ಈಶ್ವರಪ್ಪ ಬಂಧನವಾಗುವವರೆಗೆ ಹೋರಾಟ: ಹರೀಶ್ ಕುಮಾರ್
ಮಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಿರುವ ಮಾಜಿ ಸಚಿವ ಈಶ್ವರಪ್ಪರ ಬಂಧನವಾಗುವವರೆಗೂ ಜಿಲ್ಲೆಯ ಪ್ರತಿ ಬ್ಲಾಕ್ ಮತ್ತು ವಿಧಾನಸಭಾ ಕ್ಷೇತ್ರ ದಲ್ಲೂ ಹೋರಾಟ ನಡೆಸುವುದಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.16ರಂದು ಮಧ್ಯಾಹ್ನ ೨ಕ್ಕೆ ನಗರದ ಕ್ಲಾಕ್ ಟವರ್ ಬಳಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷೆ ಪದ್ಮಾವತಿ ಮತ್ತಿತರ ಮುಖಂಡರು ಭಾಗವಹಿಸಲಿ ದ್ದಾರೆ. ಇದರೊಂದಿಗೆ ಜಿಲ್ಲಾದ್ಯಂತ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದರು.
ಈಶ್ವರಪ್ಪ ರಾಜೀನಾಮೆ ನೀಡುವ ಮೂಲಕ ತಪ್ಪು ಮಾಡಿದ್ದನ್ನು ಒಪ್ಪಿಕೊಂಡಂತಾಗಿದೆ. ಹಾಗಾಗಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಅಲ್ಲದೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲದಿದ್ದರೆ ಎರಡೂ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಯಾವುದೇ ಕಾರಣಕ್ಕೂ ರಾಜ್ಯ ಸರಕಾರದ ಅಧೀನ ಸಂಸ್ಥೆಗಳಿಂದ ತನಿಖೆ ನಡೆಸಬಾರದು ಎಂದು ಹರೀಶ್ ಕುಮಾರ್ ಒತ್ತಾಯಿಸಿದರು.
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರು ತಿಂಗಳ ಹಿಂದೆಯೇ ಶೇ.೪೦ ಕಮಿಷನ್ ಆರೋಪ ಮಾಡಿದ್ದರೂ ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಸಂತೋಷ್ ಪಾಟೀಲ್ ಪ್ರಾಣಕಳಕೊಳ್ಳುವಂತಾಯಿತು ಎಂದ ಹರೀಶ್ ಕುಮಾರ್ ಹಿಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಶೇ.೧೦ ಕಮಿಷನ್ ಆರೋಪ ಮಾಡಿದ್ದ ನರೇಂದ್ರ ಮೋದಿಗೆ ಈಗ ಶೇ.೪೦ ಕಮಿಷನ್ ದೂರು ನೀಡಿದರೂ ಯಾಕೆ ತನಿಖೆ ನಡೆಸಲು ಮುಂದಾಗಿಲ್ಲ. ಭ್ರಷ್ಟಾಚಾರ ನಡೆಸುವುದೇ ಬಿಜೆಪಿಯವರ ಉದ್ದೇಶವಾ ಎಂದು ಪ್ರಶ್ನಿಸಿದರು.
ಈಶ್ವರಪ್ಪ ಮೊತ್ತ ಭರಿಸಲಿ: ಸಂತೋಷ್ ಪಾಟೀಲ್ ಮಾಜಿ ಸಚಿವ ಈಶ್ವರಪ್ಪರ ಮೌಖಿಕ ಆದೇಶದ ಮೇರೆಗೆ 4.18 ಕೋ.ರೂ. ಕಾಮಗಾರಿ ನಡೆಸಿದ್ದರಿಂದ ಆ ಮೊತ್ತವನ್ನು ಸರಕಾರದಿಂದ ಭರಿಸದೆ ಈಶ್ವರಪ್ಪ ಅವರಿಂದಲೇ ಭರಿಸಬೇಕು. ಈಶ್ವರಪ್ಪ ಅವರ ಆಸ್ತಿ ಮುಟ್ಟುಗೋಲು ಹಾಕಿ ಹಣ ನೀಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸಿಗರು ಜೈಲಿನೊಳಗಿರಬೇಕಿತ್ತು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಪ್ರತಿಕ್ರಿಯಿಸಿದ ಹರೀಶ್ ಕುಮಾರ್, ಈಗ ರಾಜ್ಯ ಮತ್ತು ಕೇಂದ್ರದಲ್ಲೂ ಬಿಜೆಪಿಯದ್ದೇ ಸರಕಾರವಿದೆ. ಸುಮ್ಮನೆ ಆರೋಪ ಮಾಡುವ ಬದಲು ಬಂಧಿಸಲಿ ಜೈಲಿಗಟ್ಟಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಐವನ್ ಡಿಸೋಜ, ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಪಕ್ಷದ ಮುಖಂಡರಾದ ನೀರಜ್‌ಪಾಲ್, ಶುಭೋದಯ ಆಳ್ವ, ಕೃಪಾ ಅಮರ್ ಆಳ್ವ, ಆಶಿತ್ ಪಿರೇರಾ, ದೀಕ್ಷಿತ್ ಉಪಸ್ಥಿತರಿದ್ದರು.