ಆಂಧ್ರಪ್ರದೇಶ: ಔಷಧ ಘಟಕದಲ್ಲಿ ಅಗ್ನಿ ಅವಘಡ; 6 ಮಂದಿ ಸಾವು, 12 ಜನರಿಗೆ ಗಾಯ

Update: 2022-04-14 18:31 GMT
Photo :ANI 

ಏಲೂರು,ಎ.14: ಆಂಧ್ರಪ್ರದೇಶದ ಏಲೂರು ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಭಾರೀ ಅಗ್ನಿ ಆಕಸ್ಮಿಕ ಮತ್ತು ರಿಯಾಕ್ಟರ್ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದು,12 ಜನರು ಗಾಯಗೊಂಡಿದ್ದಾರೆ.

ಮುಸುನೂರು ಮಂಡಲ ವ್ಯಾಪ್ತಿಯ ಅಕ್ಕಿರೆಡ್ಡಿಗುಡೆಂ ಗ್ರಾಮದ ಪೋರಸ್ ಲ್ಯಾಬರೇಟರಿಸ್ ಸ್ಥಾವರದಲ್ಲಿ ಗುರುವಾರ ನಸುಕಿನಲ್ಲಿ ಈ ದುರಂತ ಸಂಭವಿಸಿದೆ. ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೃತರ ಪೈಕಿ ನಾಲ್ವರು ಬಿಹಾರ ಮೂಲದವರಾಗಿದ್ದಾರೆ.

ಗಾಯಾಳುಗಳನ್ನು ವಿಜಯವಾಡಾದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

  ಶಂಕಿತ ಅನಿಲ ಸೋರಿಕೆಯಿಂದ ಘಟಕ-4ರಲ್ಲಿ ಹತ್ತಿಕೊಂಡಿದ್ದ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿದ್ದರು. ದುರಂತ ಸಂಭವಿಸಿದಾಗ 100ಕ್ಕೂ ಅಧಿಕ ಜನರು ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದು,ಭಾರೀ ಸ್ಫೋಟದ ಶಬ್ದ ಕೇಳಿದ ಬಳಿಕ ಭೀತಿಯಿಂದ ಹೊರಗೋಡಿದ್ದರು.ಕಂಪನಿಯು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕಗಳನ್ನು ಉತ್ಪಾದಿಸುತ್ತಿದೆ. ಕಂಪನಿಯ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾಗಿದೆ ಎಂದು ಬದುಕುಳಿದಿರುವ ಕೆಲವರು ಆರೋಪಿಸಿದ್ದಾರೆ.

ವಿಚಾರಣೆಯನ್ನು ನಡೆಸಲಾಗುವುದು ಮತ್ತು ಕಂಪನಿಯ ತಪ್ಪು ಸಾಬೀತಾದರೆ ಅದರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುವುದು. ವಿಚಾರಣೆ ಮುಗಿಯುವವರೆಗೆ ಕಂಪನಿಯನ್ನು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಸನ್ನ ವೆಂಕಟೇಶ ತಿಳಿಸಿದರು.

ಸ್ಥಾವರವು ಪ್ರದೇಶದಲ್ಲಿ ಪರಿಸರ ಮಾಲಿನ್ಯವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು ಗ್ರಾಮದಿಂದ ಕಾರ್ಖಾನೆ ಸ್ಥಳಾಂತರಕ್ಕೆ ಆಗ್ರಹಿಸಿ ಗುರುವಾರ ಪ್ರತಿಭಟನೆಯನ್ನು ನಡೆಸಿದರು.

ದುರಂತದಲ್ಲಿ ಬಲಿಪಶುಗಳಿಗೆ ನ್ಯಾಯಕ್ಕಾಗಿ ಮತ್ತು ಕಂಪನಿಯ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ ಪ್ರತಿಭಟನಾಕಾರರು ಫ್ಯಾಕ್ಟರಿಯ ಆವರಣಕ್ಕೆ ನುಗ್ಗಲು ಪ್ರಯತ್ನಿಸಿದ್ದರು.

ರಾಜ್ಯಪಾಲ ಬಿಶ್ವಭೂಷಣ ಹರಿಚಂದನ್ ಮತ್ತು ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಅವರು ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ತಲಾ 25 ಲ.ರೂ., ತೀವ್ರವಾಗಿ ಗಾಯಗೊಂಡವರಿಗೆ ಐದು ಲ.ರೂ.ಮತ್ತು ಇತರ ಗಾಯಾಳುಗಳಿಗೆ ಎರಡು ಲ.ರೂ.ಪರಿಹಾರವನ್ನು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News