×
Ad

ಉಡುಪಿ: ನಗದು, ಆಭರಣಗಳನ್ನು ಸುಲಿಗೆ ಮಾಡಿದ್ದ ಆರೋಪಿಗಳಿಗೆ ಶಿಕ್ಷೆ

Update: 2022-04-19 19:27 IST

ಉಡುಪಿ : ಮನೆ ಹಾಗೂ ಅಂಗಡಿಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿದ್ದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2008ರ ಡಿಸೆಂಬರ್ 8ರಂದು ರಾತ್ರಿ 9 ಗಂಟೆಯ ಸುಮಾರಿಗೆ ಉಡುಪಿಯ ಮಾರಾಳಿ ಗ್ರಾಮದ ಉಮಾನಾಥ ಶೆಟ್ಟಿ, ಬೆಂಗಳೂರಿನ ಮಾರತ್‌ ಹಳ್ಳಿಯ ಶ್ರೀಧರ್ ಆಲಿಯಾಸ್ ಪ್ರಕಾಶ್, ಹಾಸನದ ಸುನೀಲ್‌ ಕುಮಾರ್ ಹಾಗೂ ಮಂಗಳೂರು ಕಂದಾವರ ಗ್ರಾಮದ ಸಂತೋಷ್ ಅಲಿಯಾಸ್ ಅಲ್ವಿನ್ ಪಿಂಟೋ ಎಂಬ ನಾಲ್ಕು ಜನ ಆರೋಪಿಗಳು, ಉಡುಪಿ ತಾಲೂಕು ನಾಲ್ಕೂರು ಗ್ರಾಮದ ಮುದ್ದೂರಿನ ಬಾಲಕೃಷ್ಣ ವೈದ್ಯ ಎಂಬ ವ್ಯಕ್ತಿಯ ಮನೆ ಮತ್ತು ಅಂಗಡಿಗೆ ಪ್ರವೇಶಿಸಿ, ರಿವಾಲ್ವರ್ ತೋರಿಸಿ, ಬೆದರಿಕೆ ಹಾಕಿ, ಮನೆಯಲ್ಲಿದ್ದ ಮೂವರನ್ನು ಕಟ್ಟಿಹಾಕಿ, 15000 ರೂ. ನಗದು, 71 ಪವನ್ ಚಿನ್ನ ಮತ್ತು 5 ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ಆರೋಪಿಗಳಾದ ಉಮಾನಾಥ ಶೆಟ್ಟಿ,  ಸುನೀಲ್ ಕುಮಾರ್ ಹಾಗೂ ಸಂತೋಷ್ ಅಲಿಯಾಸ್ ಅಲ್ವಿನ್ ಪಿಂಟೋಗೆ ತಲಾ 3 ವರ್ಷ 6 ತಿಂಗಳು ಕಾರಾಗೃಹ ವಾಸ ಶಿಕ್ಷೆ ಹಾಗೂ 10500 ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕರಾದ ಬದರಿನಾಥ ನಾರಿ ಮತ್ತು ಜಯಂತಿ ಕೆ. ವಾದ ಮಂಡಿಸಿದ್ದರು. ಪ್ರಕರಣದ ಎರಡನೇ ಆರೋಪಿಯಾದ ಶ್ರೀಧರ್ ಆಲಿಯಾಸ್ ಪ್ರಕಾಶ್ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News