ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಉಕ್ರೇನ್ ಪಡೆಗಳಿಗೆ ರಶ್ಯ ಕರೆ
ಮಾಸ್ಕೊ, ಮಾ.19: ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ಸೂಚನೆ ನೀಡಿರುವ ರಶ್ಯವು ತಕ್ಷಣವೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗುವಂತೆ ಉಕ್ರೇನ್ ಪಡೆಗಳಿಗೆ ಕರೆ ನೀಡಿದೆ. ತಾನು ದಿಗ್ಬಂಧನ ಹಾಕಿರುವ ಬಂದರು ನಗರವಾದ ಮಾರಿಯುಪೊಲ್‌ನಲ್ಲಿ ಹೋರಾಟವನ್ನು ಕೈಬಿಡುವಂತೆ ಅದು ಉಕ್ರೇನ್ ಸೈನಿಕರಿಗೆ ಕಟ್ಟಕಡೆಯ ಎಚ್ಚರಿಕೆ ನೀಡಿದೆ.
‘‘ಪೂರ್ವ ಉಕ್ರೇನ್ ಮೇಲೆ ರಶ್ಯವು ಹೊಸತಾಗಿ ಆಕ್ರಮಣ ಮಾಡಲು ಆರಂಭಿಸಿದೆಯೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ ಬೆನ್ನಲ್ಲೇ ರಶ್ಯದ ರಕ್ಷಣಾ ಸಚಿವಾಲಯವು ಈ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
‘‘ವಿವೇಕರಹಿತವಾದ ಹೋರಾಟವನ್ನು ಕೈಬಿಡುವಂತೆ ಉಕ್ರೇನ್ ಅಧಿಕಾರಿಗಳಿಂದ ಯಾವುದೇ ಸೂಚನೆ ಅಥವಾ ಆದೇಶವು ಅವರ ಸೈನಿಕರಿಗೆ ದೊರೆಯಲಾರದೆಂಬುದು ನಮಗೆ ಅರಿವಿದೆ. ಹೀಗಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಸ್ವಯಂಪ್ರೇರಿತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಉಕ್ರೇನ್ ಹೋರಾಟಗಾರರಿಗೆ ನಾವು ಕರೆ ನೀಡುತ್ತಿದ್ದೇವೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆದಾಗ್ಯೂ ಪೂರ್ವ ಉಕ್ರೇನ್‌ನಲ್ಲಿ ತಾನು ಆರಂಭಿಸಿರುವ ನೂತನ ಸೇನಾ ಆಕ್ರಮಣದ ಬಗ್ಗೆ ರಶ್ಯ ಯಾವುದೇ ಪ್ರಸ್ತಾವವನ್ನು ಮಾಡಿಲ್ಲ. ಮಾರಿಯುಪೋಲ್‌ನಲ್ಲಿನ ಸೀ ಆಫ್ ಅರೆವ್ ಬಂದರಿನೆಡೆಗೆ ಮುನ್ನುಗ್ಗುತ್ತಿರುವ ರಶ್ಯ ಸೇನೆಯೊಂದಿಗೆ ಉಕ್ರೇನ್‌ನ ಹೋರಾಟಗಾರರು ಸಂಘರ್ಷ ನಡೆಸುತ್ತಿದ್ದು, ಪರಿಸ್ಥಿತಿ ಅಲ್ಲಿ ಅತ್ಯಂತ ವಿನಾಶಕಾರಿಯಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.
‘‘ರಶ್ಯದ ಸಶಸ್ತ್ರ ಪಡೆಗಳು ಉಕ್ರೇನ್ ರಾಷ್ಟ್ರವಾದಿಗಳ ಬೆಟಾಲಿಯನ್‌ಗಳ್ನು ಹಾಗೂ ವಿದೇಶಿಬಾಡಿಗೆ ಹಂತಕರು ಮಿಲಿಟರಿ ಚಟುವಟಿಕೆಗಳನ್ನು ನಡೆಸುವುದನ್ನು ನಿಲ್ಲಿಸಲು ಹಾಗೂ ಶಸ್ತ್ರಾಸ್ತ್ರ ತ್ಯಜಿಸಲು ರಶ್ಯದ ಸಶಸ್ತ್ರಪಡೆಗಳು ಮತ್ತೊಮ್ಮೆ ಕೊಡುಗೆ ನೀಡಿವೆ. ‘‘ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಪ್ರತಿಯೊಬ್ಬರ ಪ್ರಾಣಕ್ಕೂ ಸುರಕ್ಷತೆಯನ್ನು ನೀಡಲಾಗುವುದು’’ ಎಂದು ರಶ್ಯ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಪೂರ್ವ ಉಕ್ರೇನ್‌ನಲ್ಲಿ ಹೊಸ ಆಕ್ರಮಣ ಆರಂಭಿಸಿದ ರಶ್ಯ ಸೇನೆ
ಪೂರ್ವ ಉಕ್ರೇನ್‌ನಲ್ಲಿ ಹೊಸದಾಗಿ ಆಕ್ರಮಣವನ್ನು ಆರಂಭಿಸಿರುವ ರಶ್ಯದ ಪಡೆಗಳು ಮಂಗಳವಾರ ಅಲ್ಲಿ 12ಕ್ಕೂ ಅಧಿಕ ವಾಯುದಾಳಿಗಳನ್ನು ನಡೆಸಿದೆ. ಡೊನ್‌ಬಾಸ್‌ನಲ್ಲಿರುವ 13 ಉಕ್ರೇನಿಯನ್ ಸೇನಾನೆಲೆಗಳ ಮೇಲೆ ಅತ್ಯಧಿಕ ನಿಖರತೆಯಿಂದ ಕೂಡಿರುವ ಕ್ಷಿಪಣಿಗಳು ಅಪ್ಪಳಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ಡೊನ್‌ಬಾಸ್ ಪ್ರಾಂತದ ಪ್ರಮುಖ ಪಟ್ಟಣವಾದ ಸೊವಿಯಾನ್‌ಸ್ಕ್ ಸೇರಿದಂತೆ ಉಕ್ರೇನ್‌ನ 60ಕ್ಕೂ ಅಧಿಕ ಮಿಲಿಟರಿ ಆಸ್ತಿಗಳ ಮೇಲೆ ವಾಯುದಾಳಿಗಳು ನಡೆದಿರುವುದಾಗಿ ಅದು ಹೇಳಿದೆ. ಚೆವೊರ್ನಾ ಪೊಲಿಯಾನದಲ್ಲಿರುವ ಟೊಚ್ಕಾ-ಯು ವ್ಯೂಹಾತ್ಮಕ ಕ್ಷಿಪಣಿ ಸಿಡಿತಲೆಗಳನ್ನು ಸಂಗ್ರಹಿಸಿಡಲಾದ ಗೋದಾಮುಗಳನ್ನು ಕೂಡಾ ರಶ್ಯದ ಪಡೆಗಳು ನಾಶಪಡಿಸಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಒಟ್ಟಾರೆಯಾಗಿ ಉಕ್ರೇನ್ 1260 ಸೇನಾ ಗುರಿಗಳ ಮೇಲೆ ರಾಕೆಟ್‌ಗಳು ಹಾಗೂ ಫಿರಂಗಿಗಳಿಂದ ಅಹೋರಾತ್ರಿ ದಾಳಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ರಶ್ಯದ ವಾಯುರಕ್ಷಣಾ ವ್ಯವಸ್ಥೆಗಳು ಡೊನೆಟ್‌ಸ್ಕ್ ಪ್ರಾಂತದಲ್ಲಿರುವ ಮಾಲಿನ್‌ವ್ಕಾದ ಸಮೀಪ ಉಕ್ರೇನ್‌ನ ಮಿಗ್‌ಫೈಟರ್ ವಿಮಾನವೊಂದನ್ನು ರಶ್ಯದ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಹೇಳಿಕೆ ತಿಳಿಸಿದೆ.