ಪಂಚನಾಮೆ ಪ್ರಕ್ರಿಯೆ ಆರಂಭ, ಸ್ಥಳದಲ್ಲಿ ದೊರೆತ ಸಾಕ್ಷ್ಯಗಳ ಸಂಗ್ರಹ: ಐಜಿಪಿ
ಉಡುಪಿ, ಎ.13: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ಸಂಬಂಧಿಕರು ನೀಡಿದ ದೂರಿನನ್ವಯ ಕೆ.ಎಸ್.ಈಶ್ವರಪ್ಪ ಮತ್ತು ಇಬ್ಬರು ಆಪ್ತರ ಮೇಲೆ ಎಫ್.ಐ.ಆರ್. ದಾಖಲು ಮಾಡಿದ್ದೇವೆ. ಪಂಚನಾಮೆ ಪ್ರಕ್ರಿಯೆ ಕೆಲಕ್ಷಣಗಳ ಹಿಂದೆ ಆರಂಭವಾಗಿದೆ ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ತಿಳಿಸಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್ ಗೆ ಭೇಟಿ ನೀಡಿ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು
ಹತ್ತಿರದ ಸಂಬಂಧಿಕರ ಮುಂಭಾಗದಲ್ಲೇ ಎಲ್ಲಾ ಪರಿಶೀಲನೆ ಮಾಡುತ್ತಾ ಇದ್ದೇವೆ. ಡಿಜಿಟಲ್ ಸಾಮಗ್ರಿ ಮತ್ತು ಸಾಂದರ್ಭಿಕ ಸ್ಥಳದಲ್ಲಿ ಇರುವಂತಹ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಕೆಎಂಸಿ ಮತ್ತು ಮಂಗಳೂರಿನ ಫೋರೆನ್ಸಿಕ್ ತಜ್ಞರು ಇದ್ದಾರೆ ಎಂದು ತಿಳಿಸಿದರು
ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು. ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇನ್ನು 3ರಿಂದ 4 ಗಂಟೆಗಳ ಕಾಲ ಪ್ರಕ್ರಿಯೆ ನಡೆಯಬಹುದು. ನಾವು ಎಲ್ಲ ರೀತಿಯ ಸೂಕ್ತ ತನಿಖೆಗಳನ್ನು ಮಾಡುತ್ತೇವೆ. ಸಂತೋಷ್ ಕುಟುಂಬಸ್ಥರು ಬಹಳ ನೊಂದಿದ್ದಾರೆ. ಬೇಸರದಲ್ಲಿ ಇದ್ದಾರೆ ಗಲಿಬಿಲಿ ಆಗಿದ್ದಾರೆ ಎಂದರು
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ್ ಹಾಜರಿದ್ದರು.