ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ರನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಆದೇಶ‌

Update: 2022-04-20 15:58 GMT

ಲಂಡನ್, ಎ.20: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ರನ್ನು ಅಮೆರಿಕಕ್ಕೆ ಹಸ್ತಾಂತರಿಸುವಂತೆ ಬ್ರಿಟನ್‌ನ ನ್ಯಾಯಾಲಯ ಬುಧವಾರ ಔಪಚಾರಿಕ ಆದೇಶ ಜಾರಿಗೊಳಿಸಿದ್ದು ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲೆಂಡಿನಲ್ಲಿ ದೀರ್ಘಾವಧಿಯಿಂದ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆ ಅಂತ್ಯಗೊಳ್ಳುವ ನಿರೀಕ್ಷೆಯಿದೆ.

   ಇರಾಕ್ ಮತ್ತು ಅಫ್ಗಾನ್ ಯುದ್ಧಕ್ಕೆ ಸಂಬಂಧಿಸಿದ ಅಮೆರಿಕ ರಕ್ಷಣಾ ಇಲಾಖೆಯ ರಹಸ್ಯ ದಾಖಲೆಗಳನ್ನು ಪ್ರಕಟಿಸಿದ ಆರೋಪದ ವಿಚಾರಣೆಯನ್ನು ಅಸಾಂಜ್ ಎದುರಿಸಬೇಕಿದೆ. ಅಸಾಂಜ್ ಹಸ್ತಾಂತರದ ಬಗ್ಗೆ ಬ್ರಿಟನ್‌ನ ಆಂತರಿಕ ಸಚಿವೆ ಪ್ರೀತಿ ಪಟೇಲ್ ಅಧಿಕೃತ ಆದೇಶ ಹೊರಡಿಸಬೇಕಿದೆ. ಅಧಿಕೃತ ಆದೇಶ ಹೊರಬಿದ್ದ 14 ದಿನದೊಳಗೆ, ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅಮೆರಿಕದಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಅಪರಾಧ ಸಾಬೀತಾದರೆ ಅಸಾಂಜ್‌ಗೆ ಜೀವಾವಧಿ ಶಿಕ್ಷೆಯಾಗಲಿದೆ.

 ಹಸ್ತಾಂತರ ಪ್ರಕ್ರಿಯೆಗೆ ಅನುಮೋದನೆ ನೀಡದಂತೆ ಸಚಿವೆ ಪ್ರೀತಿ ಪಟೇಲ್ರನ್ನು ವಿನಂತಿಸಲಾಗುವುದು ಎಂದು ಅಸಾಂಜ್ ವಕೀಲರು ಹೇಳಿದ್ದಾರೆ. ಅಸಾಂಜ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಕೆಲವು ಅಂಶಗಳ ಬಗ್ಗೆ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದವರು ಹೇಳಿದ್ದಾರೆ.

ಇರಾಕ್ ಮತ್ತು ಅಫ್ಗಾನಿಸ್ತಾನದಲ್ಲಿ ಅಮೆರಿಕ ನೇತೃತ್ವದಲ್ಲಿ ನಡೆದ ಯುದ್ಧಕ್ಕೆ ಸಂಬಂಧಿಸಿದ 5 ಲಕ್ಷ ರಹಸ್ಯ ಮಿಲಿಟರಿ ದಾಖಲೆಗಳನ್ನು ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಸಾಂಜ್ ವಿರುದ್ಧ ಕಾನೂನು ಪ್ರಕ್ರಿಯೆ ನಡೆಸಲು ಅಮೆರಿಕ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News