ಕೆಲವರು ಹೆಚ್ಚು ಸಮಾನರು: ಉಕ್ರೇನ್ ಯುದ್ಧದ ವರದಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೀಕೆ

Update: 2022-04-14 17:10 GMT
Photo: PTI

ಜಿನವಾ, ಎ.14: ವಿಶ್ವದ ಇತರೆಡೆಯೂ ಬಿಕ್ಕಟ್ಟು, ಸಂಘರ್ಷದ ಸ್ಥಿತಿಯಿದೆ. ಆದರೆ ಬಹುಷಃ ಅವರು ಬಿಳಿಯರಲ್ಲ ಎಂಬ ಕಾರಣಕ್ಕೆ ಮಾಧ್ಯಮದಲ್ಲಿ ಉಕ್ರೇನ್ ಯುದ್ಧಕ್ಕೆ ಸಿಕ್ಕಿದಷ್ಟು ಪ್ರಚಾರ ಇತರ ಸಮಸ್ಯೆಗಳಿಗೆ ಸಿಗುತ್ತಿಲ್ಲ. ಎಲ್ಲರೂ ಸಮಾನರು, ಆದರೆ ಕೆಲವರು ಹೆಚ್ಚು ಸಮಾನರು ಎಂಬ ಹೇಳಿಕೆಯನ್ನು ಇದು ನೆನಪಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನನ್ ಘೆಬ್ರಯೆಸಸ್ ಟೀಕಿಸಿದ್ದಾರೆ.

 ಇಥಿಯೋಪಿಯಾ, ಯೆಮನ್, ಸಿರಿಯಾ ದೇಶಗಳಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಉದಾಹರಿಸಿದ ಅವರು, ಈ ದೇಶಗಳಿಗೆ ಅಂತರಾಷ್ಟ್ರೀಯ ಸಮುದಾಯದಿಂದ ಅಲ್ಪಪ್ರಮಾಣದ ಮಾನವೀಯ ನೆರವು ಒದಗುತ್ತಿದೆ. ರಶ್ಯ-ಉಕ್ರೇನ್ ಯುದ್ಧಕ್ಕೆ ನೀಡುತ್ತಿರುವ ಗಮನವನ್ನು ಇತರ ದೇಶಗಳ ಸಮಸ್ಯೆಯ ಬಗ್ಗೆ ನೀಡಲಾಗುತ್ತಿಲ್ಲ. ಇದು ತಾರತಮ್ಯದ ಧೋರಣೆಯಾಗಿದೆ. ಜಗತ್ತು ಮಾನವ ಜನಾಂಗವನ್ನು ಒಂದೇ ರೀತಿ ಪರಿಗಣಿಸುತ್ತಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಬೇಕಾಗಿದೆ ಎಂದರು. ಜಗತ್ತು ಕಪ್ಪು ಮತ್ತು ಬಿಳಿ ಜೀವನಕ್ಕೆ ಸಮಾನ ಗಮನ ನೀಡುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಕೆಲವರು ಹೆಚ್ಚು ಸಮಾನರು ಎಂದು ಹೇಳುವಾಗ ನೋವಾಗುತ್ತದೆ. ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ, ಆದರೆ ಇದು ನಡೆಯುತ್ತಿದೆ ಎಂದು ಘೆಬ್ರಯೇಸಸ್ ಹೇಳಿದ್ದಾರೆ.

 ಘೆಬ್ರಯೆಸಸ್ ಇಥಿಯೋಪಿಯಾದ ಪ್ರಜೆಯಾಗಿದ್ದಾರೆ. ಇಥಿಯೋಪಿಯಾದ ಟಿಗ್ರೆ ವಲಯದಲ್ಲಿ ಎರಿಟ್ರಿಯನ್ ಮತ್ತು ಇಥಿಯೋಪಿಯಾ ಪಡೆಗಳ ಮಧ್ಯೆ ನಡೆಯುತ್ತಿರುವ ಅಂತರ್ಯುದ್ಧ ಆಧುನಿಕ ಶತಮಾನದ ಅತ್ಯಂತ ದೀರ್ಘಾವಧಿಯ ಯುದ್ದವೆಂದು ಪರಿಗಣಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News