ಅಂಬೇಡ್ಕರ್ ಚಿಂತನೆಯನ್ನು ವಿರೂಪಗೊಳಿಸುತ್ತಿರುವವರು!

Update: 2022-04-16 10:38 GMT

ಗುರುವಾರ ದೇಶಾದ್ಯಂತ ಭರ್ಜರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ ನಡೆಯಿತು. ಸರಕಾರ ಒಲ್ಲದ ಮನಸ್ಸಿನಿಂದ ಇದರಲ್ಲಿ ಭಾಗಿಯಾಗಿದೆ. ಅಂಬೇಡ್ಕರ್ ಜಯಂತಿ ಆಚರಣೆಯೆಂದರೆ ಅಂಬೇಡ್ಕರ್ ಪ್ರತಿಮೆಗಳಿಗೆ ಹಾರ ಹಾಕುವುದೆಂದು ಭಾವಿಸಿರುವ ಸರಕಾರದಿಂದ ಅದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ದೇಶ ಅಂಬೇಡ್ಕರ್ ಚಿಂತನೆಯ ಕುರಿತಂತೆ ಜಾಗೃತವಾಗಿದೆ. ವರ್ಷದಿಂದ ವರ್ಷಕ್ಕೆ ಅಂಬೇಡ್ಕರ್ ಮುನ್ನೆಲೆಗೆ ಬರುತ್ತಿರುವುದನ್ನು ಗಮನಿಸಿರುವ ಆರೆಸ್ಸೆಸ್‌ನಂತಹ ಸಂಘಟನೆಗಳು ಮುಂದಿನ ದಿನಗಳಲ್ಲಿ ತಮ್ಮದೇ ಕಚೇರಿಗಳಲ್ಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಮುಂದಾದರೆ ಅಚ್ಚರಿಯೇನೂ ಇಲ್ಲ. ಜೊತೆಗೆ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯೊಂದನ್ನು ನಿರ್ಮಿಸಿ, ಅಂಬೇಡ್ಕರ್ ಅನುಯಾಯಿಗಳನ್ನು ಮಂಕು ಮರುಳು ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಒಂದೆಡೆ ದೇಶ ಅಂಬೇಡ್ಕರ್ ಜಯಂತಿಯನ್ನು ಸಂಭ್ರಮಿಸುತ್ತಿರುವಾಗಲೇ ಅಲ್ಲಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ವಿರೂಪಗೊಳಿಸಿರುವ ಪ್ರಕರಣಗಳು ವರದಿಯಾಗಿವೆ ಮತ್ತು ಈ ಪ್ರಕರಣಗಳು ಸ್ಥಳೀಯ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಅಂಬೇಡ್ಕರ್ ಬಗ್ಗೆ ಕೆಟ್ಟದಾಗಿ ಬರೆದು ಕೆಲವರು ತಮ್ಮ ವಿಕೃತಿಯನ್ನು ಮೆರೆದಿದ್ದಾರೆ. ಇವರೆಲ್ಲರೂ ಆಳದಲ್ಲಿ ಜಾತೀಯವಾದಿಗಳು. ಶೋಷಿತ ಸಮುದಾಯ ತಲೆಯೆತ್ತಿ, ಸ್ವಾಭಿಮಾನದಿಂದ ಬದುಕುವುದನ್ನು ನಿರಾಕರಿಸುವವರು. ಅಂಬೇಡ್ಕರ್ ದೆಸೆಯಿಂದಾಗಿ ಈ ದೇಶದ ದಲಿತರು, ಶೋಷಿತ ವರ್ಗಗಳು ಎಲ್ಲರೊಂದಿಗೆ ಸರಿಸಮಾನವಾಗಿ ಬದುಕುತ್ತಿರುವುದನ್ನು ಕಂಡು ಉರಿದು, ಅಂಬೇಡ್ಕರ್ ಅವರನ್ನು ನಿಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಅಲ್ಲಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ವಿರೂಪಗೊಳಿಸುವ ಯತ್ನಗಳೂ ನಡೆಯುತ್ತಿವೆ.

ಅಂಬೇಡ್ಕರ್ ಎಲ್ಲ ವೈದಿಕ ಪ್ರತಿಮೆಗಳನ್ನು ಮುರಿದು ಮುಂದಕ್ಕೆ ನಡೆದವರು. ಇಂದು ತನ್ನದೇ ಪ್ರತಿಮೆಗಳನ್ನು ಬೀದಿ ಬೀದಿಯಲ್ಲಿ ನಿಲ್ಲಿಸಿರುವುದನ್ನು ನೋಡಿದರೆ ಅವರೇ ಅದನ್ನು ಒಡೆದು ಹಾಕುತ್ತಿದ್ದರೋ ಏನೋ. ಅಂಬೇಡ್ಕರ್ ಚಿಂತನೆಗಳಿಗೆ ಗೋರಿ ಕಟ್ಟಿ ಅದರ ಮೇಲೆ ಬೃಹತ್ ಪ್ರತಿಮೆಗಳನ್ನು ನಿಲ್ಲಿಸಿ ಹೂವಿನ ಹಾರಗಳನ್ನು ಹಾಕುವವರ ಕುರಿತಂತೆ ನಾವಿಂದು ಎಚ್ಚರದಿಂದ ಇರಬೇಕಾಗಿದೆ. ಅಂಬೇಡ್ಕರ್ ಚಿಂತನೆಗಳನ್ನು ವಿರೋಧಿಸುವ ಮನಸ್ಸುಗಳು ಇಂದು ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿವೆ. ಇಂತಹ ಸರಕಾರ ಅಂಬೇಡ್ಕರ್ ಬಗ್ಗೆ ಮಾತನಾಡುತ್ತದೆ, ಅಂಬೇಡ್ಕರ್ ಪ್ರತಿಮೆಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಹೂ ಹಾರಗಳನ್ನು ಹಾಕುತ್ತದೆೆ ಎನ್ನುವಾಗ ನಾವು ಹೆಚ್ಚು ಜಾಗರೂಕರಾಗಿರಬೇಕು. ಒಂದೆಡೆ, ಬೀದಿ ಬೀದಿಯಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ನಿಲ್ಲಿಸುತ್ತಾ ಇನ್ನೊಂದೆಡೆ, ಹಕ್ಕುಗಳನ್ನು ಕೇಳಿ ಬೀದಿಗಿಳಿಯುವ ದಲಿತರನ್ನು ಜೈಲಿಗೆ ತಳ್ಳಿದರೆ ಅದರಿಂದ ಅಂಬೇಡ್ಕರ್‌ಗೆ ನ್ಯಾಯ ದೊರಕಿದಂತಾಗುವುದಿಲ್ಲ. ಅಂಬೇಡ್ಕರ್ ಪ್ರತಿಮೆಗಳನ್ನು ವಿರೂಪಗೊಳಿಸಿ ತಮ್ಮ ವಿಕೃತಿಯನ್ನು ಮೆರೆಯುವವರ ಬಗ್ಗೆ ಇರುವ ಕೋಪ ತಾಪಗಳನ್ನು ನಾವು ಅಂಬೇಡ್ಕರ್ ಚಿಂತನೆಗಳನ್ನು ವಿರೂಪಗೊಳಿಸುವವರ ವಿರುದ್ಧ ತಿರುಗಿಸಬೇಕಾಗಿದೆ. ಗಣರಾಜ್ಯೋತ್ಸವ ದಿನ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದ ನ್ಯಾಯಾಧೀಶರ ವಿರುದ್ಧ ಕರ್ನಾಟಕದಲ್ಲಿ ದೊಡ್ಡ ಚಳವಳಿ ನಡೆಯಿತು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನವನ್ನೇ ತೆಗೆದುಹಾಕಿ ಆ ಜಾಗದಲ್ಲಿ ಮನುಸಿದ್ಧಾಂತವನ್ನು ತಂದು ಕೂರಿಸುವ ಪ್ರಯತ್ನ ನಡೆಯುತ್ತಿರುವುದರ ವಿರುದ್ಧ ಜನಾಂದೋಲ ರೂಪಿಸುವುದನ್ನು ಮರೆತಿದ್ದೇವೆ. ಮನುವಾದ ಮುನ್ನೆಲೆಗೆ ಬಂದು ದೇಶವನ್ನು ಹಂತಹಂತವಾಗಿ ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಭೀಮ ಚಿಂತನೆಗಳು ಅದಕ್ಕೆ ಪ್ರತಿರೋಧ ರೂಪದಲ್ಲಿ ದೇಶಾದ್ಯಂತ ಬೆಳೆಯುತ್ತಿರುವುದು ಸಮಾಧಾನಕರ ಅಂಶವಾಗಿದೆ.

ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ರನ್ನು ಗೌರವಿಸುವ ಹೆಸರಿನಲ್ಲೇ ಅವರನ್ನು ಅಗೌರವಿಸುವ, ಅವರ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುವ ಕೆಲಸಗಳನ್ನು ಮನುವಾದಿಗಳು ಮಾಡುತ್ತಾ ಬರುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಗಳನ್ನು ನೇರವಾಗಿ ಎದುರಿಸಲು ಧೈರ್ಯವಿಲ್ಲದೆ, ಅಂಬೇಡ್ಕರ್ ಅವರನ್ನು ಗೌರವಿಸುವಂತೆ ನಟಿಸುತ್ತಲೇ ಅವರ ಚಿಂತನೆಗಳನ್ನು ತಿರುಚಿ ಜನಸಾಮಾನ್ಯರಿಗೆ ಹಂಚುವ ಪ್ರಯತ್ನವೊಂದು ದೇಶಾದ್ಯಂತ ನಡೆಯುತ್ತಿದೆ. ಮರೆಯಲ್ಲಿ ಅಂಬೇಡ್ಕರ್ ಅವರನ್ನು ಸರ್ವರೀತಿಯಲ್ಲಿ ದಮನಿಸಲು ಸಂಚುಗಳನ್ನು ರೂಪಿಸುತ್ತಲೇ ಇರುವವರು ಅಂಬೇಡ್ಕರ್‌ನ್ನು ಸಾರ್ವಜನಿಕವಾಗಿ ಹೊಗಳಬಲ್ಲರು. ಅಂಬೇಡ್ಕರ್ ಚಿಂತನೆಗಳೆಂದು ಇವರು ಜನಸಾಮಾನ್ಯರಿಗೆ ಹಂಚುವ ವಿಷಯಗಳಿಗೂ ಸಾಮಾಜಿಕ ನ್ಯಾಯಗಳಿಗೂ ಯಾವ ಸಂಬಂಧವೂ ಇಲ್ಲ. ‘ಅಂಬೇಡ್ಕರ್ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯಾಗಬೇಕು ಎಂದು ಬಯಸಿದ್ದರು’, ‘ಅಂಬೇಡ್ಕರ್ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ್ದರು’, ‘ಅಂಬೇಡ್ಕರ್ ಅವರಿಗೆ ಸಾವರ್ಕರ್ ಬಗ್ಗೆ ಅಪಾರ ಗೌರವವಿತ್ತು’ ಇತ್ಯಾದಿ ಕಪೋಲಕಲ್ಪಿತ ವಿಷಯಗಳನ್ನು ಹರಡಲು ಅವರು ಅಂಬೇಡ್ಕರ್ ಜಯಂತಿಯನ್ನು ಬಳಸಿಕೊಳ್ಳುತ್ತಾರೆ.

‘ಒಂದು ಕೋಟಿ ರೂಪಾಯಿ ಕೊಟ್ಟರೂ ಅಂಬೇಡ್ಕರ್ ಇಸ್ಲಾಮ್ ಧರ್ಮ ಸ್ವೀಕರಿಸಲು ಒಪ್ಪುತ್ತಿರಲಿಲ್ಲ’ ಎಂದು ಭಾಷಣ ಬಿಗಿಯುವ ಇವರು, ಅಂಬೇಡ್ಕರ್ ಇಸ್ಲಾಮ್ ಧರ್ಮವನ್ನು ಯಾಕೆ ಸ್ವೀಕರಿಸಲಿಲ್ಲ ಎಂಬ ವಿಷಯದಲ್ಲಿ ಗಂಟೆಗಟ್ಟಲೆ ಚರ್ಚೆ ನಡೆಸಬಲ್ಲರು. ಆದರೆ ‘ಅಂಬೇಡ್ಕರ್ ಹಿಂದೂ ಧರ್ಮವನ್ನು ಯಾಕೆ ತೊರೆದರು?’ ಎಂಬ ವಿಷಯವನ್ನು ಸರ್ವ ರೀತಿಯಲ್ಲಿ ಮುಚ್ಚಿಡುತ್ತಾರೆ. ದೇವಸ್ಥಾನ ಪ್ರವೇಶದ ವಿಷಯದಲ್ಲಿ ‘‘ಎಲ್ಲಿ ನಮ್ಮ ಸ್ವಾಭಿಮಾನ, ಆತ್ಮಾಭಿಮಾನಕ್ಕೆ ಅವಕಾಶವಿಲ್ಲವೋ ಅಲ್ಲಿ ನಮ್ಮ ಚಪ್ಪಲಿಯನ್ನೂ ಬಿಡಬಾರದು’’ ಎಂಬ ಸ್ಪಷ್ಟ ನಿಲುವನ್ನು ಅಂಬೇಡ್ಕರ್ ತಳೆದಿದ್ದರು. ಇಂದು ದೇಶದ ಸಂವಿಧಾನ ಅಪಾಯದಲ್ಲಿದೆ. ನ್ಯಾಯ ವ್ಯವಸ್ಥೆ ಸಂವಿಧಾನದ ಆಶಯಗಳಿಗೆ ಪೂರಕವಾಗಿ ತೀರ್ಪುಗಳನ್ನು ನೀಡುತ್ತಿಲ್ಲ. ಸರಕಾರ ಸಂವಿಧಾನ ಪ್ರತಿಪಾದಿಸುವ ಸಾಮಾಜಿಕ ನ್ಯಾಯಕ್ಕೆ ಬೆನ್ನು ಹಾಕಿದೆ. ದಲಿತರ ಹಕ್ಕುಗಳನ್ನು ಒಂದೊಂದಾಗಿ ದುರ್ಬಲಗೊಳಿಸಲಾಗುತ್ತಿದೆ. ದಲಿತರನ್ನು ಸಂಘಟಿಸುವ ನಾಯಕರನ್ನು ವ್ಯವಸ್ಥಿತವಾಗಿ ದೇಶದ್ರೋಹದ ಆರೋಪದಲ್ಲಿ ಜೈಲಿಗೆ ತಳ್ಳಲಾಗುತ್ತಿದೆ. ಸಂವಿಧಾನವನ್ನು ಬದಲಿಸುವ ಮಾತುಗಳನ್ನು ಸಾರ್ವಜನಿಕವಾಗಿ ಯಾವ ಎಗ್ಗಿಲ್ಲದೆ ಆಡುವ ಧೈರ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಸಂವಿಧಾನವನ್ನು ತಿರುಚಿ, ದಲಿತರ ಪರವಾಗಿರುವ ಎಲ್ಲ ಕಾನೂನುಗಳನ್ನು ದುರ್ಬಲಗೊಳಿಸಿ, ಮೀಸಲಾತಿಯನ್ನು ಬಲಿಷ್ಠ ಜಾತಿಗಳಿಗೆ ಹಂಚಿ ಅಂಬೇಡ್ಕರ್ ಜಯಂತಿಯಂದು ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವುದೆಂದರೆ ಪರೋಕ್ಷವಾಗಿ ಅಂಬೇಡ್ಕರ್ ಅವರನ್ನು ವ್ಯಂಗ್ಯ ಮಾಡಿದಂತೆ.

ಇಂದು ನಾವು ಅಂಬೇಡ್ಕರ್ ಪ್ರತಿಮೆಗಳು, ಭಾವಚಿತ್ರಗಳ ಬಗ್ಗೆ ಇರುವ ಕಾಳಜಿಯನ್ನು ಅಂಬೇಡ್ಕರ್ ಚಿಂತನೆಗಳ ಬಗ್ಗೆ ವ್ಯಕ್ತಪಡಿಸಬೇಕಾಗಿದೆ. ದಲಿತರು, ಶೋಷಿತರ ಪರವಾಗಿರುವ ಕಾನೂನುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಿರುವುದರ ಬಗ್ಗೆ ಧ್ವನಿಯೆತ್ತಬೇಕಾಗಿದೆ. ಸಣ್ಣ ಲಾಭಕ್ಕಾಗಿ ಅಂಬೇಡ್ಕರ್ ಚಿಂತನೆಗಳನ್ನು ಬಲಿಷ್ಠ ಜಾತಿಗಳಿಗೆ, ಮನುವಾದಿಗಳಿಗೆ ಮಾರಾಟ ಮಾಡುತ್ತಿರುವ ಶೋಷಿತ ಸಮುದಾಯದ ನಾಯಕರ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ. ಅಂಬೇಡ್ಕರ್ ಭಾರತದ ಭವಿಷ್ಯದ ಏಕೈಕ ಆಶಾಕಿರಣವಾಗಿದ್ದಾರೆ. ಆ ಕಿರಣವನ್ನು ಶೋಷಿತರ ಕೈಯಿಂದಲೇ ನಂದಿಸುವ ಮೇಲ್‌ಜಾತಿಗಳ ಸಂಚುಗಳನ್ನು ವಿಫಲಗೊಳಿಸುವುದು ನಮ್ಮ ಮುಂದಿರುವ ಅತಿದೊಡ್ಡ ಸವಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News