ನಿರುದ್ಯೋಗ ಸಮಸ್ಯೆ: ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸಂಸದ ವರುಣ್‍ ಗಾಂಧಿ

Update: 2022-04-18 03:33 GMT

ಪಿಲಿಬಿಟ್: ದೇಶದಲ್ಲಿ 1.5 ಕೋಟಿ ಹುದ್ದೆಗಳು ಖಾಲಿ ಇದ್ದರೂ, ನಿರುದ್ಯೋಗಿ ಯುವಕರು ಖಾಲಿ ಹೊಟ್ಟೆಯಲ್ಲಿ ಅಲೆದಾಡುವ ಪರಿಸ್ಥಿತಿ ಇದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ತಮ್ಮ ಕ್ಷೇತ್ರಕ್ಕೆ ಎರಡು ದಿನಗಳ ಭೇಟಿ ನೀಡಿರುವ ಅವರು, ನಿರುದ್ಯೋಗ ಸಮಸ್ಯೆ ಬಗ್ಗೆ ತಮ್ಮದೇ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಮುಜುಗರ ಮೂಡಿಸಿದ್ದಾರೆ. ಕೋಟ್ಯಂತರ ನಿರುದ್ಯೋಗಿಗಳಿಗೆ ಮುಂದೆ ಏನಾಗುತ್ತದೆ ಎನ್ನುವುದು ತಿಳಿಯದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.

"ನಮ್ಮ ಹೋರಾಟ ಉದ್ಯೋಗ ಮತ್ತು ಆರ್ಥಿಕ ಸಮಾನತೆಗಾಗಿ. ಪ್ರತಿಯೊಬ್ಬರಿಗೂ ಸಮಾನ ಆರ್ಥಿಕ ಅವಕಾಶ ಲಭಿಸಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಪ್ರತಿಯೊಬ್ಬರಿಗೂ ಉದ್ಯೋಗ ಇದ್ದಾಗ ಇದು ಸಾಧ್ಯವಾಗುತ್ತದೆ. ಯಾರ ಬ್ಯಾಂಕ್ ಖಾತೆಗೂ ಹಣ ಬರುತ್ತಿಲ್ಲ. ಆಶ್ವಾಸನೆ ನೀಡಿದಂತೆ ಎರಡು ಕೋಟಿ ಉದ್ಯೋಗವನ್ನೂ ನೀಡಿಲ್ಲ. ರೈತರ ಆದಾಯ ದುಪ್ಪಟ್ಟು ಕೂಡಾ ಆಗಿಲ್ಲ" ಎಂದು ಗಾಂಧಿ ಹೇಳಿಕೆ ನೀಡಿದ್ದಾರೆ.

ಅಣ್ಣಾ ಹಝಾರೆ ಚಳವಳಿ ಮತ್ತು ರೈತ ಹೋರಾಟವನ್ನು ಕೂಡಾ ಉಲ್ಲೇಖಿಸಿರುವ ವರುಣ್, "ಅಣ್ಣಾ ಹಝಾರೆಯವರ ಚಳವಳಿಯನ್ನು ಬೆಂಬಲಿಸಿ ಧರಣಿ ಕುಳಿತ ಮೊದಲ ಸಂಸದ ನಾನು. ರೈತರ ಹೋರಾಟ ಆರಂಭವಾದಾಗ, ನಾನು ಅಧಿಕಾರಿಗಳನ್ನು ಕರೆದು ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದೆ" ಎಂದು ವಿವರಿಸಿದ್ದಾರೆ.

ಖಮಾರಿಯಾ ಸೇತುವೆ ಬಳಿ ವರುಣ್‍ ಗಾಂಧಿಗೆ ಸ್ವಾಗತ ಕೋರಲು ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದರು. ರಾಜಕೀಯ ಎನ್ನುವುದು ದೇಶ ಕಟ್ಟುವ ಸಾಧನವಾಗಬೇಕು ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಸಲಹೆ ಮಾಡಿದರು.

"ದೇಶದ ನೈಜ ಹೋರಾಟ ನಡೆಯಬೇಕಿರುವುದು ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ. ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ವೈರತ್ವವನ್ನು ಬಿಟ್ಟು, ದೇಶದ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು" ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News