ಶ್ರೀಲಂಕಾ: ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ, ದೋಷಾರೋಪಕ್ಕೆ ವಿಪಕ್ಷ ಸಜ್ಜು
ಹೊಸದಿಲ್ಲಿ, ಎ.13: ಶ್ರೀಲಂಕಾದಲ್ಲಿನ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಗೆ ಸರಕಾರದ ಅದಕ್ಷತೆ ಕಾರಣ ಎಂದು ಆರೋಪಿಸಿರುವ ಪ್ರತಿಪಕ್ಷಗಳು ರಾಜಪಕ್ಸ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ದೋಷಾರೋಪಣೆ ಪ್ರಕ್ರಿಯೆಗೆ ಬುಧವಾರ ಸಹಿ ಹಾಕಿವೆ ಎಂದು ವರದಿಯಾಗಿದೆ.
ದೇಶಕ್ಕೆ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ ಅಧ್ಯಕ್ಷ ಗೊಟಬಯ ರಾಜಪಕ್ಸ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ದೋಷಾರೋಪಣೆ ನಿರ್ಣಯ ಮಂಡಿಸಲಾಗುವುದು ಎಂದು ಶುಕ್ರವಾರ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಹೇಳಿಕೆ ನೀಡಿದ್ದವು.
ಬುಧವಾರ ಪ್ರಮುಖ ಪ್ರತಿಪಕ್ಷ ಸಮಗಿ ಜನ ಬಲವೆಗಯ ಪಕ್ಷ ನಿರ್ಣಯಗಳಿಗೆ ಸಹಿ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸುಮಾರು 50 ಸದಸ್ಯರು ಸಹಿ ಹಾಕಿದ್ದು ಇನ್ನಷ್ಟು ಸದಸ್ಯರು ಸಹಿ ಹಾಕುವ ನಿರೀಕ್ಷೆಯಿದೆ. ಇನ್ನೂ 40 ಸದಸ್ಯರು ಸಹಿ ಹಾಕಿದರೆ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ.
ಅವಿಶ್ವಾಸ ನಿರ್ಣಯ ಮಂಡನೆಯ ನಿರ್ಧಾರವನ್ನು ಟ್ವೀಟ್ ಮೂಲಕ ದೃಢಪಡಿಸಿರುವ ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ ‘ ಬದಲಾವಣೆಯಾಗದೆ ನಾವು ವಿರಮಿಸುವುದಿಲ್ಲ’ ಎಂದು ಘೋಷಿಸಿದ್ದಾರೆ. ಕಾರ್ಯಕಾರಿ ಅಧ್ಯಕ್ಷತೆ(ಅಧ್ಯಕ್ಷರಿಗೆ ಸರ್ವಾಧಿಕಾರ)ಗೆ ಅವಕಾಶ ನೀಡಿರುವ ಸಂವಿಧಾನದ 20ನೇ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಮತ್ತು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯೆ ಅಧಿಕಾರ ಸಮಾನ ರೀತಿಯಲ್ಲಿ ಹಂಚಿಕೆಯಾಗಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
ಒಕ್ಕೂಟ ಸರಕಾರ ರಚಿಸುವ ಪ್ರಸ್ತಾವವನ್ನು ಅಧ್ಯಕ್ಷ ಗೊಟಬಯ ರಾಜಪಕ್ಸ ಮುಂದಿರಿಸಿದ್ದರು, ಆದರೆ ಸಮಗಿ ಜನ ಬಲವೆಗಯ ಪಕ್ಷ ಇದನ್ನು ತಿರಸ್ಕರಿಸಿದೆ.