ಇಸ್ರೇಲ್ ಸೇನೆಯ ಗುಂಡೇಟಿಗೆ ಇಬ್ಬರು ಫೆಲೆಸ್ತೀನಿಯರು ಬಲಿ
ಜೆರುಸಲೇಮ್, ಎ.14: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆ ಮುಂದುವರಿದಿದ್ದು ಗುರುವಾರ ಇಬ್ಬರು ಪೆಲೆಸ್ತೀನ್ ಪ್ರಜೆಗಳು ಇಸ್ರೇಲ್ ಸೇನೆಯಿಂದ ಹತರಾಗಿದ್ದಾರೆ. ಇದರೊಂದಿಗೆ ಕಳೆದ 3 ದಿನದಲ್ಲಿ ಇಸ್ರೇಲ್ ಯೋಧರಿಂದ ಹತ್ಯೆಯಾದ ಫೆಲೆಸ್ತೀನ್ ಪ್ರಜೆಗಳ ಸಂಖ್ಯೆ 5ಕ್ಕೇರಿದೆ ಎಂದು ವರದಿಯಾಗಿದೆ.
ಬುಧವಾರ 14 ವರ್ಷದ ಬಾಲಕನ ಸಹಿತ 3 ನಾಗರಿಕರು ಮತ್ತು ಗುರುವಾರ ಇಬ್ಬರು ಇಸ್ರೇಲ್ ಯೋಧರ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ. ಬುಧವಾರ ಯೋಧರತ್ತ ಪೆಟ್ರೋಲ್ ಬಾಂಬ್ ಎಸೆದ 14 ವರ್ಷದ ಬಾಲಕನಿಂದ ಎದುರಾದ ಬೆದರಿಕೆಯ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ.
ಬುಧವಾರ ಪಶ್ಚಿಮ ದಂಡೆಯಲ್ಲಿ ರಮಲ್ಲಾದ ಬಳಿ ಮನೆಮನೆ ಶೋಧ ಕಾರ್ಯಾಚರಣೆಗೆ ಮುಂದಾದ ಇಸ್ರೇಲ್ ಯೋಧರನ್ನು ಸ್ಥಳಿಯ ನಿವಾಸಿಗಳು ತಡೆದಾಗ ಘರ್ಷಣೆ ಭುಗಿಲೆದ್ದಿದ್ದು ಇಸ್ರೇಲ್ ಸೇನೆಯ ಗುಂಡಿಗೆ ಫೆಲೆಸ್ತೀನ್ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಪೆಲೆಸ್ತೀನ್‌ನ ಆರೋಗ್ಯ ಇಲಾಖೆ ಹೇಳಿದೆ. ಪೆಲೆಸ್ತೀನ್‌ನ ನೆಲವನ್ನು ಅತಿಕ್ರಮಿಸಿ ಅಲ್ಲಿ ಇಸ್ರೇಲ್ ಪ್ರಜೆಗಳನ್ನು ನೆಲೆಗೊಳಿಸುವ ಪ್ರಯತ್ನದ ವಿರುದ್ಧ ಕಾರ್ಯನಿರ್ವಹಿಸುವ ಪೆಲೆಸ್ತೀನ್ ಲಿಬರೇಷನ್ ಆರ್ಗನೈಜೇಷನ್ ಪರ ಕಾರ್ಯನಿರ್ವಹಿಸುತ್ತಿದ್ದ 34 ವರ್ಷದ ಫೆಲೆಸ್ತೀನ್ ವಕೀಲ ಮುಹಮ್ಮದ್ ಅಸಾಫ್‌ರನ್ನು ಇಸ್ರೇಲ್ ಸೇನೆ ಬುಧವಾರ ಎದೆಗೆ ಗುಂಡಿಕ್ಕಿ ಹತ್ಯೆಗೈದಿದೆ ಎಂದು ಇಲಾಖೆ ಹೇಳಿದೆ.
ಇಸ್ರೇಲ್‌ನ ಸೇನಾ ವಾಹನದತ್ತ ನೂರಾರು ಪೆಲೆಸ್ತೀನೀಯರು ಕಲ್ಲು ಮತ್ತು ಇಟ್ಟಿಗೆ ಎಸೆಯುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿರುವ ಇಸ್ರೇಲ್, ಸೇನಾ ವಾಹನ ಧ್ವಂಸಕ್ಕೆ ಯತ್ನಿಸಿದ 3 ಪೆಲೆಸ್ತೀನಿಯರನ್ನು ಬಂಧಿಸಲಾಗಿದೆ. ಅಲ್ಲದೆ 20 ಶಂಕಿತ ಉಗ್ರರನ್ನೂ ಬಂಧಿಸಲಾಗಿದೆ ಎಂದು ಹೇಳಿದೆ.
ಕಳೆದ ವಾರ ಟೆಲ್‌ಅವೀವ್‌ನಲ್ಲಿ ಗುಂಡು ಹಾರಾಟದ ಪ್ರಕರಣ ಹಾಗೂ ಕಳೆದ 3 ವಾರದಲ್ಲಿ ಇಸ್ರೇಲ್‌ನ ವಿವಿಧೆಡೆ ನಡೆದ 4 ದಾಳಿ ಪ್ರಕರಣದಲ್ಲಿ 14 ಮಂದಿ ಮೃತಪಟ್ಟ ಬಳಿಕ ಇಸ್ರೇಲ್ ಸೇನೆ ಪಶ್ಚಿಮ ದಂಡೆಯಲ್ಲಿ ಶೋಧ ಮತ್ತು ಬಂಧನ ಕಾರ್ಯಾಚರಣೆ ಹೆಚ್ಚಿಸಿದೆ. ಈ ವರ್ಷದ ಜನವರಿಯಿಂದ ಇಸ್ರೇಲ್ ಸೇನೆ 36 ಪೆಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.