×
Ad

ಕಾನೂನು ಪ್ರಕಾರ ತನಿಖೆ, ಹಸ್ತಕ್ಷೇಪ ಮಾಡುವುದಿಲ್ಲ: ಸಿಎಂ ಬೊಮ್ಮಾಯಿ

Update: 2022-04-13 10:41 IST

ಮಂಗಳೂರು, ಎ.13: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯು ಕಾನೂನು ಪ್ರಕಾರ ನಡೆಯುತ್ತದೆ. ಎಲ್ಲೂ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ವಿರುದ್ಧ ಎಫ್ ಐಆರ್ ಆಗಿದ್ದು, ಆ ಬಗ್ಗೆ ಎಲ್ಲ ವಿವರ ಪಡೆದುಕೊಂಡಿದ್ದೇನೆ. ಈ ಬಗ್ಗೆ ಈಶ್ವರಪ್ಪರಲ್ಲೂ ಮಾತನಾಡುತ್ತೇನೆ, ಫೋನಲ್ಲೂ ಕೆಲವು ವಿಚಾರ ಮಾತನಾಡಿದ್ದೇನೆ ಎಂದರು.

ಈಶ್ವರಪ್ಪರ ರಾಜೀನಾಮೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ರಾಜೀನಾಮೆ ಬಗ್ಗೆ ಈಶ್ವರಪ್ಪ ಏನು ಹೇಳಿದ್ದಾರೆ ಗೊತ್ತಿಲ್ಲ. ಒನ್ ಟು ಒನ್ ಮಾತನಾಡಿದರೆ ಸ್ಪಷ್ಟವಾಗುತ್ತದೆ. ಅಲ್ಲಿನ ಘಟನೆ ಮತ್ತು ಎಫ್.ಐ.ಆರ್ ಆದ ನಂತರ ಏನಾಗಿದೆ ಅಂತ ಅವರ ಜೊತೆಯೇ ಮಾತನಾಡುತ್ತೇನೆ ಎಂದರು.

ಕಾಂಗ್ರೆಸ್ ನಿಯೋಗವು ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಿ, ಅವರನ್ನು ಬಂಧಿಸುವಂತೆ ಒತ್ತಾಯಿಸಿ ರಾಜ್ಯಪಾಲರನ್ನು ಭೇಟಿಯಾಗಿರುವ ಬಗ್ಗೆ ಮಾಧ್ಯಮದವರು ಗಮನಸೆಳೆದಾಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ವಿರೋಧ ಪಕ್ಷದವರು ಇದರಲ್ಲಿ ತಪ್ಪು ಕಂಡು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತದೆ. ಯಾರು ಇದರಲ್ಲಿ ಪಾತ್ರ ವಹಿಸಿದ್ದಾರೆ ಮತ್ತು ಇದರ ಹಿನ್ನೆಲೆ ಏನು ಅನ್ನೋದು ಗೊತ್ತಾಗುತ್ತದೆ ಎಂದರು.

ಪ್ರಕರಣದ ಬಗ್ಗೆ ಪಕ್ಷದ ವರಿಷ್ಟರಿಗೆ ಎಲ್ಲಾ ವಿಚಾರ ಗೊತ್ತಿದೆ. ನಾನು ಕೂಡ ಹೇಳಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News