×
Ad

ಹಿಮಾಚಲ ಪ್ರದೇಶದ ಬಿಜೆಪಿಯ ಹಿರಿಯ ನಾಯಕ, ಇತರ ಇಬ್ಬರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

Update: 2022-04-13 23:44 IST

ಹೊಸದಿಲ್ಲಿ, ಎ. 13: ಹಿಮಾಚಲ ಪ್ರದೇಶದ ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹರ್ಮೆಲ್ ಧಿಮಾನ್ ಅವರು ತನ್ನ ಇಬ್ಬರು ಬೆಂಬಲಿಗರೊದಿಗೆ ಬುಧವಾರ ಇಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದಾರೆ. ಧಿಮಾನ್ ಅವರೊಂದಿಗೆ ಆಪ್ ಸೇರಿದ ಹಿಮಾಚಲ ಪ್ರದೇಶದ ಇಬ್ಬರು ಬಿಜೆಪಿ ನಾಯಕರೆಂದರೆ ದೇವರಾಜ್ ಹಾಗೂ ಜಗದೀಶ್ ಪವಾರ್. 

ಆಡಳಿತಾರೂಢ ಬಿಜೆಪಿಯ ನೀತಿಗಳಿಂದ ತನಗೆ ಬೇಸರವಾಗಿದೆ ಎಂದು ಹರ್ಮೆಲ್ ಧಿಮಾನ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್ ಹಿರಿಯ ನಾಯಕ ಹಾಗೂ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಹಿಮಾಚಲ ಪ್ರದೇಶದ ಇನ್ನಷ್ಟು ಬಿಜೆಪಿ ನಾಯಕರು ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.
 ‘ಧಿಮಾನ್ ಅವರು ಹಿಮಾಚಲಪ್ರದೇಶದ ಜನಪ್ರಿಯ ನಾಯಕ. ಅವರು ಬಿಜೆಪಿಯ ನೀತಿಗಳಿಂದ ಅಸಮಾಧಾನಗೊಂಡು ಇಂದು ಆಪ್ ಸೇರಿದ್ದಾರೆ. ಅವರು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿದ್ದರು. ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು’ ಎಂದು ಜೈನ್ ತಿಳಿಸಿದ್ದಾರೆ. 

ದೇವರಾಜ್ ಅವರು ಹಿಮಾಚಲ ಪ್ರದೇಶದಲ್ಲಿ ಎರಡು ಬಾರಿ ಮಂಡಲ ಅಧ್ಯಕ್ಷರಾಗಿದ್ದರು. ಪವಾರ್ ಅವರು ಎರಡು ಬಾರಿ ಗ್ರಾಮಪಂಚಾಯತ್ ಅಧ್ಯಕ್ಷರಾಗಿದ್ದರು. ಅಲ್ಲದೆ ರಾಜ್ಯದ ಬ್ಲಾಕ್ ಅಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು ಎಂದು ಜೈನ್ ತಿಳಿಸಿದ್ದಾರೆ. ಬಿಜೆಪಿಯ ಕನಿಷ್ಠ 1,000 ಮಂದಿ ಶೀಘ್ರದಲ್ಲಿ ಆಪ್ ಸೇರಲಿದ್ದಾರೆ. ಇದಕ್ಕೆ ಸಂಬಂಧಿಸಿ ತಾನು ಶೀಘ್ರದಲ್ಲಿ ಕಸೌಲಿಗೆ ಭೇಟಿ ನೀಡಲಿದ್ದೇನೆ ಎಂದು ಜೈನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News