ನ್ಯಾಯಾಂಗಕ್ಕೆ ಉಪನ್ಯಾಸ ನೀಡಬೇಡಿ: ಅಬು ಸಲೇಂ ಮನವಿ ಕುರಿತಂತೆ ಕೇಂದ್ರಕ್ಕೆ ಸುಪ್ರೀಂ ತರಾಟೆ
ಹೊಸದಿಲ್ಲಿ, ಎ. 21: ನ್ಯಾಯಾಂಗಕ್ಕೆ ಉಪನ್ಯಾಸ ನೀಡಬೇಡಿ. ನೀವು ನಿರ್ಧರಿಸಬೇಕಾದುದನ್ನು ನಾವು ನಿರ್ಧರಿಸಬೇಕೆಂದು ಹೇಳುವುದನ್ನು ಉದಾರವಾಗಿ ತೆಗೆದುಕೊಳ್ಳಲಾರೆವು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ಗುರುವಾರ ಗೃಹ ಸಚಿವಾಲಯಕ್ಕೆ ತಿಳಿಸಿದರು.
ತನ್ನ ಕಾರಾಗೃಹ ಶಿಕ್ಷೆ 25 ವರ್ಷ ಕಳೆದಿರುವುದರ ಬಗ್ಗೆ ಗ್ಯಾಂಗ್ಸ್ಟರ್ ಅಬು ಸಲೇಂ ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಸಲ್ಲಿಸಿದ ಗೃಹ ಸಚಿವಾಲಯ ಅರ್ಜಿ ಅಪಕ್ವವಾಗಿದೆ ಎಂಬ ನಿಲುವು ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಟು ಶಬ್ದಗಳಲ್ಲಿ ಗೃಹ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ನಮಗೆ ಹೇಳಲು ಗೃಹ ಕಾರ್ಯದರ್ಶಿ ಯಾರು ಕೂಡಾ ಅಲ್ಲ ಎಂದು ಅವರು ಹೇಳಿದರು. ತಾವು ಏನನ್ನು ಹೇಳಲು ಬಯಸುತ್ತೇವೆ ಎಂಬ ಬಗ್ಗೆ ಕೇಂದ್ರ ಸರಕಾರ ನಿಸ್ಸಂದಿಗ್ದವಾಗಿರಬೇಕು. ‘‘ಸೂಕ್ತ ಸಮಯದಲ್ಲಿ ನಾವು ನಿರ್ಧಾರ ತೆಗೆದುಕೊಳ್ಳಲಿದ್ದೇವೆ” ಎಂಬಂತಹ ಗೃಹ ಸಚಿವಾಲಯದ ಅಪಿಡಾವಿಟ್ ನಲ್ಲಿರುವ ಹೇಳಿಕೆಗಳನ್ನು ನಾವು ಒಪ್ಪುದಿಲ್ಲ ಎಂದು ಕೌಲ್ ಹೇಳಿದ್ದಾರೆ.
ಗೃಹ ಸಚಿವಾಲಯ ತನ್ನ ಅಫಿಡಾವಿಟ್ ನಲ್ಲಿ ‘‘ಅಬು ಸಲೇಂ ಪ್ರಕರಣವನ್ನು ನಿರ್ಧರಿಸಲು ಕೇಂದ್ರ ಸರಕಾರಕ್ಕೆ ಇದು ಸೂಕ್ತ ಸಮಯವಲ್ಲ. ಇದನ್ನು ಸುಪ್ರೀಂ ಕೋರ್ಟ್ ನಿರ್ಧರಿಸಬಹುದು” ಎಂದು ಹೇಳಿತ್ತು. 1993ರ ಬಾಂಬೆ ಸ್ಫೋಟದ ದೋಷಿ ಅಬು ಸಲೇಂ ಸಲ್ಲಿಸಿದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಹಾಗೂ ಎಂ.ಎ. ಸುಂದರೇಶ್ ವಿಚಾರಣೆ ನಡೆಸಿದರು. ಅಬು ಸಲೇಂ ಕಾರಾಗೃಹ ಶಿಕ್ಷೆಯ ಅವಧಿ 25 ವರ್ಷ ಮೀರದು ಎಂದು ಭಾರತ ಪೋರ್ಚುಗಲ್ ನ್ಯಾಯಾಲಯಕ್ಕೆ ಖಾತರಿ ನೀಡಿತ್ತು.