ಜಾನ್‌ಫೋರ್ಡ್-ಅಮರ ಚಿತ್ರಗಳ ಕಥನಕಾರ

Update: 2022-04-16 18:48 GMT

ಭಾಗ-2

ಪ್ರತೀಕಾರ, ಸಾಹಸ ತುಂಬಿದ ಅಮೆರಿಕದ ವೆಸ್ಟರ್ನ್ ಶೈಲಿಯ ಚಿತ್ರಗಳಿಗೆ ಕ್ಲಾಸಿಕ್ ಸ್ಪರ್ಶ ನೀಡಿದ ಫೋರ್ಡ್ ಅವರು ಮನುಷ್ಯನ ಅದಮ್ಯ ಚೈತನ್ಯ ಶಕ್ತಿಯಲ್ಲಿ ಪೂರ್ಣನಂಬಿಕೆಯಿಟ್ಟು ಹಲವಾರು ಶ್ರೇಷ್ಠ ಚಿತ್ರಗಳನ್ನು ರೂಪಿಸಿದವರು. ಅಮೆರಿಕದ ಚರಿತ್ರೆಯನ್ನು ಮನುಷ್ಯನ ನಾಟಕೀಯ ದುರಂತಗಳೊಡನೆ ತಮ್ಮದೇ ರೀತಿಯಲ್ಲಿ ಕಟ್ಟಿಕೊಟ್ಟವರು. ಅಸಹಾಯಕರಾದ ಮನುಷ್ಯನಿಗೆ ಭರವಸೆಯ ಬೆಳಕು ಇದ್ದೇ ಇರುತ್ತದೆಂಬ ಗಾಢ ಆಶಾವಾದದಿಂದ ಮನುಷ್ಯನ ಘನತೆಗೆ ಬೆಲೆತಂದವರು.



ಹಾಲಿವುಡ್‌ನಲ್ಲಿ ವೆಸ್ಟರ್ನ್ ಮಾದರಿಯ ಚಿತ್ರಗಳಿಗೆ ಹೊಸರೂಪ ನೀಡಿದ ಜಾನ್ ಫೋರ್ಡ್ ಕ್ಲಾಸಿಕ್ ಎನ್ನಬಹುದಾದ ಚಿತ್ರಗಳನ್ನು ರೂಪಿಸುತ್ತಾ ಯಶಸ್ವಿಚಿತ್ರಗಳ ಸರಣಿಯನ್ನು ನೀಡಿದರು.
1939ನೇ ಇಸವಿಯು ಜಾನ್ ಫೋರ್ಡ್ ಪಾಲಿಗೆ ಇತಿಹಾಸವನ್ನು ಬರೆದ ವರ್ಷ. ಆ ವರ್ಷ ಬಿಡುಗಡೆಯಾದ ‘ಸ್ಟೇಜ್‌ಕೋಚ್’ ಆವರೆಗೂ ತಯಾರಾಗಿದ್ದ ‘ವೆಸ್ಟರ್ನ್’ ಮಾದರಿಯ ಚಿತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದೆಂದು ವಿಮರ್ಶಕರು ಪರಿಗಣಿಸಿದ್ದಾರೆ. ಅರ್ನೆಸ್ಟ್ ಹೇಕೋ ರಚಿಸಿದ ‘ದಿ ಸ್ಟೇಜ್ ಟು ಲಾರ್ಡ್ಸ್ ಬರ್ಗ್’ ಕಾದಂಬರಿಯನ್ನಾಧರಿಸಿದ್ದ ಈ ಚಿತ್ರವು ಡಟೊಂಟೋ ಪಟ್ಟಣದಿಂದ ಮಾನ್ಯುಮೆಂಟ್ ಕಣಿವೆ ಮೂಲಕ ಲಾರ್ಡ್ಸ್‌ಬರ್ಗ್‌ವರೆಗಿನ ಕೋಚ್ ಗಾಡಿಯ ಯಾತ್ರೆಯ ಕಥಾವಸ್ತುವನ್ನೊಳಗೊಂಡಿದೆ.ಮೂರು ಜೋಡಿಕುದುರೆ ಎಳೆಯುವ ಈ ಬಂಡಿಯ ಚಾಲಕ ಬಕ್. ಗಾಡಿಯ ರಕ್ಷಣೆಗಾಗಿ ಬಂದೂಕುಧಾರಿ ಶೆರೀಫ್ ವಿಲ್ ಕಾಕ್ಸ್ ಅವನ ಜೊತೆಗಿದ್ದಾನೆ. ಡಟೋಂಟೋ ಪಟ್ಟಣದಿಂದ ಆರು ಪ್ರಯಾಣಿಕರು ಹೊರಡುತ್ತಾರೆ. ಹಾಟ್‌ಫೀಲ್ಡ್ ಎಂಬ ಜೂಜುಕೋರ; ಶಂಕಿತ ಶೀಲದ ಹೆಣ್ಣು ಡಲಾಸ್; ಕುಡುಕ ವೈದ್ಯ ಬೂನ್; ಸೈನಿಕ ಪಡೆಯಲ್ಲಿರುವ ತನ್ನ ಗಂಡನನ್ನು ಸೇರಿಕೊಳ್ಳಲು ಹೊರಟ ಮಹಿಳೆ ಲೂಸಿಯಾ; ಮದ್ಯ ಮಾರಾಟಗಾರ ಪೀಕಾಕ್-ಇವರ ಜೊತೆಗೊಬ್ಬ ಬ್ಯಾಂಕರ್ ಹೆನ್ರಿ ಗೇಟ್‌ವುಡ್. ವಿಭಿನ್ನ ಹಿನ್ನೆಲೆ, ಸಂಸ್ಕೃತಿ ಮತ್ತು ನಡವಳಿಕೆಯ ಆರು ಜನ ಪ್ರಯಾಣಿಸುವ ಗಾಡಿಗೆ ರಿಂಗೋ ಕಿಡ್ ಎಂಬ ವಿಲಕ್ಷಣ ವ್ಯಕ್ತಿ ಸೇರಿಕೊಳ್ಳುತ್ತಾನೆ.

ಈಗಾಗಲೇ ಜೈಲಿನಿಂದ ತಪ್ಪಿಸಿಕೊಂಡಿರುವ ಆತ ಸೇಡು ತೀರಿಸಿಕೊಳ್ಳಲು ಲ್ಯಾಂಡ್‌ಬರ್ಗ್‌ಗೆ ಹೊರಟಿದ್ದಾನೆ. ಶೆರೀಫ್ ಅವನನ್ನು ಮತ್ತೆ ಬಂಧಿಸಬೇಕಾಗಿದೆ. ಆದುದರಿಂದ ಅವನನ್ನು ಗಾಡಿಯ ಜೊತೆಗೇ ಬರಲು ಅನುಮತಿಸುತ್ತಾನೆ.ಕೋಚ್‌ಗಾಡಿಯ ಯಾತ್ರೆ ಮುಂದುವರಿದಂತೆ ಪ್ರಯಾಣಿಕರ ಭಾವನೆಗಳು ಮತ್ತು ನಡವಳಿಕೆಗಳ ತಾಕಲಾಟ ಆರಂಭವಾಗುತ್ತದೆ. ಗಾಡಿಯ ಕುಲುಕುವಿಕೆಯ ಜೊತೆಗೆ, ಭೂದೃಶ್ಯದ ಏರಿಳಿತಗಳ ನಡುವೆ ಈ ಮನುಷ್ಯರ ನಡವಳಿಕೆಗಳ ಹೊಯ್ದೆಟವೂ ನಡೆಯುತ್ತದೆ. ಯುದ್ಧನಿರತ ರೆಡ್ ಇಂಡಿಯನ್ನರ ಗುಂಪುಗಳ ದಾಳಿಗೂ ಬಂಡಿ ತುತ್ತಾಗುತ್ತದೆ. ಕೆಳಸ್ತರದ ಜನರ ಔದಾರ್ಯ, ಕುಲೀನರ ಸಂಕುಚಿತ ಮನೋಭಾವ, ಕುಡುಕನ ತತ್ವಜ್ಞಾನ, ಜೂಜುಕೋರನ ಆಕರ್ಷಣೆ, ಬಂಡುಕೋರನ ಜೀವನೋತ್ಸಾಹ, ಗಾಡಿ ಚಾಲಕನ ಆಸೆ-ಆಕಾಂಕ್ಷೆಗಳು-ಹೀಗೆ ಮನುಷ್ಯನ ರಾಗಭಾವಗಳೆಲ್ಲ ದಾರಿಯುದ್ದಕ್ಕೂ ಅನಾವರಣಗೊಳ್ಳುತ್ತವೆ. ಕುಲೀನ ಸ್ತ್ರೀಯಾದ ಲೂಸಿಯಾ ತನ್ನ ಜೊತೆ ಇರುವ ವೇಶ್ಯೆ ಡಲಾಸ್ ಜೊತೆ ಕೂರಲು, ಮಾತನಾಡಲೂ ಹಿಂದೆಗೆಯುತ್ತಾಳೆ. ಕುಲೀನರ ನಡುವೆ ರಿಂಗೋ ಕಿಡ್‌ಗೂ ಅದೇ ಪರಿಸ್ಥಿತಿ. ಹಾಗಾಗಿ ಗುಂಪಿಗೆ ಬೇಡವಾದ ಇಬ್ಬರೂ ಪರಸ್ಪರ ಆಕರ್ಷಿತರಾಗುತ್ತಾರೆ. ಈ ತಾಕಲಾಟದಲ್ಲಿ ಸಂಕುಚಿತ ಭಾವಗಳು ಕರಗುತ್ತಾ ಮಾನವೀಯ ಭಾವನೆಗಳು ಮೇಲುಗೈ ಸಾಧಿಸುತ್ತಾ ಹೋಗುತ್ತವೆ. ಕೋಚ್ ಬಂಡಿಯನ್ನು ಬೆನ್ನಟ್ಟಿ ಬರುವ ರೆಡ್ ಇಂಡಿಯನ್ನರ ಪಡೆ ಮತ್ತು ಪ್ರಯಾಣಿಕರ ನಡುವೆ ವಿಶಾಲವಾದ ಬಯಲು, ದುರ್ಗಮವಾದ ಕಣಿವೆ ಓಣಿಯಲ್ಲಿ ನಡೆಯುವ ಹೋರಾಟದ ದೃಶ್ಯವನ್ನು ಹೊರತುಪಡಿಸಿದರೆ, ಸಾಮಾನ್ಯವಾಗಿ ಕೌಬಾಯ್ ಅಥವಾ ವೆಸ್ಟರ್ನ್ ಮಾದರಿಯ ಚಿತ್ರಗಳಲ್ಲಿ ಕ್ಷಣಕ್ಷಣಕ್ಕೂ ಸಂಭವಿಸುವ ಗುಂಡಿನ ಕಾಳಗ, ಮುಷ್ಟಿಯುದ್ಧ ಈ ಚಿತ್ರದಲ್ಲಿಲ್ಲ. ಇಲ್ಲಿನ ಹೋರಾಟ ನಡೆಯುವುದು ಹೆಚ್ಚು ಭಾವನೆಗಳ ಕ್ಷೇತ್ರದಲ್ಲಿಯೇ. ಅದಕ್ಕೆ ಹಿನ್ನೆಲೆಯಾಗಿ ದುರ್ಗಮವಾದ ಪರಿಸರವು ಭಿತ್ತಿಯೊಂದನ್ನು ಒದಗಿಸುತ್ತದೆ. ಆ ದೃಷ್ಟಿಯಿಂದ ಇದೊಂದು ಅನನ್ಯ ಚಿತ್ರ.

ನಿರ್ದೇಶಕನಾಗಿ ಜಾನ್‌ಫೋರ್ಡ್ ಅವರ ಪ್ರತಿಭೆ ಇಲ್ಲಿ ಪರಾಕಾಷ್ಠೆ ಮುಟ್ಟಿದೆ. ವ್ಯಕ್ತಿಗಳು ಮತ್ತು ಪರಿಸರದ ಬಗ್ಗೆ ಅವರು ತೋರುವ ಭಾವ ವಿಶಿಷ್ಟವಾದದ್ದು. ಪ್ರತಿಯೊಂದು ಫ್ರೇಮಿನಲ್ಲೂ ಅಮೆರಿಕದ ಸ್ಥಳೀಯತೆ ಕಣ್ಣಿಗೆ ಕಟ್ಟುತ್ತದೆ. ಅದು ಪಾತ್ರಗಳನ್ನು ಸೃಷ್ಟಿಸಿರುವ ರೀತಿ, ಉಡುಪು, ಸಂಭಾಷಣೆ, ಸಂಗೀತದಲ್ಲಿ ಎದ್ದು ಕಾಣುತ್ತದೆ. ನಿರ್ಜನವಾದ, ಶುಷ್ಕ ವಿಶಾಲ ಬಯಲಿನಲ್ಲಿ ಸಾಗುವ ಕೋಚ್‌ಗಾಡಿಯು ಲಾಂಗ್‌ಷಾಟ್‌ಗಳಲ್ಲಿ ಬೃಹತ್ ಚಿತ್ರವೊಂದರಲ್ಲಿ ಬಂಡಿಯೊಂದು ಕೊರೆದು ಸಾಗುವಂತೆ ಕಾಣುತ್ತದೆ. ಆ ವಿಶಾಲ ಬಯಲಿನಲ್ಲಿ ಅಲ್ಲಲ್ಲಿ ಎದ್ದು ನಿಂತಿರುವ ಬಂಡೆಗಳ ಸಮೂಹ, ನಿಶ್ಚಲವಾಗಿ ನಿಂತ ಪಾಪಾಸುಕಳ್ಳಿ, ಗಾಳಿಗೆ ಅಲ್ಲಾಡುವ ಕಂಬಿಗಳು, ರಾಚುವ ಧೂಳು-ಎಲ್ಲವೂ ಸಿನೆಮಾ ವೀಕ್ಷಣೆಯ ಅನುಭವವನ್ನು ಎತ್ತರಕ್ಕೊಯ್ಯುತ್ತವೆ. ಯುದ್ಧದ ಸನ್ನಿವೇಶಗಳಂತೂ ಮೈನವಿರೇಳಿಸುತ್ತವೆ. ಜನಜಂಗುಳಿಯ ದೃಶ್ಯಗಳು, ಹೊರಾಂಗಣದ ಭವ್ಯತೆ, ಒಳಾಂಗಣದ ಸಂಯೋಜನೆಗಳೆಲ್ಲವನ್ನೂ ಫೋರ್ಡ್ ಅವರು ಎಪಿಕ್ ಮಟ್ಟದಲ್ಲಿ ನಿರ್ವಹಿಸಿದ್ದಾರೆ. ಪ್ರತಿಯೊಂದು ದೃಶ್ಯ, ನೆರಳು-ಬೆಳಕನ್ನು ಸಂಯೋಜಿಸಿರುವ ರೀತಿ, ಷಾಟ್ ವಿಂಗಡಣೆಗಳೆಲ್ಲವೂ ಮನುಷ್ಯನ ಅಂತರಂಗವನ್ನು ತೆರೆದಿಡುತ್ತವೆ. ಪಾತ್ರಧಾರಿಗಳ ಅಭಿನಯ ಮೇರುಮಟ್ಟದ್ದು. ಬಂಡುಕೋರ ರಿಂಗೋ ಕಿಡ್ ಪಾತ್ರ ನಿರ್ವಹಿಸಿದ್ದ ಜಾನ್ ವೇಯ್ನಿ ಮುಂದೆ ಜನಪ್ರಿಯತೆಯ ತುತ್ತ ತುದಿಗೇರಿದ. ವೆಸ್ಟರ್ನ್ ಚಿತ್ರಗಳಲ್ಲಿ ಅವನನ್ನು ಮೀರಿಸಿದ ಮತ್ತೊಬ್ಬ ನಟನ ಆಗಮನವಾಗಲಿಲ್ಲ. ತನ್ನ ಮರಣದವರೆಗೂ ಜಾನ್‌ವೇಯ್ನೊ ಆ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದ.

1940ರಲ್ಲಿ ಬಿಡುಗಡೆಯಾದ ‘ಗ್ರೇಪ್ಸ್ ಆಫ್ ರಾತ್’ -ಫೋರ್ಡ್ ಅವರ ಮತ್ತೊಂದು ಮಹೋನ್ನತ ಚಿತ್ರ. ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಸ್ಟೀನ್‌ಬೆಕ್ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಈ ಚಿತ್ರವು ಬಾಕ್ಸ್ ಆಫೀಸಿನಲ್ಲಿ ಯಶಸ್ವಿ ಕಂಡದ್ದು ಮಾತ್ರವಲ್ಲ, ಫೋರ್ಡ್ ಅವರಿಗೂ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿತು. ಇದು ಸಹ ಒಂದು ದೊಡ್ಡ ಯಾತ್ರೆಯನ್ನೇ ಆಧರಿಸಿದ ಚಿತ್ರ. ಒಕ್ಲಾಹಾಮ ಪ್ರಾಂತದಲ್ಲಿ ತಾಂಡವವಾಡುವ ಕ್ಷಾಮ ಮತ್ತು ಮಾನವನಿರ್ಮಿತ ಸಂಕಷ್ಟಗಳಿಂದ ಬಿಡುಗಡೆಯಾಗಲು ಜೋಡ್ ಕುಟುಂಬವು ಕ್ಯಾಲಿಫೋರ್ನಿಯಾಗೆ ನಡೆಸುವ ಯಾತ್ರೆಯೇ ಚಿತ್ರದ ಪ್ರಧಾನ ಕತೆ. ಈ ಯಾತ್ರೆಯಲ್ಲಿ ಕುಟುಂಬವು ಹಸಿವು, ಬೇಗುದಿ, ಅಸಹಾಯಕತೆ, ಶೋಷಣೆಯನ್ನು ಅನುಭವಿಸುತ್ತದೆ. ಸಾಮಾಜಿಕ ನ್ಯಾಯದ ಮಹತ್ವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಫೋರ್ಡ್ ಅವರು ಚಿತ್ರವನ್ನು ನಿರೂಪಿಸುತ್ತಾರೆ.ಇದು ಆವರೆಗೂ ಹಾಲಿವುಡ್‌ನಲ್ಲಿ ಕಂಡರಿಯದ ವಾಸ್ತವವಾದಿ ಚಿತ್ರ.

ಈ ಚಿತ್ರದ ಬಡತನ, ಅಪಮಾನುಷ ಪರಿಸರವು ಸಿನೆಮಾಗಾಗಿಯೇ ಸೃಷ್ಟಿಮಾಡಿದ ಪರಿಸರದಂತೆ ಕಾಣದು. ಅಷ್ಟು ಕಟು ವಾಸ್ತವದ ಚಿತ್ರ ಆವರೆಗೂ ಅಮೆರಿಕದಲ್ಲಿ ನಿರ್ಮಾಣವಾಗಿರಲಿಲ್ಲ. ಜೋಡ್ ಕುಟುಂಬ ವಾಸಿಸುವ ಮನೆ, ಅಲ್ಲಿನ ರಸ್ತೆಗಳು, ಅವರ ಅಡುಗೆ ಪಾತ್ರೆಗಳು, ಪೀಠೋಪಕರಣಗಳು, ಅವುಗಳನ್ನು ಹೊತ್ತು ಹೊರಡುವ ಲಡಕಾಸಿ ವಾಹನದ ಗಡಗಡ ಸದ್ದು, ಬರದ ಛಾಯೆ ಹೊತ್ತ ಧೂಳು ತುಂಬಿದ ರಸ್ತೆಗಳು, ನಿರಭ್ರ ಆಕಾಶ- ಎಲ್ಲವೂ ಇಡೀ ಚಿತ್ರವನ್ನು ಒಂದು ಗಾಢ ಅನುಭವವಾಗಿಸುತ್ತವೆ. ಸನ್ನಿವೇಶದ ಭಾವತೀವ್ರತೆಯನ್ನು ಹೆಚ್ಚಿಸಲು ದೃಶ್ಯ ಮತ್ತು ಶಬ್ದವನ್ನು ಪರಿಣಾಮಕಾರಿಯಾಗಿ ಫೋರ್ಡ್ ಬಳಸಿದ್ದಾರೆ. ಅಮೆರಿಕ ಸಂಸ್ಥಾನದ ಒಕ್ಲಾಹಾಮಾ ಪ್ರಾಂತದಲ್ಲಿ ‘ದಿ ಡಸ್ಟ್ ಬೌಲ್’ (ಧೂಳಿನ ಬೋಗುಣಿ) ಎಂಬ ಸಣ್ಣ ಪ್ರದೇಶವಿದೆ. ಮಳೆಯನ್ನು ಕಾಣದ, ಧೂಳು ತುಂಬಿದ ವಿಶಾಲ ಬಯಲು ಪ್ರದೇಶದಲ್ಲಿ ಬಡತನ ಮತ್ತು ಬರ ಎರಡೂ ಸಂಗಾತಿಗಳೇ. ಕೊಲೆಯ ಆಪಾದನೆಯ ಮೇಲೆ ಜೈಲು ಸೇರಿ ಪೆರೋಲ್ ಮೇಲೆ ಬಿಡುಗಡೆಯಾದ ಜೋಡ್ ಕುಟುಂಬದ ಕಿರಿಯ ಗಂಡುಮಗ ಟಾಮಿ ಜೋಡ್ ಊರಿಗೆ ಬಂದಾಗ ಮನೆ ನಿರ್ಜನವಾಗಿರುತ್ತದೆ.ಅಮೆರಿಕದ ಆರ್ಥಿಕ ಕುಸಿತದಿಂದ ಕಂಗೆಟ್ಟ ಜಮೀನು ಮಾಲಕರು ಗೇಣಿದಾರರನ್ನು ಒಕ್ಕಲೆಬ್ಬಿಸುತ್ತಾರೆ. ಬೇಸಾಯದ ಖರ್ಚು ಕಡಿಮೆ ಮಾಡಲು ಯಾಂತ್ರಿಕ ಕೃಷಿಗೆ ಆದ್ಯತೆ ನೀಡುತ್ತಾರೆ.

ಆ ರೀತಿ ಒಕ್ಕಲೆಬ್ಬಿಸಿಕೊಂಡ ಜೋಡ್ ಕುಟುಂಬ ಉದ್ಯೋಗ ಅರಸಿ ಕ್ಯಾಲಿಫೋರ್ನಿಯಾಗೆ ಹೋಗಲು ಚಿಕ್ಕಪ್ಪ ಜಾನ್‌ನ ಮನೆಯಲ್ಲಿ ಬೀಡುಬಿಟ್ಟಿರುತ್ತದೆ. ಅವರನ್ನು ಕೂಡಿಕೊಂಡ ಟಾಮ್ ನಡೆಸುವ ಪ್ರಯಾಣವು ಅಮೆರಿಕದ ಆ ಕಾಲದ ಚರಿತ್ರೆಗೆ ಕನ್ನಡಿ ಹಿಡಿಯುತ್ತದೆ.ಅಮೆರಿಕದ ಸಂಕಷ್ಟ ಸ್ಥಿತಿಯ ಅವಧಿಯಲ್ಲಿ ಜೋಡ್ ಕುಟುಂಬದ ಬದುಕು ಇಡೀ ಅಮೆರಿಕದ ಲಕ್ಷಾಂತರ ಕುಟುಂಬಗಳ ಸಂಕಷ್ಟಗಳನ್ನು ಪ್ರತಿನಿಧಿಸುತ್ತದೆ. ಆರ್ಥಿಕ ಬಿಕ್ಕಟ್ಟು, ಯಾಂತ್ರಿಕ ಕೃಷಿಯ ಒಲವು, ಕಾರ್ಮಿಕರ ಸಂಖ್ಯೆ ಹೆಚ್ಚಿದಂತೆ ಕೃಷಿ ಎಸ್ಟೇಟುಗಳ ಶೋಷಣೆಯ ಉರುಳು, ಅದನ್ನು ಪ್ರತಿಭಟಿಸುವ ಕಾರ್ಮಿಕರನ್ನು ಸದೆ ಬಡಿಯುವ ಯಜಮಾನಿಕೆ; ನೂರಾರು ವರ್ಷಗಳಿಂದ ಬದುಕಿದ ಮನೆಯಲ್ಲಿ ಹೊಲದಲ್ಲಿ, ತಾವೇ ಕಳ್ಳರಂತೆ ಅಡಗಿ ಬದುಕಬೇಕಾದ ದಾರುಣತೆ; ಬಡತನ, ಹಸಿವು ಮತ್ತು ಅಪಮಾನುಷತೆಗಳಿಂದ ಶಿಥಿಲವಾಗುವ ಕೌಟುಂಬಿಕ ಸಂಬಂಧಗಳ ಎದುರಿನಲ್ಲಿಯೇ, ಸಂಕಷ್ಟದ ಸಮಯದಲ್ಲಿ ಕುಟುಂಬವನ್ನು ಭದ್ರವಾಗಿ ಹಿಡಿದಿಡುವ ಹೆಣ್ಣಿನ ಸಹನಶೀಲತೆ; ಎಲ್ಲೊ ಮಿಂಚಿನಂತೆ ಕಾಣುವ ಮಾನವೀಯ ಕಿರಣಗಳು-ಹೀಗೆ ಫೋರ್ಡ್ ಮನುಷ್ಯ ಬದುಕಿನ ಅನೇಕ ಮುಖಗಳನ್ನು ಗಾಢವಾಗಿ ಕಟ್ಟಿಕೊಡುತ್ತಾರೆ.

ವಲಸೆ ಹೋಗುವ ಜೋಡ್ ಕುಟುಂಬದ ಒಳಬಲದಂತಿರುವ ಕುಟುಂಬದ ತಾಯಿಯ ಪಾತ್ರದಲ್ಲಿ ನಟಿ ಜೇನ್ ಡೆರೆಲ್ ಅದ್ಭುತವಾಗಿ ಅಭಿನಯಿಸಿದ್ದಾರೆ.
ಮನುಷ್ಯ ಮತ್ತು ನಿಸರ್ಗವು ಸೃಷ್ಟಿಸಿದ ಸಂಕಷ್ಟಗಳ ಎದುರು ಸೋಲೊಪ್ಪಿಕೊಳ್ಳದ ಅದಮ್ಯ ಚೈತನ್ಯದ ಟಾಮ್ ಜೋಡ್ ಪಾತ್ರದಲ್ಲಿ ಹಾಲಿವುಡ್‌ನ ಅಂದಿನ ಯುವನಟ ಹೆನ್ರಿ ಫೋಂಡಾ ನಟನೆಯೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ವಿಪತ್ಕಾಲದಲ್ಲಿ ಕುಟುಂಬವೊಂದು ಎದುರಿಸಿ ನಿಲ್ಲುವ ಸಂಕಲ್ಪಶಕ್ತಿ, ಅಮೆರಿಕ ಪ್ರಭುತ್ವ ಬಿತ್ತುವ ಕನಸುಗಳ ಪೊಳ್ಳುತನ, ಕಾರ್ಮಿಕರ ಶೋಷಣೆ, ಮಾನವ ಘನತೆಯ ಪ್ರದರ್ಶನ ಮತ್ತು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯವನ್ನು ಕುರಿತು ಚಿತ್ರವು ವ್ಯಾಖ್ಯಾನವನ್ನು ಮಾಡುತ್ತದೆ. ಒಂದು ಬಗೆಯ ವರದಿ ಮತ್ತು ಸಾಕ್ಷಚಿತ್ರದ ಶೈಲಿಯನ್ನು ಅನುಕರಿಸಿದರೂ, ಪರಿಸರದ ವಾಸ್ತವತೆ, ಪರಿಸ್ಥಿತಿಯ ಗಾಂಭೀರ್ಯವನ್ನು ಘನೀಕೃತಗೊಳಿಸಲು ಬಳಸಿರುವ ನೆರಳು-ಬೆಳಕು, ಧೂಳು ತುಂಬಿದ ಹಾದಿಗಳು, ಸಂಕಷ್ಟಗಳಲ್ಲಿ ಮುಳುಗಿದ ಮಾನವ ಸಮೂಹಗಳ ದೃಶ್ಯಗಳು, ಶ್ರೇಷ್ಠ ಅಭಿನಯ ಎಲ್ಲವೂ ಹೊಸ ಅನುಭವ ಲೋಕವೊಂದನ್ನು ಸೃಷ್ಟಿಸುತ್ತವೆ. ಬಡತನದ ಕೋಟಲೆಗಳಿಗೆ ತುತ್ತಾದ ಜಗತ್ತಿನ ಎಲ್ಲ ರಾಷ್ಟ್ರಗಳ ಅನುಭವಕಥನದಂತೆ ಚಿತ್ರ ಮೂಡಿಬಂದಿದೆ.

ಇಟಲಿಯಲ್ಲಿ ನವವಾಸ್ತವದ ಚಿತ್ರಗಳು ತಯಾರಾಗುವ ಮುನ್ನವೇ, ಗಾಢವಾಸ್ತವ ಶೈಲಿಯ ಚಿತ್ರವೊಂದನ್ನು ರೂಪಿಸಿದ್ದು ಫೋರ್ಡ್ ಅವರ ಅಗ್ಗಳಿಕೆಯಲ್ಲೊಂದು.

1946ರಲ್ಲಿ ಫೋರ್ಡ್ ಅವರು ಮತ್ತೊಂದು ಶ್ರೇಷ್ಠ ವೆಸ್ಟರ್ನ್ ಚಿತ್ರವನ್ನು ನಿರ್ದೇಶಿಸಿದರು. ಅದೇ ಹೆನ್ರಿ ಫೋಂಡಾ ಅಭಿನಯದ ‘ಮೈ ಡಾರ್ಲಿಂಗ್ ಕ್ಲಿಮೆಂಟನ್’. ಮೇಲುನೋಟಕ್ಕೆ ಒಂದು ಸೇಡು ತೀರಿಸಿಕೊಳ್ಳುವ ಸರಳ ಕತೆಯ ಚಿತ್ರವಾದರೂ ಫೋರ್ಡ್ ಎಂದಿನಂತೆ ಅಲ್ಲಿ ಮನುಷ್ಯ ಭಾವನೆಗಳ ಸಂಘರ್ಷಕ್ಕೆ ಒತ್ತು ನೀಡಿದ್ದಾರೆ. ಮಾನ್ಯುಮೆಂಟ್ ಕಣಿವೆಯ ಸುಂದರ ದೃಶ್ಯಗಳು, ದುರ್ಗಮ ಹಾದಿಯಲ್ಲಿ ಚಲಿಸುವ ಸ್ಟೇಜ್‌ಕೋಚ್, ಕುದುರೆಗಳ ಓಟ, ಗುಂಡಿನ ಕಾಳಗಗಳ ನಡುವೆಯೂ ಮನುಷ್ಯರ ಅಂತರಂಗದ ವಿವಿಧ ಪಾತಳಿಗಳನ್ನು ಇಲ್ಲಿ ತೆರೆದಿಡುತ್ತಾರೆ. ಜಾನ್‌ಫೋರ್ಡ್ ಅವರ ಚಿತ್ರಗಳ ಸಾಮಾನ್ಯ ಲಕ್ಷಣಗಳಾದ ರಾತ್ರಿಯ ದೃಶ್ಯಗಳಲ್ಲಿ ನೆರಳಿನಾಟದ ಜೊತೆಗೆ ವ್ಯಕ್ತವಾಗುವ ಮನುಷ್ಯ ಭಾವನೆಗಳು, ನಿಧಾನಗತಿಯ ನಿರೂಪಣೆ, ವಿವರಗಳನ್ನು ಸಾಂದ್ರವಾಗಿ ಕಟ್ಟಿಕೊಡುವ ದೃಶ್ಯಗಳು, ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ಗುಂಡಿನ ಕಾಳಗ, ಇತ್ಯಾದಿಗಳು ಕಲಾತ್ಮಕವಾಗಿ ಮೂಡಿಬಂದಿವೆ. ನಾಯಕನ ಪಾತ್ರದಲ್ಲಿ ಹೆನ್ರಿ ಫೋಂಡಾ ಹಾಗೂ ಕುಡುಕ ಮತ್ತು ಒರಟು ಪ್ರವೃತ್ತಿಯ ವಿಲಕ್ಷಣ ವೈದ್ಯ ಹಾಲಿಡೇ ಪಾತ್ರದಲ್ಲಿ ವಿಕ್ಟರ್ ಮೆಚೂರ್ ಅವರ ಅಭಿನಯವೂ ಈ ಚಿತ್ರವನ್ನು ಎತ್ತರಕ್ಕೊಯ್ದಿದೆ.

ಅಮೆರಿಕದ ಅಶ್ವದಳವನ್ನು ವೈಭವೀಕರಿಸಿದ ಚಿತ್ರಗಳನ್ನು ತೆಗೆಯುವುದರಲ್ಲಿ ಫೋರ್ಡ್ ಸಿದ್ಧಹಸ್ತರಾಗಿದ್ದರು. ಆ ನಿಟ್ಟಿನಲ್ಲಿ ಅವರು ಅನೇಕ ಚಿತ್ರಗಳನ್ನು ನಿರ್ದೇಶಿಸಿದರು. ‘ಶೀ ವೋರ್ ಎ ಯಲ್ಲೊ ರಿಬ್ಬನ್’, ‘ಫೋರ್ಟ್ ಅಪಾಚೆ’, ‘ದಿ ಹಾರ್ಸ್ ಸೋಲ್ಜರ್ಸ್’, ‘ಸಾರ್ಜೆಂಟ್ ರುಟ್ಲೆಡ್ಜ್’ ಮುಂತಾದವುಗಳಲ್ಲಿ ಅಮೆರಿಕದ ಪರಿಸರ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಶ್ವದಳದ ಸಾಹಸಗಳನ್ನು ನಿರೂಪಿಸಿದರು. ಈ ಚಿತ್ರಗಳಲ್ಲಿ ಫೋರ್ಡ್ ಅವರ ಪ್ರಿಯವಾದ ಪ್ರದೇಶವಾದ ಉಟ್ಹಾದಲ್ಲಿರುವ ಮಾನ್ಯುಮೆಂಟ್ ಕಣಿವೆಯ ವಿಸ್ತಾರವಾದ ಬಯಲು, ದುರ್ಗಮ ಕಣಿವೆಗಳು, ಶಿಲ್ಪಕಲೆಯಂತೆ ಕಾಣುವ ಮೊರಡಿಗಳು, ಶುಷ್ಕವಾದ ಬಯಲಿನಲ್ಲಿ ಒಂಟಿಕಾಲಲ್ಲಿ ನಿಂತ ವ್ಯಕ್ತಿಯಂತೆ ಕಾಣುವ ಪಾಪಾಸುಕಳ್ಳಿಗಳು, ಕಾಳಗದ ದೃಶ್ಯಗಳಿಗೆ ಹೇಳಿ ಮಾಡಿಸಿದಂತಹ ಬಯಲುಗಳನ್ನು ಉತ್ಕಟಪ್ರೀತಿಯಿಂದ ಫೋರ್ಡ್ ಸೆರೆಹಿಡಿದು ಚಲನಚಿತ್ರ ವೀಕ್ಷಣೆಗೊಂದು ವಿಶೇಷ ಸೊಬಗನ್ನು ನೀಡಿದರು. ಸಂಭಾಷಣೆ, ಅಭಿನಯ ಮತ್ತು ಪಾತ್ರಗಳ ಹಂಗಿಲ್ಲದೆ ಕಥನವನ್ನು ಪರಿಸರದಿಂದಲೇ ಕಟ್ಟಬಹುದೆಂಬುದನ್ನು ಈ ಚಿತ್ರಗಳಲ್ಲಿ ಫೋರ್ಡ್ ತೋರಿಸಿಕೊಟ್ಟರು.

‘ಹೌ ಗ್ರೀನ್ ವಾಸ್ ಮೈ ವ್ಯಾಲಿ’(1941) ಮತ್ತು ‘ದಿ ಕ್ವಯಟ್ ಮ್ಯಾನ್’(1952)ನಂಥ ಚಿತ್ರಗಳು ‘ಗ್ರೇಪ್ಸ್ ಆಫ್ ರಾತ್’ನಂತೆ ಕ್ಲಾಸಿಕ್ ಚಿತ್ರಗಳೆನಿಸಿಕೊಂಡವು. ಇಲ್ಲಿ ಮತ್ತೆ ಫೋರ್ಡ್ ಅವರು ಮನುಷ್ಯ-ಕುಟುಂಬದ ಸಂಬಂಧಗಳು ಶಿಥಿಲಗೊಳ್ಳುವ, ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ನಿರೂಪಣೆಗೆ ಮರಳಿ ಬಂದಿದ್ದಾರೆ. ವ್ಯಕ್ತಿಗಳ ಬಗೆಗಿನ ಒಲವು ಮತ್ತು ಮನೋ ಲೋಕದ ವಿವಿಧ ದೃಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ಫೋರ್ಡ್‌ಗೆ ಅವರೇ ಸಾಟಿಯೆಂಬುದನ್ನು ಈ ಚಿತ್ರದಲ್ಲಿ ನಿರೂಪಿಸಿದ್ದಾರೆ.

ರಿಚರ್ಡ್ ಲೆವೆಲಿನ್ ಅವರ ಕಾದಂಬರಿ ಆಧರಿಸಿದ ‘ಹೌ ಗ್ರೀನ್ ವಾಸ್ ಮೈ ವ್ಯಾಲಿ’ ತನ್ನ ಮನೋಜ್ಞ ನಿರೂಪಣೆಯಿಂದ ಮೋಡಿಹಾಕುತ್ತದೆ. ಆದರೆ ಇದು ಫೋರ್ಡ್ ಅವರ ಅತ್ಯುತ್ತಮ ಚಿತ್ರವಲ್ಲ ಎಂದು ವಿಮರ್ಶಕರು ಪರಿಗಣಿಸಿದರೂ ಆ ವರ್ಷ ಸ್ಪರ್ಧೆಯಲ್ಲಿದ್ದ, ಮುಂದೆ ಜಗತ್ತಿನ ಸರ್ವಶ್ರೇಷ್ಠ ಚಿತ್ರವೆಂದು ಕರೆಸಿಕೊಂಡ ‘ಸಿಟಿಝನ್ ಕೇನ್’ ಚಿತ್ರವನ್ನು ಹಿಂದಿಕ್ಕಿ ಅತ್ಯುತ್ತಮ ಚಿತ್ರವೆಂದು ಅಕಾಡಮಿ ಪುರಸ್ಕಾರ(ಆಸ್ಕರ್) ಗಳಿಸಿ ಅಚ್ಚರಿ ಮೂಡಿಸಿತು. ಒಟ್ಟು ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನ ಪಡೆದು ಗಮನಸೆಳೆದಿದ್ದ ಈ ಚಿತ್ರವು ನಿರ್ದೇಶನ ಮಾತ್ರವಲ್ಲದೆ ಅತ್ಯುತ್ತಮ ಚಿತ್ರ, ಕಲಾ ನಿರ್ದೇಶನ, ಛಾಯಾಗ್ರಹಣ ಹಾಗೂ ಪೋಷಕ ಪಾತ್ರ- ಹೀಗೆ ಒಟ್ಟು ಐದು ಅಕಾಡೆಮಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿತು. ಹಿಂದಿನ ವರ್ಷ (1940) ‘ಗ್ರೇಪ್ಸ್ ಆಫ್ ರಾತ್’ ಚಿತ್ರದ ನಿರ್ದೇಶನಕ್ಕೆ ಅಕಾಡಮಿ ಪ್ರಶಸ್ತಿ ಗಳಿಸಿದ ಫೋರ್ಡ್ ಅವರು ಮರುವರ್ಷವೇ(1941) ಆ ಸಾಧನೆಯನ್ನು ಪುನರಾವರ್ತಿಸಿದರು.

ಕಲ್ಲಿದ್ದಲ ಗಣಿಯ ಹತ್ತಿರವೇ ಬದುಕುವ ಆರು ಮಕ್ಕಳಿರುವ ಮೋರ್ಗನ್ ಕುಟುಂಬದ ಕೊನೆಯ ಸದಸ್ಯ ಹ್ಯೂ ಮೋರ್ಗನ್ ತಾನು ಪ್ರೀತಿಸುತ್ತಿದ್ದ ವೇಲ್ಸ್ ಕಣಿವೆಯನ್ನು ತೊರೆಯುತ್ತಾ ಹೇಳುವ ತನ್ನ ಕುಟುಂಬ ಹಾಗೂ ಕಣಿವೆಯ ಕತೆ ದೃಶ್ಯನಾಟಕವಾಗುತ್ತದೆ. ಈ ಕಾಲಕ್ಕೆ ಸ್ವಲ್ಪ ಮೆಲೋಡ್ರಮಾಟಿಕ್‌ಆಗಿ ಕಾಣುವುದು ನಿಜವಾದರೂ ಅದು ಸೆಳೆಯುವುದು ಅಲ್ಲಿನ ಶಕ್ತಿಶಾಲಿ ಕಥನದಿಂದ. ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ವೇಲ್ಸ್ ಪ್ರಾಂತದ ಕಲ್ಲಿದ್ದಲು ಕಾರ್ಮಿಕ ಕುಟುಂಬವೊಂದು ಹಾಯ್ದುಹೋಗುವ ಜೀವನಯಾತ್ರೆಯ ಕತೆಯಿದು. ಜೊತೆಗೆ ಕೈಗಾರೀಕರಣವು ನಿಧಾನಕ್ಕೆ ತರುವ ಸಾಮಾಜಿಕ-ಆರ್ಥಿಕ ಬದುಕಿನ ಪರಿವರ್ತನೆ, ಶಿಥಿಲವಾಗುವ ಕುಟುಂಬದ ಸಂಬಂಧಗಳು, ಹಸಿರು ಕಣಿವೆಯಲ್ಲಿ ನಿಧಾನವಾಗಿ ಸಂಚಯನವಾಗುವ ಕಲ್ಲಿದ್ದಲಿನ ಕಿಟ್ಟದ ಜೊತೆಗೇ ಮನುಷ್ಯ ಸಂಬಂಧಗಳಲ್ಲಿ ಉಂಟಾಗುವ ಬಿರುಕುಗಳನ್ನು ಚಿತ್ರವು ಗಾಢವಾದ ದುರಂತದೊಡನೆ ಹೇಳುತ್ತದೆ. ಜಾನ್‌ಫೋರ್ಡ್ ಹಾಲಿವುಡ್‌ನ ಇತರ ನಿರ್ದೇಶಕರಂತೆ ಬಹಿರ್ಮುಖಿಯಲ್ಲ. ತನ್ನ ಕೆಲಸದಲ್ಲಿ ಅಚಲ ನಂಬಿಕೆಯಿದ್ದ ಆತ ಇತರರ ಹತ್ತಿರ ಎಂದೂ ಬಯಲಾಗುತ್ತಿರಲಿಲ್ಲ. ಅವರೆಷ್ಟು ಅಂತರ್ಮುಖಿಯೆಂದರೆ ತಮಗೆ ಮೂರು ಬಾರಿ ಸಂದ ಅಕಾಡಮಿ ಪುರಸ್ಕಾರವನ್ನು ತೆಗೆದುಕೊಳ್ಳಲು ಒಮ್ಮೆಯೂ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಹಾಜರಾಗಲಿಲ್ಲ. ಸಮಾರಂಭ ನಡೆದ ದಿನ ಒಮ್ಮೆ ಮೀನು ಹಿಡಿಯಲು ಹೋದರೆ ಮತ್ತೊಮ್ಮೆ ಕುಡಿದು ಮಲಗಿದರು. ಇನ್ನೊಮ್ಮೆ ಯುದ್ಧ ನಡೆಯುತ್ತಿದೆ ಎಂಬ ನೆಪವೊಡ್ಡಿ ತಪ್ಪಿಸಿಕೊಂಡರು. ಹಾಗೆಯೇ ತಮ್ಮ ಚಿತ್ರಗಳ ಬಗ್ಗೆ ಎಂದೂ ಏನನ್ನೂ ಹೇಳಲು ಹೋಗಲಿಲ್ಲ.

‘‘ನನಗೆ ಚಲನಚಿತ್ರಗಳನ್ನು ರೂಪಿಸುವುದು ಪ್ರಿಯವಾದ ಕಾರ್ಯ. ಆದರೆ ಅವುಗಳ ಬಗ್ಗೆ ಮಾತನಾಡಲು ಆಗದು’’ ಎಂದು ಹೇಳುತಿದ್ದ ಫೋರ್ಡ್‌ಗೆ ಅಮೆರಿಕದ ಚಿತ್ರ ನಿರ್ಮಾಣ ಸಂಸ್ಥೆಗಳ ಕಟ್ಟುಪಾಡುಗಳ ಬಗ್ಗೆ ಬೇಸರವಿತ್ತು. ‘‘ನಮ್ಮ ವೃತ್ತಿಯಲ್ಲಿ ಕಲೆಯ ದೃಷ್ಟಿಯಿಂದ ಸೋಲುಂಟಾದರೆ ಅದು ಲೆಕ್ಕಕ್ಕೆ ಬಾರದು.ಆದರೆ ಚಿತ್ರ ಹಣ ಮಾಡಲಿಲ್ಲ ಎಂದರೆ ನಿರ್ದೇಶಕನ ಪಾಲಿಗೆ ಅದು ಕ್ರೂರ ಶಿಕ್ಷೆ. ನಿರ್ದೇಶಕನಿಗೆ ಕೆಲವು ವಾಣಿಜ್ಯ ನಿಯಮಗಳಿವೆ. ಅವುಗಳನ್ನು ಆತ ಕಡ್ಡಾಯವಾಗಿ ಪಾಲಿಸಬೇಕು. ನಿರ್ದೇಶಕನ ಯಶಸ್ಸಿನ ರಹಸ್ಯ ಅಡಗಿರುವುದೇ ಆರ್ಥಿಕವಾಗಿ ಯಶಸ್ವಿಯಾಗುವ ಚಿತ್ರಗಳ ಮೂಲಕ ತನ್ನ ವ್ಯಕ್ತಿತ್ವವನ್ನು ಅನಾವರಣಗೊಳಿಸುವುದು’’ ಎಂದು ನಂಬಿದ್ದರು. ಕಲಾವಿದರಿಂದ ಒಳ್ಳೆಯ ಅಭಿನಯ ಪಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲವರಾಗಿದ್ದ ಫೋರ್ಡ್ ತಮ್ಮ ಕಠಿಣ ವರ್ತನೆಗಾಗಿ ಸ್ಯಾಡಿಸ್ಟ್ ಬಿರುದನ್ನು ಪಡೆದಿದ್ದರು. ‘‘ಒಬ್ಬ ನುರಿತ ನಟನನ್ನು ಒಳ್ಳೆಯ ಕೌಬಾಯ್ ಆಗಿ ತಿದ್ದಬಹುದು. ಆದರೆ ಒಬ್ಬ ಕೌಬಾಯ್‌ಅನ್ನು ಕಲಾವಿದನನ್ನಾಗಿ ರೂಪಿಸುವುದು ಸುಲಭವಲ್ಲ’’ ಎಂದು ಹೇಳುತ್ತಿದ್ದ ಅವರು ಕಲಾವಿದನಿಗೆ ಪ್ರತಿಭೆಯಿಲ್ಲದಿದ್ದರೆ ಸಮರ್ಥ ನಿರ್ದೇಶಕನಿಗೂ ಅವನಿಂದ ಅಭಿನಯ ತೆಗೆಯಲು ಸಾಧ್ಯವಿಲ್ಲ ಎಂದು ನಂಬಿದ್ದರು.

ಸತತವಾಗಿ ಎರಡು ಬಾರಿ ಹಾಗೂ ವೃತ್ತಿ ಬದುಕಿನಲ್ಲಿ ಒಟ್ಟು ಮೂರುಬಾರಿ ನಿರ್ದೇಶನಕ್ಕಾಗಿ ಆಸ್ಕರ್ ಪ್ರಶಸ್ತಿ ಗಳಿಸಿದ ಏಕೈಕ ನಿರ್ದೇಶಕರಾಗಿರುವ ಜಾನ್ ಫೋರ್ಡ್ ಅವರಿಗೆ ಅಮೆರಿಕನ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಸಂಸ್ಥೆಯು 1973ರಲ್ಲಿ ‘ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್’ (ಜೀವಮಾನ ಸಾಧನೆ ಪ್ರಶಸ್ತಿ) ನೀಡಿ ಗೌರವಿಸಿತು. ಅಮೆರಿಕ ಸರಕಾರವು ನೀಡುವ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಪ್ರೆಸಿಡೆನ್ಷಿಯಲ್ ಮೆಡ

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News