ಹಿಂದಿನ ಸರ್ಕಾರಗಳಿಂದ 3 ಲಕ್ಷ ಕೋಟಿ ರೂ. ಸಾಲ ವಸೂಲಿಗೆ ಕ್ರಮ: ಪಂಜಾಬ್ ಸಿಎಂ

Update: 2022-04-19 01:59 GMT
ಭಗವಂತ್ ಸಿಂಗ್

ಚಂಡೀಗಢ: ಹಿಂದಿನ ಸರ್ಕಾರ ರಾಜ್ಯದಲ್ಲಿ ಮಾಡಿದ್ದ ಮೂರು ಲಕ್ಷ ಕೋಟಿ ರೂಪಾಯಿ ಸಾಲವನ್ನು ಆಮ್ ಆದ್ಮಿ ಪಕ್ಷದ ಹೊಸ ಸರ್ಕಾರ ಹಿಂದೆ ಆಡಳಿತದಲ್ಲಿದ್ದವರನ್ನು ಹೊಣೆಗಾರರನ್ನಾಗಿ ಮಾಡಿ ವಸೂಲಾತಿಗೆ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಭಗವಂತ್ ಸಿಂಗ್ ಹೇಳಿದ್ದಾರೆ.

"ಈ ನಿಧಿಯನ್ನು ಎಲ್ಲಿ ಬಳಸಲಾಗಿದೆ? ನಾವು ಈ ಬಗ್ಗೆ ತನಿಖೆ ನಡೆಸಿ ವಸೂಲಿ ಮಾಡಲಿದ್ದೇವೆ. ಏಕೆಂದರೆ ಇದು ಸಾರ್ವಜನಿಕ ಹಣ" ಎಂದು ಸಿಎಂ ಹೇಳಿಕೆಯನ್ನು ಉಲ್ಲೇಖಿಸಿ ಎಎಪಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಿಂದ ಟ್ವೀಟ್ ಮಾಡಿದೆ.

2017ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಸಮ್ಮಿಶ್ರ ಸರ್ಕಾರದಲ್ಲಿದ್ದ ಶಿರೋಮಣಿ ಅಕಾಲಿ ದಳ ಮಾನ್ ಅವರ ನಿರ್ಧಾರವನ್ನು ಸ್ವಾಗತಿಸಿದೆ. ಆದರೆ ಈ ತನಿಖೆ, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಾಧನವಾಗಬಾರದು. ಆಮ್ ಆದ್ಮಿ ಪಕ್ಷ ಈಗಾಗಲೇ ರಾಜ್ಯದ ಜನತೆಗೆ ನೀಡಿರುವ ಭರವಸೆಯನ್ನು ಅದು ಈಗ ಈಡೇರಿಸಬೇಕು ಎಂದು ಆಗ್ರಹಿಸಿದೆ.

ರಾಜ್ಯದ ಹಣಕಾಸು ಆರೋಗ್ಯ ಸ್ಥಿತಿ ಸದ್ಯಕ್ಕೆ ದಯನೀಯವಾಗಿದೆ. 2021-22ರ ಬಜೆಟ್ ಅಂದಾಜಿನ ಪ್ರಕಾರ, ಬಾಕಿ ಇರುವ ಸಾಲ 2.82 ಲಕ್ಷ ಕೋಟಿ ರೂಪಾಯಿ ಆಗಿದ್ದು, ಒಟ್ಟು ಅಂದಾಜು ಖರ್ಚು, 2019-20ರಲ್ಲಿ ಇದ್ದ 1.34 ಲಕ್ಷ ಕೋಟಿ ಇದೀಗ 1.68 ಲಕ್ಷ ಕೋಟಿ ಆಗಿದೆ.

ಚುನಾವಣೆಗೆ ಮುನ್ನ ಪಂಜಾಬ್ ಆಮ್ ಆದ್ಮಿ ಪಕ್ಷದ ಉಸ್ತುವಾರಿ ಹೊಂದಿದ್ದ ರಾಘವ ಛಡ್ಡಾ ಅವರು, ಹಿಂದಿನ ಅಖಾಲಿ ಬಿಜೆಪಿ ಸರ್ಕಾರ ಮತ್ತು ಬಳಿಕ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿವೆ ಎಂದು ಆಪಾದಿಸಿದ್ದರು. ಇದರ ಕಾರಣದಿಂದಾಗಿ ಪಂಜಾಬ್‍ನಲ್ಲಿ ಪ್ರತಿಯೊಂದು ಮಗು ಕೂಡಾ ಒಂದು ಲಕ್ಷ ರೂಪಾಯಿ ಸಾಲದ ಹೊರೆಯೊಂದಿಗೆ ಹುಟ್ಟುತ್ತದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News