೋ ಕೊಲೆಯೋ ಎನ್ನುವುದರ ತನಿಖೆಯಾಗಬೇಕು ಮಾತ್ರವಲ್ಲ, ಶೇ. 40 ಕಮಿಶನ್‌ನ ಅಸಲಿಯತ್ತೂ ತನಿಖೆಯಾಗಬೇಕಾಗಿದೆ. ಆದುದರಿಂದ ಸ್ವತಂತ್ರ ತನಿಖಾ ಸಂಸ್ಥೆಯೊಂದಕ್ಕೆ ತನಿಖೆಯನ್ನು ವಹಿಸಲು ಸರಕಾರ ಮುಂದಾಗಬೇಕು. ಒಂದು ವೇಳೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಾದರೆ ಅದಕ್ಕೆ ನೇರ ಕಾರಣರಾಗಿರುವ ಈಶ್ವರಪ್ಪ ಅವರ ಮೇಲೆ ಪ್ರಕರಣ ದಾಖಲಿಸಬೇಕು. ಬಾಕಿ ಉಳಿಸಿರುವ ಹಣವನ್ನು ಇನ್ನಾದರೂ ಮೃತನ ಕುಟುಂಬಕ್ಕೆ ಸಿಗುವಂತೆ ಸರಕಾರ ನೋಡಿಕೊಳ್ಳಬೇಕು. ಜೊತೆಗೆ ಪರಿಹಾರವನ್ನೂ ನೀಡಬೇಕು. ಇದು ಕೇವಲ ಒಬ್ಬ ಗುತ್ತಿಗೆದಾರನ ಸಾವಿಗೆ ಸಂಬಂಧಿಸಿದ ವಿಷಯ ಖಂಡಿತ ಅಲ್ಲ. ಭ್ರಷ್ಟ ವ್ಯವಸ್ಥೆಯ ದೆಸೆಯಿಂದಾಗಿ ಹೇಗೆ ಕರ್ನಾಟಕ ರಾಜ್ಯ ದಿನದಿಂದ ದಿನಕ್ಕೆ ಆತ್ಮಹತ್ಯೆಯ ಕಡೆಗೆ ಸಾಗುತ್ತಿದೆ ಎನ್ನುವುದನ್ನು ಈ ಸಾವು ಬಹಿರಂಗಪಡಿಸಿದೆ. ಆದುದರಿಂದ, ಈ ಸಾವಿಗೆ ನ್ಯಾಯ ಸಿಗಲೇಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News