×
Ad

ಬೆಲೆ ಏರಿಕೆಗೆ ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಕಾರಣ: ಎಚ್.ನರಸಿಂಹ

Update: 2022-04-20 19:06 IST

ಉಡುಪಿ : ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರಕಾರ ಅನುಸರಿಸುತ್ತಿರುವ ಆರ್ಥಿಕ ನೀತಿಗಳೇ ಕಾರಣ ಹೊರತು ಕರೋನ, ಕಾಂಗ್ರೆಸ್, ರಷ್ಯಾ ಯುಕ್ರೇನ್ ಯುದ್ಧ ಅಲ್ಲ ಎಂದು ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ ಹೇಳಿದ್ದಾರೆ.

ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಡಿಸೇಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಬುಧವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನು ದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜನರ ಸಮಸ್ಯೆಗಳನ್ನು ಬಗೆಹರಿಸಲಾಗದ ಆಡಳಿತ ವೈಫಲ್ಯಕ್ಕೆ ಬಿಜೆಪಿ ನೇತೃತ್ವದ ಸರಕಾರ ಒಂದೊಂದು ಕುಂಟು ನೆಪ, ಸುಳ್ಳುಗಳನ್ನೇ ಹೇಳುತ್ತ ಅಧಿಕಾರ ನಡೆಸುತ್ತ ತೆರಿಗೆಗಳನ್ನು ಸಂಗ್ರಹಿಸಿ ಬಡ ಚಾಲಕರ ಬದುಕನ್ನು ದುಸ್ಥಿತಿಗೆ ದೂಡುತ್ತಿದೆ. ತೈಲ, ಗ್ಯಾಸ್ ಬೆಲೆ ಏರಿಕೆಯನ್ನು ಮರೆಮಾಚಲು ಜನರನ್ನು ಧರ್ಮದ ವಿಚಾರಗಳನ್ನು ಮುನ್ನಲೆಗೆ ತರುತ್ತಿರುವುದು ಅಪಾಯಕಾರಿ ಎಂದು ಅವರು ದೂರಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ರಿಕ್ಷಾ ಚಾಲಕರು ಹಗಲು ರಾತ್ರಿ ದುಡಿದ ಆದಾಯವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಬೊಕ್ಕಸ ತುಂಬಿಸುತ್ತಿದ್ದಾರೆ. ಚಾಲಕರು ತೈಲ ಬೆಲೆ ಏರಿಕೆ ವಿರುದ್ಧ ಮಾತನಾಡದದಿದ್ದರೆ ಅವರು ಕುಟುಂಬ ನಿರ್ವಹಿಸಲು ಸಾಧ್ಯವಾಗದೇ ಬೀದಿಗೆ ಬೀಳುವ ಎಲ್ಲಾ ಅಪಾಯಗಳಿವೆ. ಸರಕಾರವು ಕೂಡಲೇ ಏರಿಸಿದ ಗ್ಯಾಸ್, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕೆಂದು ಆಗ್ರಹಿಸಿ ದರು.

ಬಳಿಕ ಈ ಕುರಿತ ಮನವಿಯನ್ನು ಕುಂದಾಪುರ ತಹಸಿಲ್ದಾರ್ ಕಿರಣ್ ಗೋರಯ್ಯ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಿಕ್ಷಾ ಚಾಲಕರ ಮುಖಂಡ ಚಂದ್ರಶೇಖರ ವಿ., ಸಂಘದ ಅಧ್ಯಕ್ಷ ಲಕ್ಷ್ಮಣ ಬರೇಕಟ್ಟು, ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ರಮೇಶ್ ವಿ.ಉಮೇಶ ಶೇರಿ ಗಾರ್, ನರಸಿಂಹ ಪೂಜಾರಿ, ರವಿ ವಿ.ಎಂ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News