×
Ad

ಮಂಗಳೂರು | ಖಾಲಿ ಭೂಮಿಯಲ್ಲಿ ತರಕಾರಿ ಬೆಳೆದ ಜೈಲು ಹಕ್ಕಿಗಳು!

Update: 2022-04-15 14:56 IST

ಮಂಗಳೂರು, ಎ.15: ಜೈಲುಗಳೆಂದರೆ ಅಪರಾಧಿಗಳ ಮನಪರಿವರ್ತನೆಯ ತಾಣ ಮಾತ್ರವಲ್ಲ, ಜೈಲುವಾಸಿಗಳ ಹವ್ಯಾಸಕ್ಕೂ ಪ್ರೋತ್ಸಾಹ ನೀಡಿದರೆ ಫಲ ಪಡೆಯಬಹುದು ಎಂಬುದನ್ನು ದ.ಕ. ಜಿಲ್ಲಾ ಕಾರಾಗೃಹ ಮತ್ತೊಮ್ಮೆ ಸಾಬೀತುಪಡಿಸಿದೆ. ಎರಡು ತಿಂಗಳ ಹಿಂದೆ ನಗರದ ಜೈಲು ಆವರಣದ ಖಾಲಿ ಜಾಗದಲ್ಲಿ ಹಾಕಿದ್ದ ತರಕಾರಿ ಬೀಜಗಳು ಫಲ ನೀಡುತ್ತಿದೆ. ಮೂಲಂಗಿ, ಹಸಿ ಮೆಣಸು, ಬದನೆ, ಮುಳ್ಳುಸೌತೆ ಗಿಡ ಬಳ್ಳಿಗಳು ಈಗಾಗಲೇ ಫಲ ನೀಡಲಾರಂಭಿಸಿವೆ.

ಕೊಡಿಯಾಲ್‌ಬೈಲ್‌ನಲ್ಲಿರುವ ವಿಚಾರಣಾಧೀನ ಕೈದಿಗಳ ಜೈಲಿನ ಮಹಿಳಾ ಬ್ಯಾರಕ್ ಹಿಂದಿನ ಖಾಲಿ ಜಾಗದಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ಬೆಳೆಯುತ್ತಿರುವ ತರಕಾರಿಗಳನ್ನು ಜೈಲಿನ ಊಟದಲ್ಲಿ ಬಳಸಲಾಗುತ್ತಿದ್ದು, ಹೆಚ್ಚು ಪ್ರಮಾಣದಲ್ಲಿ ಬೆಳೆ ಬಂದಲ್ಲಿ ಅದನ್ನು ಮಾರುಕಟ್ಟೆಗೆ ಒದಗಿಸುವ ಬಗ್ಗೆಯೂ ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಚಿಂತನೆ ನಡೆಸಿದ್ದಾರೆ.

ಖಾಲಿ ಬಿದ್ದಿದ್ದ ಜಾಗವನ್ನು ಸಮತಟ್ಟುಗೊಳಿಸಿ, ಮಣ್ಣನ್ನು ಹದಗೊಳಿಸಿ ಅಲ್ಲಿ ಬೀಜ ತರಕಾರಿ ಬೀಜ ಬಿತ್ತಿ ಬೆಳೆ ಬೆಳೆಯುವ ಕಾರ್ಯಕ್ಕೆ ಬಿ.ಟಿ. ಓಬಳೇಶಪ್ಪ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇಂದು ಖಾಲಿ ಜಾಗದಲ್ಲಿ ಬೆಳೆ ತೆಗೆಯಲು ಸಾಧ್ಯವಾಗಿದೆ. ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಲ್ಲಿ ಆಸಕ್ತರನ್ನು ಈ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಲಾಗಿದ್ದು, ಎರಡು ತಿಂಗಳ ಹಿಂದೆ ಟೊಮೊಟೋ, ಮೆಣಸು, ಮುಳ್ಳುಸೌತೆ, ಬೂದು ಕುಂಬಳ ಸೇರಿದಂತೆ ಹಲವು ಬಗೆಯ ತರಕಾರಿ ಬೀಜಗಳನ್ನು ಬಿತ್ತಲಾಗಿತ್ತು. ಇದರ ಜೊತೆಯಲ್ಲೇ ಸುಮಾರು 100ರಷ್ಟು ಬಾಳೆ ಗಿಡಗಳನ್ನು ನೆಡಲಾಗಿದೆ. ಈ ಜಾಗವನ್ನು ಸಮತಟ್ಟುಗೊಳಿಸಿ, ಬೀಜ ಬಿತ್ತುವ ಕಾರ್ಯಕ್ಕೂ ಮುನ್ನ ಜೈಲು ಅಧೀಕ್ಷಕರು ಆಸಕ್ತ ಜೈಲುವಾಸಿಗಳಿಗೆ ನಿವೃತ್ತ ಕೃಷಿ ಅಧಿಕಾರಿ ಜಗನ್ನಾಥ್‌ರವರಿಂದ ತರಬೇತಿಯನ್ನೂ ಕೊಡಿಸಿದ್ದಾರೆ. ಈ ಮೂಲಕ ಅಡಿಕೆಯಿಂದ ಸಸಿಗಳನ್ನು ಮಾಡುವ ಬಗ್ಗೆಯೂ ಜೈಲು ವಾಸಿಗಳಿಗೆ ಕಲಿಸಲಾಗಿದ್ದು, ಅಡಿಕೆ ಸಸಿಗಳನ್ನೂ ಜೈಲಿನಲ್ಲಿ ಬೆಳೆಸಲಾಗಿದೆ.

‘‘ಅಡಿಕೆ ಸಸಿಗಳು ಚೆನ್ನಾಗಿ ಬಂದಿದ್ದು, ಅವುಗಳ ಮಾರಾಟಕ್ಕೂ ಕ್ರಮ ವಹಿಸಲಾಗುತ್ತಿದೆ. ಈಗಾಗಲೇ ಆವರಣದಲ್ಲಿ ಬೆಳೆಯುವ ತರಕಾರಿಗಳನ್ನು ಜೈಲಿನಲ್ಲಿ ತಯಾರಿಸುವ ಊಟದಲ್ಲಿ ಸಾಂಬಾರಿಗೆ ಬಳಸಲಾಗುತ್ತಿದೆ’’ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕರು ಬಿ.ಟಿ.ಓಬಳೇಶಪ್ಪ ತಿಳಿಸಿದ್ದಾರೆ.

ಇದರ ಜತೆಗೆ ಕೌಶ್ಯಲಾಭಿವೃದ್ಧಿ ತರಬೇತಿ ಪಡೆದಿರುವ ಮಹಿಳೆಯರನ್ನು ಒಳಗೊಂಡ ಜೈಲುವಾಸಿಗಳು ಹೂಮಾಲೆ ತಯಾರಿ, ಫ್ಲೈವುಡ್ ಕಟ್ಟಿಂಗ್‌ಗಳಿಂದ ಕರಕುಶಲ ವಸ್ತುಗಳ ತಯಾರಿ ಕಾರ್ಯವನ್ನೂ ಮಾಡುತ್ತಿದ್ದಾರೆ.

ಯಾವುದೋ ಅಪರಾಧ ಕೃತ್ಯಗಳ ಮೂಲಕ ಜೈಲುವಾಸಿಗಳಾಗಿರುವವರಿಗೆ ಮನಪರಿರ್ವತನೆಯ ಜತೆಗೆ ಮುಂದೆ ಜೈಲಿನಿಂದ ಬಿಡುಗಡೆಯಾಗುವ ಸಂದರ್ಭ ಕೌಶಲ್ಯಗಳ ಜತೆಗೆ ತಮ್ಮ ಜೀವನಕ್ಕೆ ನೆರವಾಗುವಂತೆ ಈ ರೀತಿಯ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಅವರನ್ನು ತಯಾರುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಅವರ ಕುಟುಂಬಕ್ಕೂ ಒಂದಿಷ್ಟು ನೆರವಾಗಲಿದೆ ಎಂಬುದು ನಮ್ಮ ಆಶಯ ಎನ್ನುತ್ತಾರೆ ಓಬಳೇಶಪ್ಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News