ಸ್ಪೂರ್ತಿದಾಯಕ ಶಿಕ್ಷಕರಾಗಿ : ಸಯ್ಯದ್ ಮೊಹಮ್ಮದ್ ಬ್ಯಾರಿ
ಕುಂದಾಪುರ: ನೀವು ಸ್ಪೂರ್ತಿದಾಯಕ ಶಿಕ್ಷಕರಾಗಿದ್ದರೆ, ನೀವು ಅತ್ಯುತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತೀರಿ. ನಿಮ್ಮಿಂದ ಸ್ಪೂರ್ತಿ ಪಡೆದ ವಿದ್ಯಾರ್ಥಿಗಳು ಇತರರಿಗೆ ಸ್ಪೂರ್ತಿಯ ಸೆಲೆಯಾಗುತ್ತಾರೆ. ಸಂತೋಷ ತುಂಬಿದ ಸಮಾಜದ ನಿರ್ಮಾಣದಲ್ಲಿ ತೊಡಗುತ್ತಾರೆ ಎಂದು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿದರು.
ಕೋಡಿಯಲ್ಲಿರುವ ಬ್ಯಾರೀಸ್ ಕಾಲೇಜ್ ಆಫ್ ಎಜುಕೇಶನ್ ನಲ್ಲಿ ಬಿಎಡ್‌ಗೆ (B.Ed) ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಲ್ಲಿ ಇರುವ ಪ್ರತಿಯೊಬ್ಬ ವಿದ್ಯಾರ್ಥಿ-ಶಿಕ್ಷಕರು ಅವರ 40 ವರ್ಷಗಳ ಸೇವೆಯಲ್ಲಿ ವರ್ಷಕ್ಕೆ ಸರಾಸರಿ 50 ವಿದ್ಯಾರ್ಥಿಗಳ ಹಾಗೆ ಸುಮಾರು 2000 ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಲ್ಲರು. ಪ್ರತಿ ವರ್ಷ 100 ಬಿ.ಎಡ್. ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ಹೊರ ಬರುತ್ತಾರೆ. ಅವರೆಲ್ಲರೂ ಒಟ್ಟಾಗಿ ಅವರ ಸೇವಾವಧಿಯಲ್ಲಿ ಸುಮಾರು 2,00,000 ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೊಂದು ಅಗಾಧ ಸಂಖ್ಯೆ. ನೀವು ಸರಾಸರಿ ಶಿಕ್ಷಕರಾಗಿದ್ದರೆ, ವಿದ್ಯಾರ್ಥಿಗಳ ಮೇಲೆ ಸರಾಸರಿ ಪರಿಣಾಮ ಬೀರಬಲ್ಲಿರಿ. ಬದಲಾಗಿ ನೀವು ಸ್ಪೂರ್ತಿದಾಯಕ ಶಿಕ್ಷಕರಾಗಿದ್ದರೆ, ನೀವು ಅತ್ಯುತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತೀರಿ. ನಿಮ್ಮಿಂದ ಸ್ಪೂರ್ತಿ ಪಡೆದ ವಿದ್ಯಾರ್ಥಿಗಳು ಇತರರಿಗೆ ಸ್ಪೂರ್ತಿಯ ಸೆಲೆಯಾಗುತ್ತಾರೆ, ಸಂತೋಷ ತುಂಬಿದ ಸಮಾಜದ ನಿರ್ಮಾಣದಲ್ಲಿ ತೊಡಗುತ್ತಾರೆ. ದೇಶದ ಅಭಿವೃದ್ಧಿಯ ರೂವಾರಿಗಳಾಗುತ್ತಾರೆ. ಸ್ಪೂರ್ತಿದಾಯಕ ಶಿಕ್ಷಕರಾಗಿ ಈ ಪರಂಪರೆಯನ್ನು ಮುಂದುವರಿಸಿ ಎಂದು ಸಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿ, ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಸಿದ್ದಪ್ಪ ಕೆ ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಉಪನ್ಯಾಸಕರಾದ ಅನಂತ್ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ವೆಂಕಟೇಶ್ ಎಸ್ ವಂದಿಸಿದರು. ಸಂಸ್ಥೆಗಳ ನಿರ್ದೇಶಕರಾದ ಚಂದ್ರಶೇಖರ್ ದೋಮ, ಮುಖ್ಯಸ್ಥರಾದ ಡಾ. ಶಮೀರ್ ಮತ್ತು ಅಶ್ವಿನಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.