ಶಿಕ್ಷಣದ ಕ್ಷೇತ್ರದಲ್ಲಿ ಕೋರ್ಟ್ ತಜ್ಞನಂತೆ ವರ್ತಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್

Update: 2022-04-17 16:49 GMT

ಹೊಸದಿಲ್ಲಿ, ಎ.18: ಶಿಕ್ಷಣ ಕ್ಷೇತ್ರದಲ್ಲಿ ನ್ಯಾಯಾಲಯವು ತಜ್ಞನಂತೆ ಕಾರ್ಯಾಚರಿಸಲು ಸಾಧ್ಯವಿಲ್ಲ ಹಾಗೂ ಶಿಕ್ಷಕ ಹುದ್ದೆಯ ಅಭ್ಯರ್ಥಿಯು ಅಗತ್ಯವಿರುವ ಅರ್ಹತೆಯನ್ನು ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಹೊಣೆಗಾರಿಕೆಯನ್ನು ಆಯಾ ಶಿಕ್ಷಣಸಂಸ್ಥೆಗಳಿಗೆ ಬಿಡಬೇಕಾಗುತ್ತದ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಆದರೆ ಉದ್ಯೋಗವೊಂದರ ಜಾಹೀರಾತಿನಲ್ಲಿ ವಿವರಿಸಲಾದ ಶೈಕ್ಷಣಿಕ ಅರ್ಹತೆಗಳಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ನ್ಯಾಯಾಲಯವು ಸಾಮಾನ್ಯವಾಗಿ ತಜ್ಞನ ಹಾಗೆ ಕಾರ್ಯನಿರ್ವಹಿಸಲುಸಾಧ್ಯವಿಲ್ಲ. ಹೀಗಾಗಿ, ವಿದ್ಯಾರ್ಥಿ ಅಥವಾ ಅಭ್ಯರ್ಥಿಯು ಪ್ರವೇಶಾತಿಗೆ ಅಗತ್ಯವಿರುವ ಅರ್ಹತೆಯನ್ನು ಹೊಂದಿದ್ದಾನೆಯೇ ಎಂಬುದನ್ನು ನಿರ್ಧರಿಸುವ ಹೊಣೆಯನ್ನು ಆಯಾ ಶಿಕ್ಷಣ ಸಂಸ್ಥೆಗಳಿಗೆ ಬಿಟ್ಟುಕೊಡುವುದು ಒಳ್ಳೆಯದು’’ ಎಂದು ನ್ಯಾಯಪೀಠ ತಿಳಿಸಿದೆ.

ಜಾರ್ಖಂಡ್ನ ಹೈಸ್ಕೂಲ್ಗಳಲ್ಲಿ ವಿಭಿನ್ನ ಪಠ್ಯವಿಷಯಗಳನ್ನು ಬೋಧಿಸಲು ತರಬೇತಿ ಪಡೆದ ಸ್ನಾತಕೋತ್ತರ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಜಾರ್ಖಂಡ್ ಹೈಕೋರ್ಟ್ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಸಲ್ಲಿಸಲಾದ ಮನವಿಗಳನ್ನು ವಜಾಗೊಳಿಸಿದ ಸಂದರ್ಭ ಸರ್ವೋಚ್ಛ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
  ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಇತಿಹಾಸದಲ್ಲಿ ಸ್ನಾತಕೋತ್ತರ ಹಾಗೂ ಸ್ನಾತಕ ಪದವಿಯನ್ನು ಹೊಂದಿರಬೇಕೆಂದು ಉಲ್ಲೇಖಿಸಲಾಗಿತ್ತು.

ಪ್ರಕರಣದಲ್ಲಿ ರಿಟ್ ಅರ್ಜಿ ಸಲ್ಲಿಸಿದವರು ಪದವಿ ಪ್ರಮಾಣಪತ್ರಗಳನ್ನು ಹೊಂದಿರುವ ಹಾಗೆ ಕಾಣುತ್ತದೆ. ಇತಿಹಾಸದ ಒಂದು ಶಾಖೆಯಾದ ಅದರಲ್ಲೂ ಮುಖ್ಯವಾಗಿ ಭಾರತದ ಪುರಾತನ ಇತಿಹಾಸದ, ಭಾರತೀಯ ಪುರಾತನ ಇತಿಹಾಸ ಹಾಗೂ ಸಂಸ್ಕೃತಿ, ಮಧ್ಯಯುಗೀಯ/ ಆಧುನಿಕ ಇತಿಹಾಸ, ಭಾರತೀಯ ಪುರಾತನ ಇತಿಹಾಸ, ಸಂಸ್ಕೃತಿ ಹಾಗೂ ಪುರಾತತ್ವ ವಿಷಯಗಳಲ್ಲಿ ಅವರು ಪ್ರಮಾಣಪತ್ರ (ಸರ್ಟಿಫಿಕೇಟ್)ಪಡೆದವರಾಗಿದ್ದಾರೆ ಎಂದರು.

‘‘ನ್ಯಾಯಾಲಯದ ದೃಷ್ಟಿಯಲ್ಲಿ, ಇತಿಹಾಸದ ಒಂದು ಶಾಖೆಯಲ್ಲಿ ಪದವಿಯನ್ನು ಪಡೆಯುವುದನ್ನು ಸಮಗ್ರ ಇತಿಹಾಸ ವಿಷಯಗಳಲ್ಲಿ ಪದವಿಯನ್ನು ಪಡೆದಂತೆ ಎಂದು ಹೇಳಲು ಸಾಧ್ಯವಿಲ್ಲ. ಇತಿಹಾಸ ಶಿಕ್ಷಕರಾಗಿ ಆತ ಆಥವಾ ಆಕೆ ಇತಿಹಾಸದ ಎಲ್ಲಾ ವಿಷಯಗಳನ್ನು ಅಂದರೆ ಪುರಾತನ ಇತಿಹಾಸ ಭಾರತೀಯ ಪುರಾತನ ಇತಿಹಾಸ ಹಾಗೂ ಸಂಸ್ಕೃತಿ, ಮಧ್ಯಯುಗೀನ/ಆಧುನಿಕ ಇತಿಹಾಸ, ಸಂಸ್ಕೃತಿ ಹಾಗೂ ಪುರಾತತ್ವ ಶಾಸ್ತ್ರ ಇವೆಲ್ಲವನ್ನೂ ಬೋಧಿಸಬೇಕಾಗುತ್ತದೆ’’ ಎಂದು ನ್ಯಾಯಪೀಠ ತಿಳಿಸಿದೆ.
 ಹೀಗಾಗಿ ಇತಿಹಾಸದ ಒಂದು ಶಾಖೆಯಲ್ಲಿ ಪದವಿಯನ್ನು ಪಡೆಯುವುದು ಸಮಗ್ರ ಇತಿಹಾಸದ ವಿಷಯಗಲ್ಲಿ ಪದವಿಯನ್ನು ಪಡೆದಂತೆ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

ಹಾಲಿ ಪ್ರಕರಣದಲ್ಲಿ ಇತಿಹಾಸ ಹಾಗೂ ಪೌರಶಾಸ್ತ್ರ ವಿಷಯಗಳ ಬೋಧನೆಗಾಗಿ ಅಧ್ಯಾಪಕರ ನೇಮಕಾತಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳನ್ನು ಜಾಹೀರಾತಿನಲ್ಲಿ ನಿರ್ದಿಷ್ಟವಾಗಿ ಪ್ರಸ್ತಾವಿಸಲಾಗಿದೆ. ಅದರಲ್ಲಿ ಯಾವುದೇ ಅಸ್ಪಷ್ಟತೆ ಅಥವಾ ಗೊಂದಲವಿರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News