ತಾಯಿಯನ್ನು 10 ವರ್ಷ ಮನೆಯಲ್ಲಿ ಕೂಡಿಹಾಕಿದ್ದ ಪೊಲೀಸ್, ಸೋದರನ ವಿರುದ್ಧ ಪ್ರಕರಣ ದಾಖಲು

Update: 2022-04-17 17:37 GMT
photo courtesy:twitter/@PTTVOnlineNews

ತಂಜಾವೂರು,ಎ.17: ಕಳೆದ ಹತ್ತು ವರ್ಷಗಳಿಂದಲೂ ಬೀಗ ಜಡಿದಿದ್ದ ಇಲ್ಲಿಯ ಮನೆಯೊಂದರೊಳಗೆ ಕೂಡಿ ಹಾಕಲ್ಪಟ್ಟಿದ್ದ ಜ್ಞಾನಜ್ಯೋತಿ (72) ಎಂಬ ವೃದ್ಧೆಯನ್ನು ಶನಿವಾರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿಮೋಚನೆಗೊಳಿಸಿದ್ದು, ಪೊಲೀಸರು ಹಿರಿಯ ನಾಗರಿಕರ ಕಾಯ್ದೆಯಡಿ ಆಕೆಯ ಇಬ್ಬರು ಪುತ್ರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ಪೆಕ್ಟರ್ ಷಣ್ಮುಗ ಸುಂದರಂ (50) ಮತ್ತು ಪಟ್ಟುಕೊಟ್ಟೈನಲ್ಲಿ ದೂರದರ್ಶನ ಉದ್ಯೋಗಿಯಾಗಿರುವ ವೆಂಕಟೇಶನ್ (45) ವಿರುದ್ಧ ಪೋಷಕರ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಕಲಂ 24ರಡಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಷಣ್ಮುಗ ಸುಂದರಂ, ಪ್ರತಿ ತಿಂಗಳು ತನ್ನ ತಾಯಿಯ ಪಿಂಚಣಿ ಹಣ 30,000 ರೂ.ಗಳನ್ನ್ನು ವೆಂಕಟೇಶನ್ ಬಳಸುತ್ತಿದ್ದ ಮತ್ತು ಆಕೆಯ ಅನಾರೋಗ್ಯಕ್ಕೆ ಆತನೇ ಹೊಣೆಯಾಗಿದ್ದಾನೆ ಎಂದು ಆರೋಪಿಸಿದರು.
ತೀರ ನಿತ್ರಾಣ ಸ್ಥಿತಿಯಲ್ಲಿದ್ದ ಮಹಿಳೆಯೋರ್ವಳು ತನ್ನ ಮನೆಯಲ್ಲಿ ಬೆತ್ತಲೆಯಾಗಿ ಬಿದ್ದುಕೊಂಡಿದ್ದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ಬಳಿಕ ಅಪಚರಿಚಿತ ವ್ಯಕ್ತಿಯೋರ್ವ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದ.

ಮಹಿಳೆಯನ್ನು ತಂಜಾವೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ತ್ವರಿತ ಚೇತರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿನೇಶ ಪೊನ್ನುರಾಜ್ ಆಲಿವರ್ ತಿಳಿಸಿದರು.ಜ್ಞಾನಜ್ಯೋತಿಯ ಮಕ್ಕಳು ಬೇರೆ ಕಡೆ ವಾಸವಿದ್ದು ತಾಯಿಗೆ ಆಹಾರವನ್ನು ಒದಗಿಸಲು ವ್ಯವಸ್ಥೆ ಮಾಡಿದ್ದರು. ತನಗೆ ಹಸಿವಾದಾಗಲೆಲ್ಲ ಆಕೆ ಕೂಗುತ್ತಿದ್ದರು ಮತ್ತು ನೆರೆಕರೆಯವರು ಕಿಟಕಿಯ ಮೂಲಕ ಬೀಗ ಹಾಕಿದ್ದ ಮನೆಯೊಳಗೆ ಬಿಸ್ಕಿಟ್ ಅಥವಾ ಹಣ್ಣುಗಳನ್ನು ಎಸಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು.ಪುತ್ರರು ಚಾವಿಯನ್ನು ನೀಡಲು ನಿರಾಕರಿಸಿದ ಬಳಿಕ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಬೀಗವನ್ನು ಮುರಿದು ಮಹಿಳೆಯನ್ನು ರಕ್ಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News