×
Ad

ಕಮಲಾ ಹ್ಯಾರಿಸ್‌ಗೆ ರಕ್ಷಣಾ ಸಲಹೆಗಾರ್ತಿಯಾಗಿ ಭಾರತೀಯ ಮೂಲದ ಶಾಂತಿ ಸೇಠಿ ನೇಮಕ

Update: 2022-04-19 22:49 IST
ಕಮಲಾ ಹ್ಯಾರಿಸ್‌

ಹೊಸದಿಲ್ಲಿ, ಎ.19: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ನೂತನ ಕಾರ್ಯನಿರ್ವಹಣಾ ಕಾರ್ಯದರ್ಶಿ ಹಾಗೂ ರಕ್ಷಣಾ ಸಲಹೆಗಾರ್ತಿಯಾಗಿ ಅಮೆರಿಕನ್ ನೌಕಾಪಡೆಯ ಮಾಜಿ ಕಮಾಂಡರ್, ಭಾರತೀಯ ಮೂಲದ ಶಾಂತಿ ಸೇಠಿ ನೇಮಕಗೊಂಡಿದ್ದಾರೆ.

ಶಾಂತಿ ಸೇಠಿ ಅವರು ಅಮೆರಿಕದ ಪ್ರಮುಖ ಸಮರ ನೌಕೆಯಲ್ಲಿ ಕಮಾಂಡರ್ ಆಗಿ ಕಾರ್ಯನಿರ್ವಹಿಸಿರುವ ಪ್ರಪ್ರಥಮ ಭಾರತೀಯ ಮೂಲದ ಸೇನಾಧಿಕಾರಿಣಿಯಾಗಿದ್ದಾರೆ. ಅವರು ಇತ್ತೀಚೆಗೆ ಕಮಲಾ ಹ್ಯಾರಿಸ್ ಅವರ ರಕ್ಷಣಾ ಸಲಹೆಗಾರ್ತಿಯಾಗಿ ಹಾಗೂ ಕಾರ್ಯನಿರ್ವಹಣಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆಂದು ಉಪಾಧ್ಯಕ್ಷೆಯ ಹಿರಿಯ ಸಲಹೆಗಾರರಾದ ಹರ್ಬಿ ಝಿಸ್ಕೆಂಡ್ ತಿಳಿಸಿದ್ದಾರೆ.

ಉಪಾಧ್ಯಕ್ಷೆಯ ಭದ್ರತಾ ಸಲಹೆಗಾರ್ತಿಯಾಗಿ ಸೇಠಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಕಾರ್ಯಾಲಯ ಹಾಗೂ ಉಪಾಧ್ಯಕ್ಷೆಯ ಕಾರ್ಯಾಲಯದ ನಡುವೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಿದ್ದಾರೆ. 2012ರ ಮೇ ಹಾಗೂ 2010ರ ಡಿಸೆಂಬರ್ ನಡುವೆ ಸೇಠಿ ಅವರು ಕ್ಷಿಪಣಿ ನಿರ್ದೇಶಿತ ಸಮರ ನೌಕೆ ಯುಎಸ್‌ಎಸ್ ಡೆಕಾಟರ್‌ನ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದರು. ಸೇಠಿ ಅವರು ಭಾರತಕ್ಕೆ ಭೇಟಿ ನೀಡಿದ ಅಮೆರಿಕ ನೌಕಾಪಡೆಯ ಪ್ರಪ್ರಥಮ ಮಹಿಳಾ ಕಮಾಂಡರ್ ಕೂಡಾ ಆಗಿದ್ದಾರೆ.

ಸೇಠಿ ಅವರು ಅಮೆರಿಕದ ನೆವಾಡಾ ರಾಜ್ಯದ ರೆನೊದಲ್ಲಿ ಭಾರತೀಯ ಮೂಲದ ತಂದೆತಾಯಿಗಳಿಗೆ ಜನಿಸಿದರು. ಅವ ತಂದೆ 1960ರ ದಶಕದಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅವರ ತಾಯಿ ಕೆನಡಾದಲ್ಲಿ ಜನಿಸಿದ್ದರೂ, 12ನೇ ವಯಸ್ಸಿನ ಅಮೆರಿಕದ ಪೌರತ್ವ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News