"ಮಧ್ಯಪ್ರದೇಶದಲ್ಲಿನ ಕೋಮು ಹಿಂಸಾಚಾರ ನೋಡಿದರೆ ಶ್ರೀರಾಮನಿಗೂ ನೆಮ್ಮದಿಯಿರುವುದಿಲ್ಲ": ಸಂಜಯ್ ರಾವತ್

Update: 2022-04-17 17:22 GMT
PHOTO PTI

ಮುಂಬೈ,ಎ.17: ಶ್ರೀರಾಮನ ಹೆಸರಿನಲ್ಲಿ ಕೋಮು ಬೆಂಕಿಯನ್ನು ಹೊತ್ತಿಸುವುದು ಶ್ರೀರಾಮನ ಪರಿಕಲ್ಪನೆಗೇ ಅವಮಾನವಾಗಿದೆ ಎಂದು ಹೇಳಿರುವ ಶಿವಸೇನೆ ನಾಯಕ ಸಂಜಯ ರಾವುತ್ ಅವರು, ಮಧ್ಯಪ್ರದೇಶದ ಖರಗೋನ್ ನಲ್ಲಿಯ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಸ್ವತಃ ಶ್ರೀರಾಮನೂ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ ಎಂದಿದ್ದಾರೆ. ರಾಮನವಮಿಯಂದು ಖರಗೋನ್ ನಲ್ಲಿ ನಡೆದಿದ್ದ ಕೋಮು ಘರ್ಷಣೆಗಳು ಕರ್ಫ್ಯೂ ಹೇರಿಕೆಗೆ ಕಾರಣವಾಗಿದ್ದವು.

ದೇಶವನ್ನು ಒಡೆದಾದರೂ ಸರಿಯೇ, ಚುನಾವಣೆಗಳಲ್ಲಿ ಗೆಲ್ಲಲು ಧಾರ್ಮಿಕ ದ್ವೇಷದ ಬೀಜಗಳನ್ನು ಬಿತ್ತುವ ಕಾರ್ಯತಂತ್ರವನ್ನು ಬಿಜೆಪಿಯು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.ಯಾರಾದರೂ ಚುನಾವಣೆಗಳಲ್ಲಿ ಗೆಲ್ಲಲು ಮೂಲಭೂತವಾದದ ಬೆಂಕಿಯನ್ನು ಹೊತ್ತಿಸಲು ಮತ್ತು ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದರೆ ಅವರು ಎರಡನೇ ವಿಭಜನೆಯ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ರಾವುತ್ ಶಿವಸೇನೆಯ ಮುಖವಾಣಿ ‘ಸಾಮನಾ’ದಲ್ಲಿಯ ತನ್ನ ಅಂಕಣ ‘ರೋಖ್ಠೋಕ್’ನಲ್ಲಿ ಬರೆದಿದ್ದಾರೆ. ರಾವುತ್ ‘ಸಾಮನಾ’ದ ಕಾರ್ಯ ನಿರ್ವಾಹಕ ಸಂಪಾದಕರೂ ಆಗಿದ್ದಾರೆ.
ಎ.10ರಂದು ರಾಮನವಮಿ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಲ್ಲಿ ನಡೆದಿದ್ದ ಕೋಮು ಘರ್ಷಣೆಗಳನ್ನು ಪ್ರಸ್ತಾಪಿಸಿರುವ ರಾವುತ್, ಇದು ಒಳ್ಳೆಯ ಲಕ್ಷಣವಲ್ಲ. ಹಿಂದೆ ರಾಮ ನವಮಿ ಮೆರವಣಿಗೆಗಳು ಸಂಪೂರ್ಣವಾಗಿ ಸಂಸ್ಕೃತಿ ಮತ್ತು ಧರ್ಮದ ಕುರಿತಾಗಿರುತ್ತಿದ್ದವು, ಆದರೆ ಈಗ ಖಡ್ಗಗಳನ್ನು ಝಳಪಿಸಲಾಗುತ್ತಿದೆ ಮತ್ತು ಕೋಮು ವೈಷಮ್ಯವನ್ನು ಸೃಷ್ಟಿಸಲಾಗುತ್ತಿದೆ. ಮಸೀದಿಗಳ ಹೊರಗೆ ಗದ್ದಲವನ್ನೆಬ್ಬಿಸುವುದು ಹಿಂಸಾಚಾರಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.ರಾಮ ಮಂದಿರ ಆಂದೋಲನವನ್ನು ಅರ್ಧದಲ್ಲಿಯೇ ಕೈಬಿಟ್ಟವರು ಇಂದು ಶ್ರೀರಾಮನ ಹೆಸರಿನಲ್ಲಿ ಖಡ್ಗಗಳನ್ನು ಪ್ರದರ್ಶಿಸುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿಯನ್ನು ಪರೋಕ್ಷವಾಗಿ ಝಾಡಿಸಿರುವ ರಾವುತ್, ಇದನ್ನು ಹಿಂದುತ್ವ ಎಂದು ಕರೆಯಲು ಸಾಧ್ಯವಿಲ್ಲ. ಶ್ರೀರಾಮನ ಹೆಸರಿನಲ್ಲಿ ಕೋಮು ಬೆಂಕಿಯನ್ನು ಹೊತ್ತಿಸುವುದು ಶ್ರೀರಾಮನ ತತ್ತ್ವಾದರ್ಶಗಳಿಗೆ ಅವಮಾನವಾಗಿದೆ ಎಂದಿದ್ದಾರೆ.

ಎ.2ರಂದು ಯುಗಾದಿ ಪ್ರಯುಕ್ತ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಸಾಂಸ್ಕೃತಿಕ ಮೆರವಣಿಗೆಗಳು ನಡೆದಿದ್ದವು. ಆದರೆ ಈ ಮೆರವಣಿಗೆಗಳು ಮುಸ್ಲಿಮರ ಬಡಾವಣೆಗಳಿಂದ ಹಾದು ಹೋದಾಗಲೂ ಯಾವುದೇ ಹಿಂಸಾಚಾರ ನಡೆದಿರಲಿಲ್ಲ. ಎಲ್ಲ ಹಿಂಸಾಚಾರಗಳು ರಾಮ ನವಮಿಯಂದೇ ಏಕೆ ನಡೆಯುತ್ತಿವೆ? ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ ಶಾ ಅವರ ತವರು ರಾಜ್ಯ ಗುಜರಾತಿನಲ್ಲಿ ರಾಮನವಮಿ ಮೆರವಣಿಗೆಗಳ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸುತ್ತಾರೆ ಎಂದು ಯಾರಾದರೂ ನಂಬಲು ಸಾಧ್ಯವೇ ಎಂದು ರಾವುತ್ ಪ್ರಶ್ನಿಸಿದ್ದಾರೆ.ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರು ಬಿಜೆಪಿಯ ಅಜೆಂಡಾವನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಮಾರ್ಗವನ್ನು ಸುಗಮಗೊಳಿಸಲು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವುದು ಅವರ ಕಾರ್ಯಸೂಚಿಯಾಗಿದೆ ಎಂದು ಜರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News