ಮೋಸದಿಂದ ಭಾರತೀಯ ಕಂಪನಿಗಳ ನಿರ್ದೇಶಕರಾಗಿರುವವರ ವಿರುದ್ಧ ಪ್ರಕರಣ ದಾಖಲು

Update: 2022-04-18 17:24 GMT

ಮುಂಬೈ,ಎ.18: ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ಘಟಕ (ಇಒಡಬ್ಲು)ವು ನೂತನ ಕಂಪನಿಗಳ ನೋಂದಣಿಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆ ಮತ್ತು ಮೋಸದಿಂದ ಭಾರತೀಯ ಕಂಪನಿಗಳ ನಿರ್ದೇಶಕರಾಗಿರುವ ಆರೋಪದಲ್ಲಿ 60 ವಿದೇಶಿಯರು ಸೇರಿದಂತೆ 150 ಜನರ ವಿರುದ್ಧ 34 ಎಫ್ಐಆರ್ ಗಳನ್ನು ದಾಖಲಿಸಿದೆ.

ಎ.1ರಿಂದ 15ರ ನಡುವಿನ ಅವಧಿಯಲ್ಲಿ ಈ ಎಫ್ಐಆರ್ ಗಳು ದಾಖಲಾಗಿದ್ದು, ಮಂಗಳವಾರದವರೆಗೆ ಇನ್ನೂ ನಾಲ್ಕು ಎಫ್ಐಆರ್ ಗಳನ್ನು ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಸೋಮವಾರ ಇಲ್ಲಿ ತಿಳಿಸಿದರು.

ಪ್ರಕರಣಗಳು ದಾಖಲಾಗಿರುವ 60 ವಿದೇಶಿಯರಲ್ಲಿ 40 ಜನರು ಚೀನಾದವರಾಗಿದ್ದು,ಇತರರು ಸಿಂಗಾಪುರ, ಬ್ರಿಟನ್, ತೈವಾನ್, ಅಮೆರಿಕ, ಸೈಪ್ರಸ್, ಯುಎಇ ಮತ್ತು ದ.ಕೊರಿಯಾಕ್ಕೆ ಸೇರಿದವರಾಗಿದ್ದಾರೆ.

ಪ್ರಾಥಮಿಕ ತನಿಖೆಯಂತೆ ಆರೋಪಿಗಳು ಮುಂಬೈನ ಕಂಪನಿಗಳ ನೋಂದಣಾಧಿಕಾರಿ (ಆರ್‌ಒಸಿ)ಗಳಿಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದರು. ಕೆಲವು ಪ್ರಕರಣಗಳಲ್ಲಿ ಕಂಪನಿಗಳ ಸಂವಹನ ವಿಳಾಸಗಳು ಬದಲಾಗಿರುವುದು ಕಂಡು ಬಂದಿದೆ ಎಂದು ಇಒಡಬ್ಲು ಅಧಿಕಾರಿಯೋರ್ವರು ತಿಳಿಸಿದರು.

34 ಎಫ್ಐಆರ್ ಗಳಲ್ಲಿ 30ಕ್ಕೂ ಅಧಿಕ ಚಾರ್ಟರ್ಡ್ ಅಕೌಂಟಂಟ್ ಗಳು, 30 ಕಂಪನಿ ಕಾರ್ಯದರ್ಶಿಗಳು ಮತ್ತು ಕಂಪನಿ ನಿರ್ದೇಶಕರನ್ನೂ ಹೆಸರಿಸಲಾಗಿದೆ.

ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಆರ್ಒಸಿ ದಾಖಲಿಸಿರುವ ದೂರುಗಳಂತೆ ವಿದೇಶಿ ಪ್ರಜೆಗಳು ಮೋಸದಿಂದ ಭಾರತದಲ್ಲಿ ಸ್ಥಾಪಿತಗೊಂಡ ಕಂಪನಿಗಳ ಮಾಲಿಕರು ಮತ್ತು ನಿರ್ದೇಶಕರಾಗಿದ್ದಾರೆ.

ಮೊದಲ ಎಫ್ಐಆರ್ ಫೆಬ್ರವರಿಯಲ್ಲಿ ದಾಖಲಾಗಿದ್ದು, ತನಿಖೆಯನ್ನು ಇಗ ಇಒಡಬ್ಲು ಹಸ್ತಾಂತರಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News