ಜಮ್ಮು: ಗುಂಡಿನ ಚಕಮಕಿ ಇಬ್ಬರು ಶಂಕಿತ ಉಗ್ರರ ಹತ್ಯೆ

Update: 2022-04-22 16:39 GMT

ಶ್ರೀನಗರ, ಎ. 22: ಜಮ್ಮುವಿನ ವಿಸ್ತಾರವಾದ ಸಂಜ್ವಾನ್ ಸೇನಾ ಠಾಣೆಯ ಸಮೀಪದ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆ ಸಂಧರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್ ಮಹಮ್ಮದ್ (ಜೆಇಎಂ)ಸಂಘಟನೆಯ ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ.

ಇವರಲ್ಲಿ ಓರ್ವ ಶಂಕಿತ ಉಗ್ರ ಆತ್ಮಹತ್ಯಾ ಉಡುಪು ಧರಿಸಿದ್ದ. ಆತ ನಗರದ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯೋಜಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಜ್ವಾನ ಪ್ರದೇಶದಲ್ಲಿರುವ ಸೇನಾ ಶಿಬಿರದ ಸಮೀಪ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಸಂದರ್ಭ ಓರ್ವ ಯೋಧ ಮೃತಪಟ್ಟಿದ್ದಾರೆ. 6 ಮಂದಿ ಯೋಧರು ಗಾಯಗೊಂಡಿದ್ದಾರೆ. ಮೃತಪಟ್ಟ ಯೋಧನನ್ನು ಸಿಐಎಸ್‌ಎಫ್‌ನ ಎಎಸ್‌ಐ ಎಸ್.ಪಿ. ಪಟೇಲ್ ಎಂದು ಗುರುತಿಸಲಾಗಿದೆ.

ಮುಂಜಾನೆ 3.45ಕ್ಕೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆಯ ಮೇಲೆ ಮನೆಯೊಂದರಲ್ಲಿ ಅಡಗಿದ್ದ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆ ಪ್ರತಿ ದಾಳಿ ನಡೆಸಿತು. ಇದರಿಂದ ಗುಂಡಿನ ಚಕಮಕಿ ನಡೆಯಿತು ಎಂದು ಅವರು ತಿಳಿಸಿದ್ದಾರೆ. ಭಾರೀ ಶಸ್ತ್ರಾಸ್ತ್ರ ಹೊಂದಿರುವ ಇಬ್ಬರು ಉಗ್ರರು ಇರುವ ಕುರಿತು ನಿರ್ದಿಷ್ಟ ಮಾಹಿತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆ ಆ ಪ್ರದೇಶವನ್ನು ಸುತ್ತುವರಿಯಿತು ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಿತು ಎಂದು ಜಮ್ಮು ವಲಯದ ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News