×
Ad

ಎ.18ರಿಂದ ದ.ಕ. ಜಿಲ್ಲೆಯಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ

Update: 2022-04-16 13:57 IST

ಮಂಗಳೂರು, ಎ.16: ಭಾರತ ಸರಕಾರವು 75ನೆ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆರೋಗ್ಯ ಮೇಳ ಆಯೋಜಿಸಲು ನೀಡಿರುವ ನಿರ್ದೇಶನದಂತೆ ಎ.18ರಿಂದ ದ.ಕ. ಜಿಲ್ಲೆಯಲ್ಲಿ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಎ.18ರಂದು ಪುತ್ತೂರು ಸುಧಾನ ವಸತಿ ಶಾಲೆಯಲ್ಲಿ, ಎ. 19ರಂದು ಬೆಳ್ತಂಗಡಿಯ ಕೃಷ್ಣಾನುಗೃಹ ಸಭಾಂಗಣದಲ್ಲಿ, ಎ.20ರಂದು ಸುರತ್ಕಲ್ ಆರೋಗ್ಯ ಕೇಂದ್ರ, ಎ.21ರಂದು ಬಂಟ್ವಾಳದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.22ರಂದು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ಮೇಳ ನಡೆಯಲಿದೆ ಎಂದರು.

ಮೇಳದಲ್ಲಿ ಆಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ನೀಡುವ ಜತೆಗೆ ಸ್ಥಳದಲ್ಲೇ ರೇಶನ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್ ನೀಡುವವರಿಗೆ ಕಾರ್ಡ್ ವಿತರಿಸಲಾಗುವುದು. ಇದೇ ವೇಳೆ ಹೆಲ್ತ್ ಕಾರ್ಡ್ ನೀಡುವ ಬಗ್ಗೆಯೂ ಕ್ರಮ ವಹಿಸಲಾಗಿದೆ. ಈ ಆರೋಗ್ಯ ಕಾರ್ಡ್ ಪಡೆಯಲು ಆಧಾರ್‌ ಕಾರ್ಡ್, ಮೊಬೈಲ್ ಸಂಖ್ಯೆ ಅಗತ್ಯವಾಗಿದ್ದು, ಈ ಕಾರ್ಡ್ ಹೊಂದಿರುವವರು ತಾವು ಈ ಹಿಂದೆ ಯಾವುದೇ ಆಸ್ಪತ್ರೆಯಲ್ಲಿ ಪಡೆದಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಮುಂದಿನ ಚಿಕಿತ್ಸೆಯ ವೇಳೆ ಆ ಆಸ್ಪತ್ರೆಯ ವೈದ್ಯರಿಗೆ ಲಭ್ಯವಾಗಲಿದೆ ಎಂದು ವಿವರಿಸಿದರು.

ಇದೇ ವೇಳೆ ಸಾಂಕ್ರಾಮಿಕ ರಹಿತ ರೋಗಗಳ ಸ್ಕ್ರೀನಿಂಗ್ ನಡೆಸುವ ಕಾರ್ಯವೂ ನಡೆಯಲಿದೆ. ಡಯಾಬಿಟಿಕ್, ಹೈಪರ್ ಟೆನ್ಶನ್, ಕ್ಯಾನ್ಸರ್‌ನಂತಹ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸಮಾಲೋಚನೆ ನೀಡುವ ಕಾರ್ಯ ಈ ಮೇಳಗಳ ಮೂಲಕ ನಡೆಸಲಾಗುವುದು ಎಂದು ಅವರು ಹೇಳಿದರು.

ಇದಲ್ಲದೆ ಮೇಳದಲ್ಲಿ ಆಹಾರ ಕಲಬೆರಕೆ ಕುರಿತಂತೆ ಜನಸಾಮಾನ್ಯರಿಗೆ ಸರಳ ಮಾಹಿತಿಗಳನ್ನು ಒದಗಿಸಲಾಗುವುದು. ಮೇಳದಲ್ಲಿ ಎಲ್ಲಾ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸೇವಾ ಸೌಲಭ್ಯಗಳು ಲಭ್ಯವಿರಲಿವೆ. ರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಅರಿವು ಮಾಹಿತಿ ಪ್ರದರ್ಶನ ಮಳಿಗೆ ಇರಲಿದೆ. ತಾಯಿ ಮತ್ತು ಮಗುವಿನ ಆರೋಗ್ಯ, ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ ಶಿಬಿರ, ಆಯುಷ್ ಗಿಡಮೂಲಿಕೆಗಳ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ, ಯೋಗ ಶಿಕ್ಷಕರ ಮೂಲಕ ಯೋಗ ಪ್ರದರ್ಶನ ಹಾಗೂ ಮಾಹಿತಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಪ್ರಹಸನ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.

ಕೋವಿಡ್ ಪರೀಕ್ಷೆ ಜಿಲ್ಲೆಗೆ ದಿನಕ್ಕೆ 350ರ ನಿಗದಿಯಾಗಿದ್ದರೂ, ಜಿಲ್ಲೆಯಲ್ಲಿ ಸುಮಾಆರು 450ರಷ್ಟು ಪರೀಕ್ಷೆ ನಡೆಯುತ್ತಿದೆ. ಪಾಸಿಟಿವಿಟಿ ದರವೂ ಗಣನೀಯವಾಗಿ ತಗ್ಗಿದೆ. ಹಾಗಾಗಿ ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದ ಡಾ. ಕಿಶೋರ್ ಕುಮಾರ್, ಇದಕ್ಕೆ ಲಸಿಕೀಕರಣವೂ ಪ್ರಮುಖ ಕಾರಣ ಎಂದರು.

ಬೂಸ್ಟರ್ ಡೋಸ್ ಲಸಿಕೆ ಸದ್ಯ 60 ವರ್ಷ ಮೇಲ್ಪಟ್ಟವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡುತ್ತಿದ್ದರೆ, ಉಳಿದಂತೆ 18 ವರ್ಷದಿಂದ 60 ವರ್ಷದೊಳಗಿನವರು ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ದರ ಪಾವತಿಸಿ ಪಡೆಯಬೇಕಾಗಿದೆ. ಜಿಲ್ಲೆಯಲ್ಲಿ ಶೇ.50ರಷ್ಟು 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆದಿದ್ದು, ಶೇ.65 ಮಂದಿ ಮುಂಚೂಣಿ ಕಾರ್ಯಕರ್ತರು ಪಡೆದಿದ್ದಾರೆ. ಶೇ.49ರಷ್ಟು ಆರೋಗ್ಯ ಕಾರ್ಯಕರ್ತರು ಪಡೆದಿದ್ದಾರೆ. 2ನೆ ಡೋಸ್ ಪಡೆದವರು 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಈ ನಡುವೆ ಕೋವಿಡ್ ಪಾಸಿಟಿವ್ ಆದಲ್ಲಿ ಮತ್ತೆ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಪಡೆಯುತ್ತಾರೆ ಎಂದು ಡಾ. ಕಿಶೋರ್ ಕುಮಾರ್ ವಿವರಿಸಿದರು.

ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಗೆ ಕೊರತೆ ಇಲ್ಲ. 12ರಿಂದ 14 ವರ್ಷದೊಳಗಿನ ಪ್ರಾಯದವರಿಗೂ ಕಳೆದ ಒಂದು ತಿಂಗಳಿನಿಂದ ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಶೇ.83 ಮಂದಿ ಪ್ರಥಮ ಡೋಸ್ ಪಡೆದಿದ್ದಾರೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News