×
Ad

ಅಲ್‌ ಅಖ್ಸಾ ಮಸೀದಿಯ ಆವರಣದಲ್ಲಿ ರಬ್ಬರ್ ಬುಲೆಟ್ ಪ್ರಯೋಗಿಸಿದ ಇಸ್ರೇಲ್: 30 ಮಂದಿಗೆ ಗಾಯ

Update: 2022-04-21 22:26 IST
photo courtesy:twitter/@ajplus

ಜೆರುಸಲೇಂ, ಎ.21: ಜೆರುಸಲೇಂನಲ್ಲಿರುವ ಅಲ್ಅಖ್ಸಾ ಮಸೀದಿಯ ಆವರಣಕ್ಕೆ ನುಗ್ಗಿದ ಇಸ್ರೇಲ್ ಪೊಲೀಸರು ಅಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರ ಮೇಲೆ ಮೆಣಸಿನ ಪುಡಿ ಎರಚಿ ರಬ್ಬರ್ ಬುಲೆಟ್ ಪ್ರಯೋಗಿಸಿದ್ದರಿಂದ ಕನಿಷ್ಟ 30 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ಹೇಳಿವೆ.

 ಜೆರುಸಲೇಂನ ಹಳೆನಗರದಲ್ಲಿರುವ ಅಲ್ಅಖ್ಸಾ ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದವರನ್ನು ಚದುರಿಸಲು ಇಸ್ರೇಲ್ ಪೊಲೀಸರು ಅಶ್ರುವಾಯು ಸಿಡಿಸಿ ರಬ್ಬರ್ ಬುಲೆಟ್ ಪ್ರಯೋಗಿಸಿದರು. ಆಗ ಮಸೀದಿಯಲ್ಲಿದ್ದ ಪೆಲೆಸ್ತೀನ್ ಯುವಕರು ಪೊಲೀಸರತ್ತ ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆದರು ಎಂದು ಪೆಲೆಸ್ತೀನ್ ಮಾಧ್ಯಮಗಳು ವರದಿ ಮಾಡಿವೆ.

  ಇಸ್ರೇಲ್ ಪೊಲೀಸರು ಸ್ಟನ್ ಗ್ರೆನೇಡ್ (ಭಾರೀ ಸದ್ದು ಮತ್ತು ಬೆಳಕಿನೊಂದಿಗೆ ಸ್ಫೋಟಿಸುವ ಗ್ರೆನೇಡ್), ರಬ್ಬರ್ ಬುಲೆಟ್ ಮತ್ತು ಮೆಣಸಿನ ಪುಡಿ ಎರಚಿದ್ದಾರೆ . ಗುಂಡೇಟಿನಿಂದ 30 ಮಂದಿ ಗಾಯಗೊಂಡಿದ್ದಾರೆ. ಬೆನ್ನಿಗೆ ಬುಲೆಟ್ ಹೊಕ್ಕಿರುವ ಓರ್ವ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರ ಗುಂಪಿನತ್ತ ಗಲಭೆಕೋರರ ತಂಡವೊಂದು ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆದು ಮಸೀದಿಯ ಆವರಣಕ್ಕೆ ಹಾನಿ ಎಸಗಿದೆ. ಈ ಹಿಂಸಾಚಾರ ಪ್ರಕರಣದಲ್ಲಿ ಪಾಲ್ಗೊಂಡ ಶಂಕೆಯಲ್ಲಿ ಆಕ್ರಮಿತ ಪೂರ್ವ ಜೆರುಸಲೇಂನ ನಿವಾಸಿಗಳಾದ 7 ಪೆಲೆಸ್ತೀನಿಯರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಪೊಲೀಸರು ಹೇಳಿದ್ದಾರೆ.

  ಮಸೀದಿಯ ಆವರಣದಲ್ಲಿರುವ ತಮ್ಮ ಪ್ರಾರ್ಥನಾ ಮಂದಿರದಲ್ಲಿ ತಮಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಈ ಪ್ರದೇಶದಲ್ಲಿ ಇಸ್ರೇಲ್ ನೆಲೆಗೊಳಿಸಿರುವ ಕಟ್ಟಾ ಬಲಪಂಥೀಯ ಇಸ್ರೇಲ್ ಪ್ರಜೆಗಳು ಆಗ್ರಹಿಸುತ್ತಿದ್ದಾರೆ. ಆದರೆ ರಮಝಾನ್ ತಿಂಗಳು ಮುಗಿಯುವ ವರೆಗೆ ಮಸೀದಿಯ ಆವರಣ ಪ್ರವೇಶಿಸದಂತೆ ಇಸ್ರೇಲ್ ಸರಕಾರ ಇವರಿಗೆ ಸೂಚಿಸಿದೆ.

ಮಂಗಳವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಇಸ್ರೇಲ್ ನಿವಾಸಿಗಳ ಗುಂಪೊಂದು ಇದೇ ಆವರಣದಲ್ಲಿರುವ ತಮ್ಮ ಪ್ರಾರ್ಥನಾ ಮಂದಿರಕ್ಕೆ ತೆರಳಲು ಯತ್ನಿಸಿದಾಗ ಗಲಭೆ ಸ್ಫೋಟಗೊಂಡಿದೆ. ಅವರತ್ತ ಪೆಲೆಸ್ತೀನ್ ಯುವಕರು ಕಲ್ಲೆಸೆದರು ಎಂದು ಅಲ್ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News