ಯುದ್ಧನೌಕೆ ಮುಳುಗಿದ ಬಳಿಕ ರಣತಂತ್ರ ಬದಲು: ಉಕ್ರೇನ್ ವಿರುದ್ಧ ದೀರ್ಘ ವ್ಯಾಪ್ತಿಯ ಕ್ಷಿಪಣಿ ದಾಳಿ ಆರಂಭಿಸಿದ ರಶ್ಯ

Update: 2022-04-16 17:07 GMT

ಕೀವ್, ಎ.16: ಕಪ್ಪು ಸಮುದ್ರದಲ್ಲಿ ತನ್ನ ಯುದ್ಧನೌಕೆ ಮುಳುಗಿದ ಬಳಿಕ ರಶ್ಯವು ಉಕ್ರೇನ್ ವಿರುದ್ಧದ ದಾಳಿಯ ರಣತಂತ್ರ ಬದಲಿಸಿದ್ದು ರಾಜಧಾನಿ ಕೀವ್ ಹಾಗೂ ಪ್ರಮುಖ ನಗರ ಲಿವಿವ್ ಅನ್ನು ಗುರಿಯಾಗಿಸಿ ದೀರ್ಘ ವ್ಯಾಪ್ತಿಯ ಕ್ಷಿಪಣಿ ದಾಳಿ ನಡೆಸಿದೆ. ಶನಿವಾರ ಎರಡೂ ನಗರಗಳ ಮೇಲೆ ರಶ್ಯ ಸೇನೆ ನಿರಂತರ ಬಾಂಬ್ ಮತ್ತು ಕ್ಷಿಪಣಿ ದಾಳಿ ಎಸಗಿದೆ ಎಂದು ವರದಿಯಾಗಿದೆ.

ಉಕ್ರೇನ್ ಮೇಲಿನ ರಶ್ಯದ ಆಕ್ರಮಣಕ್ಕೆ ಸಂಬಂಧಿಸಿ ಶನಿವಾರದ ಮಹತ್ವದ ಬೆಳವಣಿಗೆ ಹೀಗಿದೆ:

  ರಶ್ಯದ ಕ್ಷಿಪಣಿ ದಾಳಿಯಲ್ಲಿ ಕೀವ್‌ ನಲ್ಲಿ ಶಸ್ತ್ರಸಜ್ಜಿತ ವಾಹನ ಉತ್ಪಾದಿಸುವ ಸ್ಥಾವರದ ಕಟ್ಟಡ ಧ್ವಂಸವಾಗಿದೆ ಎಂದು ರಶ್ಯ ಸೇನೆ ಹೇಳಿದೆ. ದೀರ್ಘ ದೂರ ವ್ಯಾಪ್ತಿಯ ಕ್ಷಿಪಣಿ ಬಳಸಿ ಕಟ್ಟಡ ಧ್ವಂಸಗೊಳಿಸಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿಕೆ.

ಈ ದಾಳಿಯಲ್ಲಿ ಯಾವುದಾದರೂ ಸಾವು-ನೋವಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕೀವ್ ಮೇಯರ್ ವಿಟಾಲಿ ಕ್ಲಿಶ್ಕೊ ಹೇಳಿಕೆ.
ಪೋಲ್ಯಾಂಡ್ ಗಡಿಭಾಗದ ಲಿವಿವ್ ನಗರದ ಮೇಲೆ ಬೆಲಾರಸ್‌ನಿಂದಲೂ ರಶ್ಯದ ಯುದ್ಧವಿಮಾನ ಕ್ಷಿಪಣಿ ದಾಳಿ ನಡೆಸಿದ್ದು ತನ್ನ ಪಡೆ 4 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಸೇನೆ ಹೇಳಿದೆ.

 ದಕ್ಷಿಣ ಉಕ್ರೇನ್  ನ ಮಿಕೊಲಿವ್ ನಗರದಲ್ಲಿನ ಸೇನಾ ವಾಹನ ದುರಸ್ತಿ ಕಾರ್ಖಾನೆಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ರಶ್ಯ ಹೇಳಿದೆ. ಉಕ್ರೇನ್ ಗೆ ಶಸ್ತ್ರಾಸ್ತ್ರ ಒದಗಿಸುವ ಬೇಜವಾಬ್ದಾರಿ ಪ್ರಕ್ರಿಯೆಯನ್ನು ಪಾಶ್ಚಿಮಾತ್ಯ ದೇಶಗಳು ಮುಂದುವರಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಶ್ಯ ಎಚ್ಚರಿಸಿದೆ.

ತನ್ನ ವಿರುದ್ಧ ನಿರ್ಬಂಧ ಜಾರಿಗೊಳಿಸಿರುವ ಬ್ರಿಟನ್ ಗೆ ಇದಿರೇಟು ನೀಡಿರುವ ರಶ್ಯ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಇತರ ಹಲವು ಅಧಿಕಾರಿಗಳಿಗೆ ಪ್ರವೇಶ ನಿಷೇಧ ಜಾರಿಗೊಳಿಸಿರುವುದಾಗಿ ಘೋಷಿಸಿದೆ.

ಇದುವರೆಗಿನ ಯುದ್ಧದಲ್ಲಿ ತನ್ನ ಸುಮಾರು 3,000 ಯೋಧರು ಮೃತಪಟ್ಟಿದ್ದು ಇತರ 10,000 ಯೋಧರು ಗಾಯಗೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ.

ಫೆಬ್ರವರಿ 24ರಂದು ರಶ್ಯದ ಆಕ್ರಮಣ ಆರಂಭವಾದಂದಿನಿಂದ ಉಕ್ರೇನ್ ನಿಂದ 5 ಮಿಲಿಯನ್ ಗೂ ಅಧಿಕ ಮಂದಿ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆ ಹೇಳಿಕೆ.

ನ್ಯಾಟೊ ಸದಸ್ಯ ಟರ್ಕಿಯು ರಶ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ, ಈಗ ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ಟರ್ಕಿಯ ನೆರವು ಪಡೆಯಲು ಪ್ರಯತ್ನ ಮುಂದುವರಿಸಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

ರಶ್ಯ ಜತೆಗಿನ ಯುದ್ಧದಲ್ಲಿ 3000 ಯೋಧರು ಮೃತ್ಯು: ಉಕ್ರೇನ್

ರಶ್ಯ ಜತೆಗೆ ಕಳೆದ 7 ವಾರದಿಂದ ನಡೆಯುತ್ತಿರುವ ಯುದ್ಧದಲ್ಲಿ ಉಕ್ರೇನ್ ನ ಸುಮಾರು 3000 ಯೋಧರು ಮೃತಪಟ್ಟಿದ್ದು ಇತರ ಸುಮಾರು 10,000 ಯೋಧರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವ್ಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಇದರಲ್ಲಿ ನಾಗರಿಕರ ಸಾವು ನೋವಿನ ಪ್ರಮಾಣ ಸೇರಿಲ್ಲ. ಯುದ್ಧದಲ್ಲಿ ರಶ್ಯ ಸುಮಾರು 20,000 ಯೋಧರನ್ನು ಕಳೆದುಕೊಂಡಿದೆ
 
ಎಂದು ಝೆಲೆನ್ಸ್ಕಿಯನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಆದರೆ 7 ವಾರಗಳ ಯುದ್ಧದಲ್ಲಿ ತನ್ನ 1,351 ಯೋಧರು ಮೃತಪಟ್ಟಿದ್ದು 3,825 ಯೋಧರು ಗಾಯಗೊಂಡಿರುವುದಾಗಿ ರಶ್ಯ ಹೇಳಿದೆ. ಈ ಮಧ್ಯೆ, ರಶ್ಯದ ಮುತ್ತಿಗೆಗೆ ಒಳಗಾಗಿರುವ ಬಂದರು ನಗರ ಮರಿಯುಪೋಲ್ ನಲ್ಲಿ ತೀವ್ರ ಸಂಷರ್ಘ ನಡೆಯುತ್ತಿದೆ. ಈ ಹಿಂದೆ ಸುಮಾರು 4 ಲಕ್ಷ ಜನರಿದ್ದ ನಗರದಲ್ಲಿ ಈಗ ಸ್ಮಶಾನ ಮೌನವಿದ್ದು ಸಾವಿರಾರು ನಾಗರಿಕರು ಮೃತಪಟ್ಟಿದ್ದು ಲಕ್ಷಾಂತರ ಜನತೆ ನಗರದಿಂದ ಪಲಾಯನ ಮಾಡಿದ್ದಾರೆ . ಹೆಚ್ಚುವರಿ ಸೇನೆಯನ್ನು ಸ್ಥಳಕ್ಕೆ ಕರೆಸಿಕೊಂಡಿರುವ ರಶ್ಯ ಭಾರೀ ಆಕ್ರಮಣಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಉಕ್ರೇನ್‌ನ ರಕ್ಷಣಾ ಇಲಾಖೆಯ ವಕ್ತಾರ ಒಲೆಕ್ಸಾಂದರ್ ಮೊತುಝ್ಯಾನಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News