ಕಮಿಷನ್ ಪಡೆದವರ ತನಿಖೆಗೆ ಆಯೋಗ ರಚಿಸಲಿ: ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ತಿರುಗೇಟು
ಮಂಗಳೂರು : ಹಿಂದೆ ಯಾರೆಲ್ಲಾ ಕಮಿಷನ್ ಪಡೆದಿದ್ದಾರೆ ಎಂಬ ಬಗ್ಗೆ ಆಯೋಗ ರಚನೆಯಾಗಲಿ. ಈಗ ಪ್ರಸ್ತುತ ಆರೋಪದ ಬಗ್ಗೆ ನಮಗೆ ಉತ್ತರ ಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಕಮಿಷನ್ ಇರಲಿಲ್ಲವೇ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಈ ಮೂಲಕ ಈಗ ಕಮಿಷನ್ ಆರೋಪವನ್ನು ಸಮರ್ಥನೆ ಮಾಡಿಕೊಂಡಂತಾಗಿದೆ. ಸ್ವಾತಂತ್ರ್ಯ ಬಂದು 74 ವರ್ಷಗಳಲ್ಲಿ ಹಲವು ಸರಕಾರಗಳು ಆಡಳಿತ ನಡೆಸಿವೆ. ಏನೆಲ್ಲಾ ಆಗಿವೆ ಎಂಬ ಬಗ್ಗೆ ಆಯೋಗದ ಮೂಲಕ ತನಿಖೆಯಾಗಲಿ. ಅದನ್ನು ಆಮೇಲೆ ಕುಮಾರಸ್ವಾಮಿಯವರೇ ಬೇಕಾದರೆ ಮಾಡಿಸಲಿ. ಈಗ ಪ್ರಸಕ್ತ ವಿಚಾರದ ಬಗ್ಗೆ ಮಾತನಾಡೋಣ. ಈಶ್ವರಪ್ಪರ ಬಂಧನ ಆಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಕಾನೂನು ಕ್ರಮದ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದರು.
ಬಿಜೆಪಿಯವರಿಗೆ ಏನೇ ಪ್ರಕರಣ ಆದಾಗಲೂ ನೀವು ಮಾಡಿರಲಿಲ್ಲವಾ ಎಂದು ಕೇಳೋದು ಹವ್ಯಾಸವಿದೆ. ಆದ್ರೆ ಇವತ್ತಿನ ಪ್ರಸಕ್ತ ವಿಚಾರದ ಬಗ್ಗೆ ಮಾತನಾಡಿ ಸರಕಾರದಲ್ಲಿರುವಾಗ ತನಿಖೆ ಮಾಡಿ. ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ನಿಮ್ಮ ಯಡಿಯೂರಪ್ಪ ಇದ್ದಾಗ ನಡೆದ ಕಮಿಷನ್ ಬಗ್ಗೆಯೂ ತನಿಖೆ ಮಾಡಿಸಿ ಯಾರು ಬೇಡ ಅಂದಿದ್ದು ಎಂದವರು ಪ್ರತಿಕ್ರಿಯಿಸಿದರು.