ಇಥಿಯೋಪಿಯಾದ ಆಸ್ಪತ್ರೆಯಲ್ಲಿ ಆಹಾರದ ಕೊರತೆ: 240 ರೋಗಿಗಳು ಮನೆಗೆ

Update: 2022-04-22 16:50 GMT

ಸಾಂದರ್ಭಿಕ ಚಿತ್ರ  | PTI

ಟಿಗ್ರೆ, ಎ.22: ಇಥಿಯೋಪಿಯಾದ ಯುದ್ಧಗ್ರಸ್ಥ ಟಿಗ್ರೆ ವಲಯದಲ್ಲಿ ಆಹಾರದ ಬಿಕ್ಕಟ್ಟು ಬಿಗಡಾಯಿಸಿದ್ದು ಇಲ್ಲಿನ ಕೇಂದ್ರ ಆಸ್ಪತ್ರೆಯಲ್ಲಿ ಆಹಾರದ ದಾಸ್ತಾನು ಕಾಲಿಯಾದ ಹಿನ್ನೆಲೆಯಲ್ಲಿ 240 ರೋಗಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಿಗ್ರೆ ವಲಯದ ರಾಜಧಾನಿ ಮೆಕೆಲ್ಲೆಯ ಏಯ್ಡರ್ ರೆಫರಲ್ ಆಸ್ಪತ್ರೆಯಲ್ಲಿ ಆಹಾರದ ಕೊರತೆ ಎದುರಾಗಿದೆ. ಆದ್ದರಿಂದ ಇಲ್ಲಿ ಹೊಸ ನಿಯಮ ಜಾರಿಗೊಳಿಸಿದ್ದು ತಮ್ಮ ಆಹಾರದ ವ್ಯವಸ್ಥೆ ಮಾಡಿಕೊಳ್ಳುವ ರೋಗಿಗಳು ಉಳಿದುಕೊಳ್ಳಲು ಸೂಚಿಸಲಾಗಿದೆ. ಅದರಂತೆ ಸುಮಾರು 360 ರೋಗಿಗಳು ಉಳಿದಿದ್ದಾರೆ. ಆಹಾರದ ವ್ಯವಸ್ಥೆ ಮಾಡಿಕೊಳ್ಳಲಾಗದ 240 ರೋಗಿಗಳು ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಮನೆಗೆ ತೆರಳಿದ್ದವರಲ್ಲಿ ಮಕ್ಕಳು, ಕ್ಷಯ ರೋಗಿಗಳು, 14 ವರ್ಷದ ಎಚ್‌ಐವಿ ರೋಗಿ ಸೇರಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  ಈ ವಲಯದಲ್ಲಿ ಆಹಾರ ಮತ್ತಿತರ ದೈನಂದಿನ ಅಗತ್ಯವಸ್ತುಗಳ ತೀವ್ರ ಕೊರತೆ ಎದುರಾಗಿರುವದರಿಂದ, ಮಾನವೀಯ ನೆರವಿನ ಪೂರೈಕೆಗೆ ಅನುವು ಮಾಡಿಕೊಡಲು ಮಾರ್ಚ್ ತಿಂಗಳಿಂದ ಏಕಪಕ್ಷೀಯ ಕದನ ವಿರಾಮ ಘೋಷಿಸಿರುವುದಾಗಿ ಸರಕಾರ ಹೇಳಿತ್ತು. ಆದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

 ರೋಗಿಗಳಿಗೆ ಮನೆಗೆ ತೆರಳುವಂತೆ ಸೂಚಿಸದೆ ಬೇರೆ ಮಾರ್ಗವಿಲ್ಲ. ಹಾಗೆ ಹೇಳಲು ನಮಗೆ ಮಾತುಗಳೇ ಬರಲಿಲ್ಲ. ಆದರೆ ಯಾರೊಬ್ಬರೂ ಅಳಲಿಲ್ಲ. ಯಾಕೆಂದರೆ ನಮ್ಮ ಕಣ್ಣೀರು ಈಗಾಗಲೇ ಬತ್ತಿಹೋಗಿವೆ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ನರ್ಸ್ ಟೆಡ್ರಾಸ್ ಫಿಸೆಹೇಯ್‌ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆಸ್ಪತ್ರೆಯಲ್ಲಿ 90%ರಷ್ಟು ಔಷಧಗಳು ಖಾಲಿಯಾಗಿವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಎಚ್‌ಐವಿ ಪೀಡಿತ ಬಾಲಕ ಮರಣ ಹೊಂದುವ ಸಾಧ್ಯತೆ ಹೆಚ್ಚಿದೆ ಎಂದು ಮತ್ತೊಬ್ಬ ನರ್ಸ್ ಹೇಳಿದ್ದಾರೆ.

ಮಾರ್ಚ್ 25ರಂದು ಕದನ ವಿರಾಮ ಘೋಷಣೆಯಾದಂದಿನಿಂದ ಆಹಾರ ವಸ್ತುಗಳನ್ನು ಹೊತ್ತ 71 ಟ್ರಕ್‌ಗಳು ಟಿಗ್ರೆ ವಲಯ ಪ್ರವೇಶಿಸಿವೆ. ಟ್ರಕ್‌ಗಳ ಸುರಕ್ಷಿತ ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಪ್ರಾದೇಶಿಕ ಅಧಿಕಾರಿಗಳ ಜತೆ ಮಾತುಕತೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಆಹಾರ ಯೋಜನೆಯ ಪ್ರಾದೇಶಿಕ ಮುಖ್ಯಸ್ಥ ಮೈಕೆಲ್ ಡನ್‌ಫೋರ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News