ಶ್ರೀಲಂಕಾ ಬಿಕ್ಕಟ್ಟು: ಚೀನಾ-ಭಾರತದ ಮೇಲಾಟ!

Update: 2022-04-15 19:30 GMT

ಶ್ರೀಲಂಕಾದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ, ಭಾರತವು ದೊಡ್ಡ ಪ್ರಮಾಣದ ವಲಸೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದನ್ನು ತಡೆಯುವುದು ರಾಜಕೀಯ ಕಾರಣಗಳಿಂದ ಸಾಧ್ಯವಿಲ್ಲ. ಆದುದರಿಂದ ಶ್ರೀಲಂಕಾಕ್ಕೆ ನೆರವು ನೀಡಬೇಕಾದ ಮತ್ತು ಮೀನುಗಾರಿಕಾ ವಿವಾದವನ್ನು ತಕ್ಷಣ ಪರಿಹರಿಸಬೇಕಾದ ಅನಿವಾರ್ಯತೆಗೆ ಚೀನಾ, ಭಾರತವನ್ನು ತಳ್ಳುತ್ತಿದೆ. ಮತ್ತೊಮ್ಮೆ ಅದು ಶ್ರೀಲಂಕಾ ತಮಿಳರ ಹೋರಾಟವನ್ನು ಪ್ರಚೋದಿಸಿದರೂ ಭಾರತಕ್ಕೆ ಹಾನಿಯಾಗಲಿದೆ. ಇದೊಂದು ಸಂಕೀರ್ಣ ಇಕ್ಕಟ್ಟಿನ ಸ್ಥಿತಿಯಾಗಿದ್ದು, ಇದನ್ನು ಪರಿಹರಿಸುವ ಹೊಣೆ ಸ್ವಯಂಘೋಷಿತ ವಿಶ್ವಗುರುಗಳ ಮೇಲಿದೆ.


ಭಾರತದಿಂದ ನೆರೆಯ ದೇಶವಾದ ಶ್ರೀಲಂಕಾಕ್ಕೆ ಯಾವುದೇ ಮಿಲಿಟರಿ ಆತಂಕವಿಲ್ಲ. ಹಿಂದೆ ಅಂತಹ ಮಧ್ಯಪ್ರವೇಶವಾದುದು ಅಲ್ಲಿನ ಸರಕಾರದ ವಿನಂತಿಯಂತೆ ಮಾತ್ರ. ಆದರೆ, ಅಲ್ಲಿನ ತಮಿಳರ ಕಾರಣದಿಂದ ಭಾರತವು ಅಲ್ಲಿನ ವಿದ್ಯಮಾನಗಳ ಕುರಿತು ಕಣ್ಣುಮುಚ್ಚಿ ಕುಳಿತಿರುವಂತಿಲ್ಲ. ಇದನ್ನು ಮನಗಂಡಿರುವ ಚೀನಾ, ಭಾರತದ ವಿರುದ್ಧ ವ್ಯೆಹಾತ್ಮಕವಾಗಿ ಅಲ್ಲಿ ಪ್ರಭಾವ ಬೀರಲು ಯತ್ನಿಸುತ್ತಾ ಬಂದಿದೆ. ಇದನ್ನೇ ದಾಳ ಮಾಡಿಕೊಂಡು ಶ್ರೀಲಂಕಾ ಕೆಲವೊಮ್ಮೆ ಭಾರತವನ್ನು ಬಳಸಿಕೊಂಡದ್ದೂ ಇದೆ. ಈಗ, ಶ್ರೀಲಂಕಾ ಅತೀ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗ, ಚೀನಾ ಏನು ಮಾಡಬಹುದು? ಭಾರತದ ಚಿಂತೆ ಏನು?

ಶ್ರೀಲಂಕಾ ಮತ್ತು ಭಾರತದ ನಡುವೆ ಬೌದ್ಧ ಧರ್ಮದ ಕಾರಣದಿಂದಾಗಿ ಮತ್ತು ಉತ್ತರದ ತಮಿಳು ಭಾಷಿಕ ಜನರ ಕಾರಣದಿಂದಾಗಿ ಇದ್ದ ಸಂಬಂಧವು ಬೇರೆಬೇರೆ ಕಾಲಘಟ್ಟದಲ್ಲಿ ಅತ್ಯಂತ ಏರುಪೇರನ್ನು ಕಂಡಿದೆ. ಶ್ರೀಲಂಕಾದ ಆಡಳಿತವು ಯಾವ ರಾಜಕೀಯ ಶಕ್ತಿಗಳ ಅಧೀನವಾಗುವುದೋ ಅದಕ್ಕೆ ತಕ್ಕಂತೆ ಎರಡು ದೇಶಗಳ ಸಂಬಂಧವು ಮಿತ್ರತ್ವದಿಂದ ಹಿಡಿದು ತಣ್ಣಗಿನ ಅಸಮಾಧಾನದ ತನಕ ಏರಿಳಿತ ಕಂಡಿದೆ. ಚುಟುಕಾಗಿ ಸ್ವಲ್ಪ ಇತಿಹಾಸವನ್ನು ನೋಡುವುದಾದಲ್ಲಿ ಭಾರತವು ಘೋಷಿತ ಅಲಿಪ್ತ ರಾಷ್ಟ್ರವಾಗಿದ್ದರೂ, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ನಂತರ ರಶ್ಯದ ಜೊತೆಗೆ ಅದರ ಸಂಬಂಧದ ಕಾರಣದಿಂದ ಯುಎಸ್‌ಎ ಅಲ್ಲಿ ಆಗಾಗ ಕೈಯಾಡಿಸಲು ಯತ್ನಿಸಿದ್ದುಂಟು. ವಾಯ್ಸಿ ಆಫ್ ಅಮೆರಿಕ ರೇಡಿಯೊ ಕೇಂದ್ರ ಸ್ಥಾಪನೆ, ಅಲ್ಲಿ ನೌಕಾನೆಲೆ ಸ್ಥಾಪಿಸುವ ಯತ್ನ ಇತ್ಯಾದಿಗಳನ್ನು ಉದಾಹರಣೆಯಾಗಿ ನೀಡಬಹುದು.

ಶ್ರೀಲಂಕಾ ಈ ರೀತಿಯಾಗಿ ತನಗೆ ಸಡ್ಡುಹೊಡೆದು, ಯುಎಸ್‌ಎಗೆ ಹತ್ತಿರವಾಗಲು ಯತ್ನಿಸಿದಾಗಲೇ ಅದಕ್ಕೊಂದು ಪಾಠ ಕಲಿಸುವ ಸಲುವಾಗಿಯೇ ಭಾರತವು ಇಂದಿರಾಗಾಂಧಿಯವರ ಕಾಲದಲ್ಲಿ ಅಲ್ಲಿನ ತಮಿಳರ ಪ್ರತ್ಯೇಕ ರಾಷ್ಟ್ರ ಅಥವಾ ‘ಈಳಂ’ ಪರ ಸಶಸ್ತ್ರ ಹೋರಾಟದ ಗುಂಪುಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನೀಡಲು ಆರಂಭಿಸಿತ್ತು. ಆದರೆ, ನಂತರ ಈ ಈಳಂ ಮಹತ್ವಾಕಾಂಕ್ಷೆ ಬೆಳೆದು, ತಮಿಳುನಾಡು ಮತ್ತು ಜಾಫ್ನಾ ಸೇರಿದಂತೆ ಉತ್ತರ ಶ್ರೀಲಂಕಾದ ಭಾಗಗಳನ್ನು ಸೇರಿಸಿದ ಮಹಾ ತಮಿಳುನಾಡಿನ ಪರಿಕಲ್ಪನೆ ಹುಟ್ಟಿದಾಗ ತನ್ನ ಭದ್ರತೆಗೆ ಇರುವ ಅಪಾಯವನ್ನು ಮನಗಂಡ ಭಾರತವು ಈಳಂ ಹೋರಾಟವನ್ನು ಹತ್ತಿಕ್ಕಿ, ಶ್ರೀಲಂಕಾ ಸರಕಾರ ಮತ್ತು ತಮಿಳು ಗುಂಪುಗಳ ನಡುವೆ ಸಂಧಾನ ಏರ್ಪಡಿಸಲು ಮುಂದಾಯಿತು; ಮಾತ್ರವಲ್ಲ, ರಾಜೀವ್ ಗಾಂಧಿ ಕಾಲದಲ್ಲಿ ಅಲ್ಲಿನ ಸರಕಾರದ ಕೋರಿಕೆಯಂತೆ ಶಾಂತಿಪಾಲನಾ ಪಡೆ (ಐಪಿಕೆಎಫ್) ಕಳಿಸಲು ನಿರ್ಧರಿಸಿತು. ಇದು ಅಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ)ನ ಬಲಗುಂದಿಸುವಲ್ಲಿ ಸಫಲವಾದರೂ, ದೊಡ್ಡ ಪ್ರಮಾಣದ ಸಾವುನೋವು ಅನುಭವಿಸಿ ಹಿಂದೆ ಬರಬೇಕಾಯಿತು. ಇವೆಲ್ಲದರ ಪರಿಣಾಮವಾಗಿ ರಾಜೀವ್ ಗಾಂಧಿ ಹತ್ಯೆ ನಡೆದು ಎಲ್‌ಟಿಟಿಇಗೆ ಭಾರತದಲ್ಲಿದ್ದ ಜನಪ್ರಿಯ ಬೆಂಬಲ ಇಲ್ಲವಾಗಿ ಆದರ ಪತನ ಆರಂಭವಾಯಿತು.

ನಂತರದಲ್ಲಿ ಬಲಪಂಥೀಯ ಬೌದ್ಧ ಪುರೋಹಿತಶಾಹಿಯ ಕುಮ್ಮಕ್ಕಿನ ಜೊತೆ ಅಧಿಕಾರಕ್ಕೆ ಬಂದ ಮಹಿಂದ ರಾಜಪಕ್ಸ, ತಮಿಳು ನಾಗರಿಕರ ಮೇಲೆಯೂ ನಿರ್ದಯ ದಮನ ನಡೆಸಿ, ಎಲ್‌ಟಿಟಿಇಯನ್ನು ನಾಶಮಾಡಿದರು. ವೇಲುಪಿಳ್ಳೈ ಪ್ರಭಾಕರನ್ ಸಾವಿನ ಬಳಿಕ ತಮಿಳರ ಹೋರಾಟದ ಸದ್ದಡಗಿದರೂ, ಹಳೆಯ ಗಾಯಗಳು ಉಳಿದವು. ಅಲ್ಪಸಂಖ್ಯಾತ ತಮಿಳರು, ಮುಸ್ಲಿಮರು ಮತ್ತು ಕ್ರೈಸ್ತರನ್ನೇ ದೇಶದ್ರೋಹಿಗಳೆಂದು ಬಿಂಬಿಸುತ್ತಾ, ನಕಲಿ ದೇಶಪ್ರೇಮದ ಬಲದಿಂದ 2019ರ ಚುನಾವಣೆಯಲ್ಲಿ ಮಹಿಂದ ತಮ್ಮ ಮಿಲಿಟರಿ ಹಿನ್ನೆಲೆಯ ಗೊತಬಯ ರಾಜಪಕ್ಸ ಅಧ್ಯಕ್ಷರಾದರೆ, ಪ್ರಧಾನಿಯಾದುದು ಮಹಿಂದ ಮತ್ತು ಹಣಕಾಸು ಮಂತ್ರಿಯಾದುದು ಇನ್ನೊಬ್ಬ ತಮ್ಮ ಬಾಸಿಲ್ ರಾಜಪಕ್ಸ. ಸಂಪೂರ್ಣವಾಗಿ ಬಹುಸಂಖ್ಯಾತ ಸಿಂಹಳೀಯರ ದಬ್ಬಾಳಿಕೆಯ ಭ್ರಷ್ಟ ಆಡಳಿತ ನೀಡಿದ ಈ ಕುಟುಂಬ ಶ್ರೀಲಂಕಾವನ್ನು ಎಷ್ಟರ ಮಟ್ಟಿಗೆ ದಿವಾಳಿಯ ಅಂಚಿಗೆ ತಂದಿದೆ ಎಂದರೆ, ಇದನ್ನು ಬರೆಯುವ ಹೊತ್ತಿಗೆ ಸರಕಾರ 2,500 ಕೋಟಿ ಡಾಲರ್ ವಿದೇಶಿ ಸಾಲವನ್ನು ಕಟ್ಟಲಾಗದು ಎಂದು ಅಧಿಕೃತವಾಗಿಯೇ ಘೋಷಿಸಿ ಕೈಯೆತ್ತಿದೆ. ಅದು ಈ ವರ್ಷವೇ 700 ಕೋಟಿ ಡಾಲರ್ ಕಂತು ಕಟ್ಟಬೇಕಿದ್ದು, ಭಾರತ, ಚೀನಾ ಮತ್ತು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯತ್ತ ಕೈಚಾಚಿದೆ. ಭಾರತ ಮತ್ತು ಚೀನಾದ ಹಳೆಯ ಸಾಲಗಳೇ ಬಾಕಿ ಇರುವುದರಿಂದ ಹೊಸ ನಗದು ಸಾಲಕ್ಕೆ ನಿರಾಕರಿಸಿದ್ದು, ತಮ್ಮತಮ್ಮ ದೇಶದಿಂದಲೇ ಕೊಳ್ಳುವ ವಸ್ತುರೂಪದ ಸಾಲಕ್ಕೆ ಮಾತ್ರ ಮುಂದಾಗಿವೆ.

ಈ ಹಿನ್ನೆಲೆಯಲ್ಲಿ ಮತ್ತು ಇಂತಹ ಸ್ಥಿತಿಯಲ್ಲಿ ಭಾರತ ಮತ್ತು ಚೀನಾದ ಮೇಲಾಟ ನಡೆದಿದೆ. ಇದನ್ನು ತಿಳಿದುಕೊಳ್ಳಬೇಕಾದರೆ, ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಚೀನಾದ ಚಟುವಟಿಕೆಗಳನ್ನು ಗಮನಿಸಬೇಕು. 2009ರಲ್ಲಿ ಅಂತರ್ಯುದ್ಧ ನಿಂತ ಬಳಿಕ ದಕ್ಷಿಣದ ಸಿಂಹಳೀಯ ಪ್ರದೇಶಗಳಲ್ಲಿ ಆದು ಪ್ರಭಾವವನ್ನು ಹೆಚ್ಚಿಸಿತ್ತು. ಕಾರಣ: ಎಲ್‌ಟಿಟಿಇಯನ್ನು ಬಗ್ಗುಬಡಿಯಲು ಅದು ನೀಡಿದ್ದ ನೆರವು. ಆದರೆ, ಹೆಚ್ಚಿದ ಅತಿಪ್ರಭಾವವೇ ಶ್ರೀಲಂಕಾದ ರಾಷ್ಟ್ರೀಯವಾದಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಇದು ರಾಜಪಕ್ಸ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಉದಾರಣೆಗೆ, ಮೇ 2021ರಲ್ಲಿ ಸರಕಾರ ಕೊಲಂಬೊ ಬಂದರು ನಗರ ಆರ್ಥಿಕ ಆಯೋಗ (ಇಉಇ) ಕಾಯ್ದೆಯನ್ನು ಜಾರಿಗೊಳಿಸಿತು. ಇದು ಶ್ರೀಲಂಕಾದ ಸ್ವಾಯತ್ತತೆಯನ್ನೇ ಅಡವಿಟ್ಟು ಚೀನಾ ಕಾಲನಿಯ ಸ್ಥಾಪನೆಗೆ ಕಾರಣವಾಗುವುದೆಂಬ ಸಂಶಯ ಹುಟ್ಟಿಸಿ, ಬೌದ್ಧ ಸನ್ಯಾಸಿಗಳ ತೀವ್ರ ವಿರೋಧಕ್ಕೆ ಕಾರಣವಾಯಿತು. ಯೋಜನೆ ನನೆಗುದಿಗೆ ಬಿತ್ತು.

ಸೆಪ್ಟಂಬರ್ 2021ರಲ್ಲಿ ಶ್ರೀಲಂಕಾ ಚೀನಾದ 20,000 ಟನ್ ಸಾವಯವ ಗೊಬ್ಬರವನ್ನು ಆದರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಇದೆಯೆಂಬ ಕಾರಣ ನೀಡಿ ನಿಷೇಧಿಸಿತು. ಪ್ರತೀಕಾರವಾಗಿ ಚೀನಾ, ಶ್ರೀಲಂಕಾದ ಸರಕಾರಿ ಬ್ಯಾಂಕಾದ ಪೀಪಲ್ಸ್ ಬ್ಯಾಂಕ್ ಆಫ್ ಶ್ರೀಲಂಕಾವನ್ನು ಕಪ್ಪುಪಟ್ಟಿಗೆ ಸೇರಿಸಿತು. ಜೊತೆಗೆ 67 ಲಕ್ಷ ಡಾಲರ್ ಪರಿಹಾರವನ್ನೂ ಕೋರಿತು. ಮತ್ತೆ ನವೆಂಬರ್‌ನಲ್ಲಿ ಅದು ಚೀನಾದ ಕಂಪೆನಿಯ ಮರುಬಳಕೆ ಇಂಧನ ಯೋಜನೆಯನ್ನು ರದ್ದುಪಡಿಸಿತು. ಇದು ಭಾರತದ ರಾಮೇಶ್ವರದಿಂದ ಕೇವಲ 50 ಕಿ.ಮೀ. ದೂರದಲ್ಲಿರುವುದರಿಂದ ಭಾರತವು ಭದ್ರತಾ ಕಾರಣ ನೀಡಿ ಶ್ರೀಲಂಕಾ ಸರಕಾರದ ಮೇಲೆ ಒತ್ತಡ ಹೇರಿತ್ತು. ಇದಕ್ಕಾಗಿ ಚೀನಾ ರಾಯಭಾರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂರನೇ ಶಕ್ತಿಯನ್ನು ದೂರಿತ್ತು. ಇವೆಲ್ಲಾ ಭಾರತವು ಚೀನಾದ ಗಡಿಯಲ್ಲಿ ಎದುರಿಸುತ್ತಿರುವ ಕಿರುಕುಳಗಳಿಗೆ ಕಾರಣಗಳಾಗಿದ್ದರೆ ಆಶ್ಚರ್ಯವಿಲ್ಲ. ಶ್ರೀಲಂಕಾದ ಬಹುಸಂಖ್ಯಾತ ಸಿಂಹಳೀಯರ ರಾಷ್ಟ್ರವಾದದ ರಾಜಕೀಯ ಯೋಜನೆಗೆ ಚೀನಾದ ನೆರವು ಪಡೆದಿದ್ದ ರಾಜಪಕ್ಸಗಳು, ಅದೇ ಬಲಪಂಥೀಯರು ಚೀನಾದ ವಿರುದ್ಧ ಎದುರು ಬಿದ್ದಾಗ ಆಡಕೊತ್ತಿಗೆ ಸಿಲುಕಿ, ಭಾರತದ ಬಲಪಂಥೀಯ ಸರಕಾರದ ನೆರವಿನೊಂದಿಗೆ ಚೀನಾದ ಪ್ರಭಾವವನ್ನು ಸಮತೂಕ ಮಾಡುವ ಯತ್ನ ನಡೆಸಿದ್ದರು. ಅದಕ್ಕಾಗಿ ಕಳೆದ ಆಗಸ್ಟ್‌ನಲ್ಲಿ 18 ತಿಂಗಳ ವಿಳಂಬದ ನಂತರ ಶ್ರೀಲಂಕಾ ಭಾರತಕ್ಕೆ ತನ್ನ ಹೈಕಮಿಷನರ್‌ರನ್ನು (ರಾಯಭಾರಿ) ಕಳಿಸಿತ್ತು. ನಂತರ ಅಕ್ಟೋಬರ್‌ನಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಕೊಲಂಬೊಗೆ ಭೇಟಿ ನೀಡಿದ್ದು, ನವೆಂಬರ್‌ನಲ್ಲಿ ಬಾಸಿಲ್ ರಾಜಪಕ್ಸ ದಿಲ್ಲಿಗೆ ಭೇಟಿ ನೀಡಿದ್ದು, ಎರಡೂ ದೇಶಗಳ ಸಾಂಸ್ಕೃತಿಕ ಸಮಾನತೆ, ಬೌದ್ಧ ಧರ್ಮ ಸಂಬಂಧಗಳನ್ನು ಮರುಸ್ಥಾಪಿಸುವ ಕಾರ್ಯಕ್ರಮ ಪಟ್ಟಿಯ ಬಿಡುಗಡೆಯೂ ಆಯಿತು.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು: ಭಾರತದಲ್ಲಿ ಬೌದ್ಧ ಧರ್ಮವು ದಲಿತರ ಕಾರಣದಿಂದ ತಳಮಟ್ಟದ ಪ್ರಾತಿನಿಧಿಕ ಧರ್ಮವಾಗಿ ಉಳಿದಿದ್ದರೆ, ಶ್ರೀಲಂಕಾದಲ್ಲಿ ಆದು ಆಕ್ರಮಣಕಾರಿ ಬಲಪಂಥೀಯ ಪುರೋಹಿತಶಾಹಿಯಾಗಿದೆ. ಅಂದರೆ, ಆಲ್ಲಿನ ಪುರೋಹಿತಶಾಹಿ, ಸರ್ವಾಧಿಕಾರಿ, ಧರ್ಮದ ಅಮಲಿನ ರಾಜಕಾರಣಕ್ಕೂ, ಭಾರತದ ಪ್ರಸ್ತುತ ಹಿಂದುತ್ವದ ಅಮಲಿನ ರಾಜಕಾರಣಕ್ಕೂ ಅಣ್ಣತಮ್ಮ ಸಂಬಂಧ! ಆದರೂ ಶ್ರೀಲಂಕಾ, ಟ್ರಿಂಕಾಮಲಿಯ ಆಯಿಲ್ ಟ್ಯಾಂಕರ್ ಫಾರ್ಮ್ ಯೋಜನೆಯಿಂದ ಹಿಂದೆ ಸರಿಯದೆ, ಭಾರತದ ಜೊತೆ ಚೌಕಾಸಿಯ ಹಾದಿ ಉಳಿಸಿಕೊಂಡಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಹಿಂದಿನಿಂದಲೂ ನಡೆದು ಬಂದಿರುವುದು ಎರಡೂ ದೇಶಗಳ ನಡುವಿನ ಪಾಕ್ ಜಲಸಂಧಿಯಲ್ಲಿ ಮೀನುಗಾರಿಕೆ ವಿವಾದ. ಎರಡೂ ಕಡೆಗಳ ತಮಿಳರಲ್ಲಿ ಭಾವನಾತ್ಮಕ ಸಂಬಂಧ ಇದ್ದರೂ, ಎರಡೂ ದೇಶಗಳ ನಡುವೆ ಅಕ್ರಮ ವಲಸೆ ಮತ್ತು ಕಳ್ಳಸಾಗಣೆ ಒಂದು ವ್ಯವಸ್ಥಿತ ದಂಧೆಯಾಗಿದ್ದರೂ, ಸಾಕಷ್ಟು ಆಧುನಿಕ ಯಾಂತ್ರೀಕೃತ ದೋಣಿಗಳಿರುವ ಭಾರತೀಯ ಮೀನುಗಾರರು ತಮ್ಮ ಭಾಗಕ್ಕೆ ಬಂದು ತಮ್ಮ ಹೊಟ್ಟೆಗೆ ಹೊಡೆಯುತ್ತಾರೆ; ದೊಡ್ಡಣ್ಣನ ರೀತಿ ವರ್ತಿಸುತ್ತಿದ್ದಾರೆ ಎಂಬುದು ಶ್ರೀಲಂಕಾ ತಮಿಳರ ಹಳೆಯ ದೂರು. ಅದಕ್ಕೆ ತಕ್ಕಂತೆ ಶ್ರೀಲಂಕಾದ ತೀರ ರಕ್ಷಣಾ ಪಡೆ ಭಾರತೀಯ ಮೀನುಗಾರರನ್ನು ಬಂಧಿಸುವುದು, ಹಲ್ಲೆ ಮಾಡುವುದು ನಿರಂತರವಾಗಿ ನಡೆಯುತ್ತಾ ಬಂದಿದೆ. ತಿಂಗಳುಗಳ ಹಿಂದೆ ಶ್ರೀಲಂಕಾ ನೌಕಾಪಡೆ 60 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ತಮಿಳುನಾಡಿನಲ್ಲಿ ತಲ್ಲಣವನ್ನೇ ಸೃಷ್ಟಿಸಿ, ಮುಖ್ಯಮಂತ್ರಿ ಸ್ಟಾಲಿನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಮಾಡಿ ಪ್ರತಿಭಟನೆ ಸಲ್ಲಿಸಬೇಕಾಯಿತು. ಆದರೂ ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಏನೇ ಇದ್ದರೂ, ಶ್ರೀಲಂಕಾ ತಮಿಳರಿಗೆ ಏನೇ ಆದರೂ ಅದು ಭಾರತದ ತಮಿಳರ ನಡುವೆ ಅಲೆಯೆಬ್ಬಿಸುತ್ತದೆ. ಭಾರತದ ಮುಖ್ಯ ಆತಂಕ ಇದೇ.

ಈ ಹಿನ್ನೆಲೆಯಲ್ಲಿ ದಕ್ಷಿಣದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಚೀನಾ, ತನ್ನ ತಂತ್ರ ಬದಲಿಸಿ ಉತ್ತರದ ತಮಿಳರ ಒಲವು ಗಳಿಸಿಕೊಳ್ಳಲು ಯತ್ನಿಸುತ್ತಿದೆ. ಇದರ ಫಲವಾಗಿಯೇ ರಾಜಪಕ್ಸ ಸರಕಾರದಲ್ಲಿ ಮೀನುಗಾರಿಕಾ ಮಂತ್ರಿಯಾಗಿದ್ದ ತಮಿಳು ನಾಯಕ ಡಗ್ಲಸ್ ದೇವಾನಂದ್ (ಶ್ರೀಲಂಕಾದಲ್ಲಿಯೂ ನಖ್ವಿಗಳು ಇರುತ್ತಾರೆ!) ಅವರು ಕಳೆದ ಡಿಸೆಂಬರ್‌ನಲ್ಲಿ ಯುಎಸ್‌ಎಯ ರಾಯಭಾರಿ ಮಾರ್ಟಿನ್ ಕೆಲ್ಲಿಯವರನ್ನು ಭೇಟಿಮಾಡಿ ಮೀನುಗಾರಿಕಾ ವಿವಾದ ಪರಿಹರಿಸಬೇಕೆಂದು ಕೋರುವ ಮೂಲಕ ಭಾರತವನ್ನು ಒತ್ತಡಕ್ಕೆ ಸಿಲುಕಿಸಲು ಯತ್ನಿಸಿದ್ದರು. ಜೊತೆಗೆ ಚೀನಾ ರಾಯಭಾರಿ ಕ್ವಿ ಝೆನ್‌ಹೋಂಗ್, ದೇವಾನಂದ್ ಜೊತೆ ಉತ್ತರಕ್ಕೆ ಭೇಟಿ ನೀಡಿ ತಮಿಳು ನಾಯಕರ ಜೊತೆ ಮೂರು ದಿನ ಮಾತುಕತೆ ನಡೆಸಿದ್ದರು. ಇದು ಎಷ್ಟರ ಮಟ್ಟಿಗೆ ಇತ್ತು ಎಂದರೆ, ಅವರು ಅಂಗಿ ತೆಗೆದು, ಬಿಳಿ ಪಂಚೆ ಉಟ್ಟು ಜಾಫ್ನಾದ ನಲ್ಲೂರು ಕಂದಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವಷ್ಟು. (ಚೀನಿ ಕಮ್ಯುನಿಸ್ಟರೂ ಭಕ್ತಿ ರಾಜಕಾರಣದಲ್ಲಿ ಹಿಂದೆ ಇಲ್ಲ!) ಅಲ್ಲಿ ಅವರು ನೆರವನ್ನೂ ಹಂಚಿದ್ದರು. ಹಣಬಲದಿಂದ ಶ್ರೀಲಂಕಾ ತಮಿಳರನ್ನು ಭಾರತದ ವಿರುದ್ಧ ಎತ್ತಿಕಟ್ಟಬಹುದು ಎಂದು ಚೀನಾದ ನಿರೀಕ್ಷೆ.

ಇನ್ನೊಂದು ಸಮಸ್ಯೆಯೆಂದರೆ, ಶ್ರೀಲಂಕಾದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ, ಭಾರತವು ದೊಡ್ಡ ಪ್ರಮಾಣದ ವಲಸೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದನ್ನು ತಡೆಯುವುದು ರಾಜಕೀಯ ಕಾರಣಗಳಿಂದ ಸಾಧ್ಯವಿಲ್ಲ. ಆದುದರಿಂದ ಶ್ರೀಲಂಕಾಕ್ಕೆ ನೆರವು ನೀಡಬೇಕಾದ ಮತ್ತು ಮೀನುಗಾರಿಕಾ ವಿವಾದವನ್ನು ತಕ್ಷಣ ಪರಿಹರಿಸಬೇಕಾದ ಅನಿವಾರ್ಯತೆಗೆ ಚೀನಾ, ಭಾರತವನ್ನು ತಳ್ಳುತ್ತಿದೆ. ಮತ್ತೊಮ್ಮೆ ಅದು ಶ್ರೀಲಂಕಾ ತಮಿಳರ ಹೋರಾಟವನ್ನು ಪ್ರಚೋದಿಸಿದರೂ ಭಾರತಕ್ಕೆ ಹಾನಿಯಾಗಲಿದೆ. ಇದೊಂದು ಸಂಕೀರ್ಣ ಇಕ್ಕಟ್ಟಿನ ಸ್ಥಿತಿಯಾಗಿದ್ದು, ಇದನ್ನು ಪರಿಹರಿಸುವ ಹೊಣೆ ಸ್ವಯಂಘೋಷಿತ ವಿಶ್ವಗುರುಗಳ ಮೇಲಿದೆ.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News