ಹರ್ಯಾಣ: ತ್ಯಾಜ್ಯ ಸಂಸ್ಕರಣಾ ಘಟಕದ ಟ್ಯಾಂಕ್ ಗೆ ಇಳಿದ ನಾಲ್ವರು ಕಾರ್ಮಿಕರು ಸಾವು

Update: 2022-04-20 18:08 GMT

ಚಂಡಿಗಢ, ಎ. 20: ಹರ್ಯಾಣದ ಹಿಸಾರ್ ಜಿಲ್ಲೆಯ ಬುಧಖೇರ ಗ್ರಾಮದಲ್ಲಿ ಮಂಗಳವಾರ ಸಂಜೆ ತ್ಯಾಜ್ಯ ಸಂಸ್ಕರಣಾ ಘಟಕದ ಟ್ಯಾಂಕ್ಗೆ ಇಳಿದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ ಬಳಿಕ ತಡ ರಾತ್ರಿ 50 ಅಡಿ ಆಳದ ಟ್ಯಾಂಕ್ನಿಂದ ನಾಲ್ವರ ಮೃತದೇಹಗಳನ್ನು ಹೊರ ತೆಗೆಯಲಾಯಿತು. ಮೃತಪಟ್ಟವರನ್ನು ಸುರೇಂದರ್, ರಾಹುಲ್, ರಾಜೇಶ್ ಹಾಗೂ ಮಹೇಂದರ್ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ಧನ, ಕುಟುಂಬಗಳ ತಲಾ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾರ್ಮಿಕರ ಸಾವಿನ ಕಾರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಹಿಸಾರ್ನ ಜಿಲ್ಲಾಧಿಕಾರಿ ಪ್ರಿಯಾಂಕಾ ಸೋನಿ ಆದೇಶ ನೀಡಿದ್ದಾರೆ.

ಗುತ್ತಿಗೆ ಕಾರ್ಮಿಕರಾದ ಸುರೇಂದರ್ ಹಾಗೂ ರಾಹುಲ್ ಮೋಟಾರು ದುರಸ್ಥಿ ಮಾಡಲು ತ್ಯಾಜ್ಯ ಸಂಸ್ಕರಣಾ ಘಟಕದ ಟ್ಯಾಂಕ್ಗೆ ಇಳಿದಿದ್ದರು. ಈ ಸಂದರ್ಭ ಅವರು ಟ್ಯಾಂಕ್ ಒಳಗೆ ಸಿಲುಕಿಕೊಂಡರು. ಎರಡು ಗಂಟೆಗಳು ಕಳೆದರೂ ಅವರಿಗೆ ಅಲ್ಲಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಅವರನ್ನು ರಕ್ಷಿಸಲು ರಾಜೇಶ್ ಹಾಗೂ ಮಹೇಂದರ್ ಟ್ಯಾಂಕ್ಗೆ ಇಳಿದರು. ಅವರು ಕೂಡ ಟ್ಯಾಂಕ್ ಒಳಗಡೆ ಸಿಲುಕಿಕೊಂಡರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News