"ವೈಯಕ್ತಿಕ, ಅನೌಪಚಾರಿಕ ಭೇಟಿ": ಸಂಸದೆಯ ಪಾಕ್ ಆಕ್ರಮಿತ ಕಾಶ್ಮೀರ ಭೇಟಿ ಕುರಿತು ಅಮೆರಿಕಾ ಪ್ರತಿಕ್ರಿಯೆ

Update: 2022-04-22 11:23 GMT

ವಾಷಿಂಗ್ಟನ್: ಅಮೆರಿಕಾದ ಸಂಸದೆ ಇಲ್ಹಾನ್ ಉಮರ್‌ ಇತ್ತೀಚೆಗೆ ಪಾಕಿಸ್ತಾನದ ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿರುವುದು ಹಾಗೂ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಆಕೆಯ "ಅನೌಪಚಾರಿಕ ವೈಯಕ್ತಿಕ'' ಭೇಟಿಯನ್ನು ಭಾರತ ಖಂಡಿಸಿದ ನಂತರ ಪ್ರತಿಕ್ರಿಯಿಸಿರುವ ಅಮೆರಿಕಾ ಆಕೆ ಅಮೆರಿಕಾ ಸರಕಾರವನ್ನು ಪ್ರತಿನಿಧಿಸಿಲ್ಲ ಬದಲು ಆಕೆಯ ಭೇಟಿ ವೈಯಕ್ತಿಕವಾಗಿತ್ತು ಎಂದು ಹೇಳಿದೆ.

ಇಲ್ಹಾನ್ ಉಮರ್‌ ಅವರ ಪಾಕ್ ಆಕ್ರಮಿತ ಕಾಶ್ಮೀರ ಭೇಟಿಯು ಭಾರತದ ಭೂಭಾಗದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಮತ್ತು ಆಕೆಯ ಸಂಕುಚಿತ ರಾಜಕೀಯವನ್ನು ಪ್ರತಿಫಲಿಸುತ್ತದೆ ಎಂದು ಭಾರತ ಗುರುವಾರ ಖಂಡಿಸಿತ್ತು.

ಅಮೆರಿಕಾದ ಡೆಮಾಕ್ರೆಟಿಕ್ ಪಕ್ಷದ ಸಂಸದೆ ನಾಲ್ಕು ದಿನಗಳ ಪಾಕ್ ಭೇಟಿಯನ್ನು ಎಪ್ರಿಲ್ 20ರಂದು ಆರಂಭಿಸಿದ್ದರಲ್ಲದೆ ಬುಧವಾರ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಯುಎಸ್ ಸೆಕ್ರಟರಿ ಆಪ್ ಸ್ಟೇಟ್ ಆಂಟನಿ ಬ್ಲಿಂಕೆನ್ "ಅದೊಂದು ವೈಯಕ್ತಿಕ ಅನೌಪಚಾರಿಕ ಭೇಟಿ ಹಾಗೂ ಅಮೆರಿಕಾ ಸರಕಾರದ ಪರ ಯಾವುದೇ ನೀತಿ ಬದಲಾವಣೆಯನ್ನು ಪ್ರತಿನಿಧಿಸುವುದಿಲ್ಲ,'' ಎಂದು ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಪಕ್ಷದವರೇ ಆಗಿರುವ ಉಮರ್‌ ಅವರು ತಮ್ಮ ಪಾಕ್ ಆಕ್ರಮಿತ ಕಾಶ್ಮೀರ ಭೇಟಿ ನಂತರ ಪ್ರತಿಕ್ರಿಯಿಸಿ "ಕಾಶ್ಮೀರದ ಬಗ್ಗೆ ಅಮೆರಿಕಾ ಹೆಚ್ಚಿನ ಗಮನ ನೀಡಬೇಕು. ಈ ವಿಚಾರವನ್ನು ಅಲ್ಲಿನ ಆಡಳಿತವು ಮಾತನಾಡಬೇಕಿರುವಷ್ಟು ಮಾತನಾಡಿಲ್ಲ,'' ಎಂದು ಹೇಳಿದ್ದರು.

ಆಕೆಯ ಭೇಟಿಯನ್ನು ಖಂಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲದ ವಕ್ತಾರ ಅರಿಂದಂ ಬಾಗ್ಚಿ "ಇಂತಹ ರಾಜಕಾರಣಿ ತಮ್ಮ ಮನೆಯಲ್ಲಿ ಸಂಕುಚಿತ ರಾಜಕಾರಣ ಮಾಡಿದರೆ ಅದು ಆಕೆಯ ವ್ಯವಹಾರ ಆದರೆ ನಮ್ಮ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುವುದು ಖಂಡನಾರ್ಹ,'' ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಲಿಗೆ ಭೇಟಿ ನೀಡಿದ ಮೊದಲ ಅಮೆರಿಕಾ ಸಂಸದೆ ಉಮರ್‌ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News