ತಾಯ್ತನದ ಸಂಕಷ್ಟಗಳಿಗೆ ಪರಿಹಾರ ಸಿಗಲಿ

Update: 2022-04-22 04:03 GMT

ಸಂಸಾರ ಜಂಜಾಟದಿಂದ ಪರಾರಿಯಾಗಿ ಆಶ್ರಮ ಸೇರಿರುವ ಸನ್ಯಾಸಿಗಳೆಲ್ಲ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ‘ಅಷ್ಟು ಮಕ್ಕಳನ್ನು ಹುಟ್ಟಿಸಿ, ಇಷ್ಟು ಮಕ್ಕಳನ್ನು ಹುಟ್ಟಿಸಿ’ ಎಂದು ಕರೆ ನೀಡುತ್ತಿದ್ದಾರೆ. ಯಾರ್ಯಾರಿಗೋ ಸಲಹೆ ನೀಡುವ ಬದಲು ನೀವೇ ಯಾಕೆ ಸನ್ಯಾಸಾಶ್ರಮದಿಂದ ಗೃಹಸ್ಥಾಶ್ರಮಕ್ಕೆ ಮರಳಿ ನಿಮ್ಮ ನಿಮ್ಮ ಧರ್ಮವನ್ನು ಉಳಿಸಬಾರದು? ಎಂದು ಜನಸಾಮಾನ್ಯರು ಮರು ಪ್ರಶ್ನಿಸತೊಡಗಿದ್ದಾರೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಮಕ್ಕಳನ್ನು ಹೆರುವುದು ಎನ್ನುವುದು ಆಶ್ರಮದಲ್ಲಿ ಕುಳಿತು ಉಪದೇಶ ನೀಡಿದಷ್ಟು ಸುಲಭವಲ್ಲ. ಭಾರತದಲ್ಲಿ ಗರ್ಭಿಯಣಿಯರ ಪಾಲಿಗೆ ಮಕ್ಕಳನ್ನು ಹೆರುವುದು ಎಂದರೆ ಒಂದು ಯುದ್ಧವೇ ಆಗಿದೆ. ಒಂದೆಡೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮಗದೊಂದೆಡೆ ತನ್ನ ಮಗುವಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ಕೊರೋನೋತ್ತರ ದಿನಗಳಲ್ಲಂತೂ ಭಾರತದ ಗರ್ಭಿಣಿಯರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ ಎನ್ನುವ ಅಂಶ ಬೆಳಕಿಗೆ ಬರುತ್ತಿದೆ. ಭಾರತದಲ್ಲಿ ಪ್ರಸವಪೂರ್ವದಲ್ಲಿ ನಾಲ್ಕು ಬಾರಿ ಅಥವಾ ಅದಕ್ಕಿಂತಲೂ ಅಧಿಕ ಸಲ ಆರೋಗ್ಯ ತಪಾಸಣೆ ಸೌಲಭ್ಯವನ್ನು ಪಡೆಯುವ ಗರ್ಭಿಣಿಯರ ಸಂಖ್ಯೆಯಲ್ಲಿ ಶೇ.28ರಷ್ಟು ಕುಸಿತವುಂಟಾಗಿದೆ. ಆಸ್ಪತ್ರೆಗಳಿಗೆ ತೆರಳಿ ಅಲ್ಲಿ ಹೆರಿಗೆ ಮಾಡಿಸುವ ಸಂಖ್ಯೆಯಲ್ಲಿ ಶೇ.22ರಷ್ಟು ಕುಸಿತವುಂಟಾಗಿದೆಯೆಂದು ಭಾರತದ ಜನಸಂಖ್ಯಾ ಪ್ರತಿಷ್ಠಾನದ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ದತ್ತಾಂಶಗಳ ವಿಶ್ಲೇಷಣೆಯು ಸಾಬೀತುಪಡಿಸಿದೆ.

2017ರಲ್ಲಿ ತಾಯ್ತನದ ಸಂದರ್ಭ ಸಂಭವಿಸಿದ ಒಟ್ಟು ಸಾವುಗಳಲ್ಲಿ ಶೇ.12ರಷ್ಟು ಭಾರತದಲ್ಲಿಯೇ ಆಗಿದೆೆ. ತಾಯ್ತನದ ಸಂದರ್ಭದಲ್ಲಿ ಸಂಭವಿಸಿದ ಸಾವುಗಳ ಪ್ರಕರಣಗಳಲ್ಲಿ ಮೂರನೇ ಎರಡರಷ್ಟು ಸಾವುಗಳು ತೀವ್ರವಾದ ರಕ್ತಸ್ರಾವ, ಹೆರಿಗೆಯ ಆನಂತರದ ಸೋಂಕು, ಅತ್ಯಧಿಕವಾದ ರಕ್ತದ ಒತ್ತಡ, ಹೆರಿಗೆಯ ಸಂಕೀರ್ಣ ಸಮಸ್ಯೆಗಳು ಹಾಗೂ ಅಸುರಕ್ಷಿತ ಗರ್ಭಪಾತದಿಂದಾಗಿ ಸಂಭವಿಸಿದೆಯೆಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ತಿಳಿಸಿದೆ.

ವಿಶ್ವಸಂಸ್ಥೆಯು ನಿಗದಿಪಡಿಸಿರುವ ಸುಸ್ಥಿರವಾದ ಅಭಿವೃದ್ಧಿಯ ಗುರಿಗಳು 2030ರ ವೇಳೆಗೆ ಜಾಗತಿಕ ಮಾತೃತ್ವದ ಸಾವಿನ ಅನುಪಾತವನ್ನು ಪ್ರತಿ 1 ಲಕ್ಷ ಜನನಗಳಿಗೆ 70ಕ್ಕಿಂತಲೂ ಕಡಿಮೆ ಮಟ್ಟಕ್ಕಿಳಿಸುವ ಗುರಿಯನ್ನು ಹೊಂದಿದೆ. ಮಾದರಿ ನೋಂದಣಿ ವ್ಯವಸ್ಥೆಯ ಪ್ರಕಾರ ಪ್ರಸಕ್ತ ಭಾರತದ ತಾಯ್ತನದ ಅವಧಿಯಲ್ಲಿ ಸಂಭವಿಸುವ ಸಾವಿನ ಅನುಪಾತವು 2016-18ರಲ್ಲಿ 113 ಇದ್ದುದು, 2017-19ರಲ್ಲಿ 103ಕ್ಕಿಳಿದಿದೆ.

2018ರ ಜೂನ್‌ನಲ್ಲಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಹಾಗೂ ಬಿಜೆಪಿಯ ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 2022ರೊಳಗೆ ಭಾರತವು ತನ್ನ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು 70ರಷ್ಟು ಸಾಧಿಸಿದೆಯೆಂದು ಘೋಷಿಸಿದ್ದರು. ಆದಾಗ್ಯೂ ಮಾತೃತ್ವಕ್ಕೆ ಸಂಬಂಧಿಸಿದ ಸಾವಿನ ಅನುಪಾತವು ಪ್ರತಿ ಸಾವಿರ ಜನನಕ್ಕೆ 100 ಆಗಿರುವುದು ವಿಶ್ವಸಂಸ್ಥೆಯು ನಿಗದಿಪಡಿಸಿದ ಗುರಿಯನ್ನು ತಲುಪಲು ಭಾರತವು ಇನ್ನೂ ಮೈಲು ದೂರ ಸಾಗಬೇಕಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳ ಪ್ರಮಾಣವು 2016ರಲ್ಲಿ ಶೇ.78.9 ಇದ್ದುದು 2020ರಲ್ಲಿ 88.6 ಶೇಕಡಕ್ಕೆ ಏರಿಕೆಯಾಗಿದೆ. ಪರಿಣಿತ ಆರೋಗ್ಯ ವೃತ್ತಿಪರರ ಶುಶ್ರೂಷೆಯೊಂದಿಗೆ ನಡೆಯುವ ಹೆರಿಗೆಗಳ ಪ್ರಮಾಣವು ಶೇ.81.4 ಇದ್ದುದು ಶೇ.89.4ಕ್ಕೆ ಏರಿದೆ. ಪರಿಣಿತ ವೃತ್ತಿಪರರು ಮನೆಗಳಲ್ಲಿ ನಡೆಸುವ ಹೆರಿಗೆಗಳ ಸಂಖ್ಯೆಯು 2016ರಲ್ಲಿ ಶೇ.4.3 ಶೇಕಡ ಇದ್ದುದು 2020ರಲ್ಲಿ ಶೇ.3.2ಕ್ಕಿಳಿದಿದೆ.ಗೋವಾ, ಕೇರಳ ಹಾಗೂ ತಮಿಳುನಾಡಿನಂತಹ ರಾಜ್ಯಗಳು ಪ್ರಸವಾನಂತರದ ಶುಶ್ರೂಷೆಯಲ್ಲಿ ಉತ್ತಮ ನಿರ್ವಹಣೆಯನ್ನು ತೋರಿದ್ದರೆ, ನಾಗಾಲ್ಯಾಂಡ್ (43.9 ಶೇ.), ಮೇಘಾಲಯ (43.9 ಶೇ.) ಹಾಗೂ ಅರುಣಾಚಲಪ್ರದೇಶ (56.4 ಶೇ.) ಅತ್ಯಂತ ತಳಮಟ್ಟದಲ್ಲಿವೆ. ಗರ್ಭಿಣಿಯರಲ್ಲಿ ಶೇ. 50ಕ್ಕಿಂತಲೂ ಅಧಿಕ ಮಂದಿ ರಕ್ತಹೀನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂಬ ಕಳವಳಕಾರಿ ಅಂಶವನ್ನು ಕೂಡಾ ವರದಿ ಬಹಿರಂಗಪಡಿಸಿದೆ. ದೈಹಿಕ ಹಿಂಸಾಚಾರವನ್ನು ಎದುರಿಸುತ್ತಿರುವ ಗರ್ಭಿಣಿಯರ ರಕ್ಷಣೆಯಲ್ಲೂ ಪ್ರಗತಿಯನ್ನು ಸಾಧಿಸಲಾಗಿಲ್ಲವೆಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

ಇಂತಹ ವಾತಾವರಣದಲ್ಲಿ ಗರ್ಭಿಣಿಯರು ಎಷ್ಟು ಮಕ್ಕಳನ್ನು ಹೆರಬೇಕು ಎನ್ನುವ ಸಲಹೆ ನೀಡುವ ಬದಲು, ಗರ್ಭಿಣಿಯರಿಗೆ ನೀಡಬೇಕಾದ ಸವಲತ್ತುಗಳ ಬಗ್ಗೆ ಸರಕಾರ ಚಿಂತಿಸಬೇಕಾಗಿದೆ. ಗರ್ಭಿಣಿಯರ ಆರೋಗ್ಯ ಬಿಗಡಾಯಿಸಿದರೆ ಅದು ಮಗುವಿನ ಮೇಲೂ ತನ್ನ ಪರಿಣಾಮವನ್ನು ಬೀರುತ್ತದೆ. ಅನಾರೋಗ್ಯದೊಂದಿಗೆ ಹುಟ್ಟುವ ಮಗು ದೇಶಕ್ಕೆ ಸಂಪನ್ಮೂಲವಾಗುವ ಬದಲು ಸಮಸ್ಯೆಯಾಗಿ ಬದಲಾಗುವ ಸಾಧ್ಯತೆಗಳಿವೆ. ಆದುದರಿಂದ ಹುಟ್ಟಿದ ಮಗುವಿನ ಆರೋಗ್ಯದ ಸುರಕ್ಷತೆಯ ಕುರಿತಂತೆ ಸಮಾಜ ಹೊಣೆ ಹೊರಬೇಕು. ಎಷ್ಟು ಮಕ್ಕಳನ್ನು ಹುಟ್ಟಿಸಬೇಕು ಎನ್ನುವುದರ ಬದಲಿಗೆ ಹುಟ್ಟಿದ ಮಕ್ಕಳಿಗೆ ಸಭ್ಯತೆ, ಸಂಸ್ಕೃತಿ, ಔದಾರ್ಯಗಳನ್ನು ಬೋಧಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಸನ್ಯಾಸಿಗಳು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News