ಮ.ಪ್ರ.: 60 ಮಂದಿಯ ಗುಂಪಿನಿಂದ ಮುಸ್ಲಿಂ ಕುಟುಂಬದ ಮೇಲೆ ದಾಳಿ, ಕಲ್ಲುತೂರಾಟ
ಹೊಸದಿಲ್ಲಿ, ಎ.15: ರಾಮನವಮಿಯಂದು ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಮಧ್ಯಪ್ರದೇಶದ ಖಾರ್ಗಾಂವ್ ಪಟ್ಟಣದಲ್ಲಿ 60ಕ್ಕೂ ಅಧಿಕ ಸಂಘಪರಿವಾರದ ಬೆಂಬಲಿಗರ ಗುಂಪೊಂದು ಮುಸ್ಲಿಂ ಕುಟುಂಬವೊಂದರ ಮನೆಯ ಮೇಲೆ ದಾಳಿ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಮಂಗಳವಾರ ಸಂಜೆ ಇಫ್ತಾರ್ ಸಂದರ್ಭ ಆಹಾರ ಸೇವಿಸಲು ಸಿದ್ಧತೆ ನಡೆಸುತ್ತಿದ್ದಾಗ ದುಷ್ಕರ್ಮಿಗಳು ಅವರ ಮನೆಗೆ ನುಗ್ಗಿ ಕಲ್ಲುತೂರಾಟ ನಡೆಸಿದ್ದಾರೆ.
22 ವರ್ಷ ವಯಸ್ಸಿನ ಅಬ್ದುಲ್ ಮಲಿಕ್ ಅವರ ನಿವಾಸಕ್ಕೆ ಹಿಂಬಾಗಿಲಿನ ಮೂಲಕ ನುಗ್ಗಿದ ದುಷ್ಕರ್ಮಿಗಳು, ಮನೆಯಲ್ಲಿದ್ದವರ ಮೇಲೆ ಕಲ್ಲುತೂರಾಟ ನಡೆಸಿದೆ. ಮನೆಯ ಮುಂದಿನ ಹಾಗೂ ಹಿಂದಿನ ಬಾಗಿಲುಗಳನ್ನು ಅವರು ಒಡೆದು ಹಾಕಿದ್ದಾರೆ. ಮಲಿಕ್ ಅವರ ಕುರುಡು ತಂದೆ ಹಾಗೂ ವೃದ್ಧ ತಾಯಿಯವರಿಗೂ ಕಲ್ಲುಗಳನ್ನು ಎಸೆದಿದ್ದಾರೆ.
‘‘ನಾವು ಮನೆಯಲ್ಲಿ ಇಫ್ತಾರ್ಗಾಗಿ ಕುಳಿತಿದ್ದಾಗ ನಮ್ಮ ಮನೆಯ ಹೊರಭಾಗದಲ್ಲಿ 15 ಮಂದಿಯ ಗುಂಪೊಂದು ಜೈಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿರುವುದನ್ನು ಕೇಳಿದೆವು. ಶೀಘ್ರದಲ್ಲೇ ಇನ್ನಷ್ಟು ಜನರು ಅವರೊಂದಿಗೆ ಸೇರಿಕೊಂಡಿದ್ದರಿಂದ ಗುಂಪಿನಲ್ಲಿದ್ದ ಸಂಖ್ಯೆ 60ಕ್ಕೇರಿತು. ಅವರೆಲ್ಲರ ಬಳಿ ಕಲ್ಲುಗಳು ಹಾಗೂ ಭರ್ಚಿಗಳಿದ್ದವು. ಅವರೆಲ್ಲರೂ ನಮ್ಮ ಮನೆಯ ಮೇಲೆ ಕಲ್ಲುಗಳನ್ನೆಸೆಯತೊಡಗಿದರು’’ ಎಂದು ಮಲಿಕ್ ಅವರು ಅಂದು ನಡೆದ ಘಟನೆಯನ್ನು ವಿವರಿಸುತ್ತಾರೆ.
‘‘ಜೈಶ್ರೀರಾಮ್ ಎಂದು ಕೂಗುವಂತೆಯೂ ಗೂಂಡಾಗಳು ನಮ್ಮನ್ನು ಬಲವಂತಪಡಿಸಿದರು. ನಾವು ಅದಕ್ಕೆ ಪ್ರತಿಭಟಿಸಿದಾಗ ಅವರು ನನ್ನ ಸೋದರಿಯ ಮೇಲೆ ಅತ್ಯಾಚಾರಗೈಯುವ ಬೆದರಿಕೆಯೊಡ್ಡಿದರು. ಕಲ್ಲುತೂರಾಟದಲ್ಲಿ ನನ್ನ ಚಿಕ್ಕಪ್ಪನಿಗೆ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಅವರ ತಲೆಗೆ 10 ಹೊಲಿಗೆಗಳನ್ನು ಹಾಗೂ ಕಣ್ಣಿನ ಕೆಳಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ’’ ಎಂದವರು ಹೇಳಿದ್ದಾರೆ.
ಕಲ್ಲು ತೂರಾಟದಲಲಿ ಮಲಿಕ್ ಅವರ ಆರು ತಿಂಗಳ ಗರ್ಭಿಣಿ ತಂಗಿಗೂ ತಲೆಗೆ ಪೆಟ್ಟಾಗಿದೆ. ಗರ್ಭಿಣಿ ತಂಗಿಯ ಹೊಟ್ಟೆಯ ಭಾಗಕ್ಕೆ ಹಲವಾರು ಸಲ ದುಷ್ಕರ್ಮಿಗಳು ಒದೆದಿದ್ದಾರೆಂದು ಮಲಿಕ್ ಆರೋಪಿಸಿದ್ದಾರೆ. ನನ್ನ ಮನೆಯನ್ನು ಹಾಳುಗೆಡವಲಾಗಿದೆ ಹಾಗೂ ನನ್ನ ಸೋದರಿಯ ಮದುವೆಗಾಗಿ ಉಳಿಸಿದ್ದ ಹಣವನ್ನು ಕೂಡಾ ಲೂಟಿ ಮಾಡಲಾಗಿದೆ ಎಂದು ಮಲಿಕ್ ಕಣ್ಣೀರು ಸುರಿಸುತ್ತಾ ಹೇಳುತ್ತಾರೆ.
ಇದಕ್ಕೂ ಎರಡು ದಿನಗಳ ಹಿಂದೆ, ರವಿವಾರದಂದು ಖಾರ್ಗಾಂವ್ ಪಟ್ಟದಲ್ಲಿ ರಾಮನವಮಿ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಕೋಮುಪ್ರಚೋದಕ ಹಾಡುಗಳಿಗೆ ನರ್ತಿಸುತ್ತಾ ಮೆರವಣಿಗೆ ನಡೆಸುತ್ತಿದ್ದ ಸಂದರ್ಭ ಘರ್ಷಣೆ ಭುಗಿಲೆದ್ದಿತ್ತು. ರಾಮನವಮಿ ರ್ಯಾಲಿ ಸಂದರ್ಭ ಗಲಭೆಯಲ್ಲಿ ಶಾಮೀಲಾಗಿ್ದರೆಂದು ಆರೋಪಿಸಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಲವಾರು ಮಂದಿಯ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಗಲಭೆ ಸಂದರ್ಭ ನಗರದಲ್ಲಿ ಕರ್ಫ್ಯೂ ಹೇರಿಕೆಯಾದ ಸಂದರ್ಭ ಅವಶ್ಯಕ ಸಾಮಾಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಗೆ ಹೋಗಲು ಯತ್ನಿಸಿದ ಮುಸ್ಲಿಮರ ನಿವಾಸಳನ್ನು ಮಧ್ಯಪ್ರದೇಶ ಸರಕಾರದ ಗುರಿಯಿರಿಸಿದೆ ಎಂದವರು ಹೇಳಿದರು.
ಕೃಪೆ: Siasat.com