ಹುಬ್ಬಳ್ಳಿ ಗಲಭೆ: ಸೂತ್ರಧಾರರಿಗೆ ಶಿಕ್ಷೆಯಾಗಲಿ

Update: 2022-04-24 05:26 GMT

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ರಾಜಕಾರಣಿಗಳು ಮತ್ತು ಸಂಘಪರಿವಾರ ಗರಿಷ್ಠ ಮಟ್ಟದಲ್ಲಿ ತೈಲವನ್ನು ಸುರಿಯುತ್ತಿವೆ. ಇಡೀ ಪ್ರಕರಣದ ಹಿಂದೆ ಷಡ್ಯಂತ್ರವಿದೆ ಎಂದು ರಾಜಕಾರಣಿಗಳು ಟಿವಿ ಚಾನೆಲೆಗಳ ಮೂಲಕ ಆರೋಪಿಸುತ್ತಿದ್ದಾರೆ. ಈ ಘರ್ಷಣೆ ಎಲ್ಲಿಂದ ಆರಂಭವಾಯಿತು ಎನ್ನುವುದಕ್ಕೆ ಪ್ರತ್ಯೇಕ ತನಿಖೆಯ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಕುತ್ಸಿತ ಯುವಕ ಹಾಕಿದ ಪ್ರಚೋದನಾತ್ಮಕ ಚಿತ್ರವೇ ಪೊಲೀಸರು ಮತ್ತು ನಾಗರಿಕರ ನಡುವಿನ ಸಂಘರ್ಷಕ್ಕೆ ಹೇತುವಾಯಿತು. ಒಂದು ವೇಳೆ ಈ ಸಂಘರ್ಷದ ಹಿಂದೆ ಷಡ್ಯಂತ್ರವಿದೆ ಎಂದಾದರೆ ಮೊದಲು ಯಾರನ್ನು ತನಿಖೆ ಮಾಡಬೇಕು ಎನ್ನುವುದನ್ನು ಪ್ರತ್ಯೇಕವಾಗಿ ಬೊಟ್ಟು ಮಾಡಿ ತೋರಿಸಬೇಕಾಗಿಲ್ಲ. ಇಂತಹದೊಂದು ಪೋಸ್ಟನ್ನು ಹಾಕಲು ಆತನಿಗೆ ಪ್ರೇರೇಪಿಸಿದವರು ಯಾರು? ಅವರು ಪಾಕಿಸ್ತಾನದ ಐಎಸ್‌ಐ ಮೂಲದವರೋ, ಇಂಡಿಯನ್ ಮುಜಾಹಿದೀನ್ ಮೂಲದವರೋ ಅಥವಾ ಅಪ್ಪಟ ಸ್ವದೇಶಿ ಸನಾತನ ಉಗ್ರವಾದಿ ಸಂಘಟನೆಗಳ ಮುಖ್ಯಸ್ಥರೋ ಎನ್ನುವುದನ್ನು ಆ ಹುಡುಗನ ಬಾಯಿಯಿಂದಲೇ ಪೊಲೀಸರು ಹೊರತೆಗೆಯ ಬೇಕಾಗಿದೆ.

ಇದೇ ಸಂದರ್ಭದಲ್ಲಿ ಪ್ರಕರಣದಲ್ಲಿ ಒಬ್ಬ ಮೌಲಾನರನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಅವರು ಈಗಾಗಲೇ ‘‘ಪೊಲೀಸರ ಮನವಿಯಂತೆ ಶಾಂತಿ ಕಾಪಾಡಲು ಪೊಲೀಸರ ವಾಹನವನ್ನು ಹತ್ತಿ ನಾನು ಜನರ ಬಳಿ ಮಾತನಾಡಿದ್ದೇನೆ’’ ಎಂದು ಹೇಳಿಕೆ ನೀಡಿದ್ದಾರೆ. ಸಂಘರ್ಷದ ಸಂಚಿನಲ್ಲಿ ಭಾಗಿಯಾಗಿದ್ದರೆ ಆ ಮೌಲಾನ ಪೊಲೀಸರ ವಾಹನದಲ್ಲಿ ನಿಂತು ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರೆ? ಇಷ್ಟಕ್ಕೂ ಘಟನೆಯನ್ನು ಪೊಲೀಸ್ ಇಲಾಖೆ ವೀಡಿಯೊ ಶೂಟಿಂಗ್ ಮಾಡಿದೆ ಎಂದು ನಾವು ನಂಬಬೇಕಾಗುತ್ತದೆ. ಯಾಕೆಂದರೆ ಇಂತಹ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಅವುಗಳನ್ನು ದೃಶ್ಯೀಕರಿಸುವುದಕ್ಕೆ ಪೊಲೀಸರ ಬಳಿ ಸೂಕ್ತ ಸಲಕರಣೆಗಳೂ ಇರುತ್ತವೆ. ಇದನ್ನು ಬಳಸಿ ಮೌಲಾನ ಜನರಿಗೆ ಏನನ್ನು ಕರೆ ಕೊಟ್ಟಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟವಿಲ್ಲ. ಹಿರೇಮಠ್ ಎನ್ನುವ ತರುಣನಿಗೆ ‘ಪ್ರಚೋದಕ ಸ್ಟೇಟಸ್ ಹಾಕಲು’ ಸೂಚನೆ ನೀಡಿದ ಮನುಷ್ಯನೇ ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್. ಹಾಗೆ ಸೂಚನೆ ನೀಡಿದವರು ಇದೇ ಮೌಲಾನ ಆಗಿದ್ದರೆ ಅವರಿಗೆ ಕಠಿಣ ಶಿಕ್ಷೆಯಾಗಲಿ. ಹುಬ್ಬಳ್ಳಿಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತಿಕ್ಕಾಟ ಸಂಭವಿಸಿತು. ಅಲ್ಲಿ ಯಾವುದೇ ಕೋಮುಗಲಭೆಗಳು ನಡೆಯಲಿಲ್ಲ ಎನ್ನುವುದು ಮುಖ್ಯವಾದ ಅಂಶ.

ವಿಪರ್ಯಾಸವೆಂದರೆ, ಹುಬ್ಬಳ್ಳಿಯ ಗಲಭೆಯನ್ನು ಕೆಲವು ಟಿವಿ ಮಾಧ್ಯಮಗಳು ಭಯಾನಕವಾಗಿಸಲು ಮುಂದೆ ಹಾಕಿರುವುದು ಪ್ರಮೋದ್ ಮುತಾಲಿಕ್ ಎನ್ನುವ ಶಂಕಿತ ಉಗ್ರನನ್ನು. ಈತನನ್ನು ಶಂಕಿತ ಉಗ್ರ ಎಂದು ಕರೆಯಲು ಕಾರಣಗಳೂ ಇವೆ. ಗೋವಾದಲ್ಲಿ ಬಿಜೆಪಿ ಸರಕಾರವೇ ಈತನಿಗೆ ಪ್ರವೇಶ ನಿಷೇಧ ಮಾಡಿದೆ. ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲೂ ಈತನಿಗೆ ನಿಷೇಧವನ್ನು ವಿಧಿಸಲಾಗಿತ್ತು. ಗೋವಾ ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ನಡೆದ ಹಲವು ದುಷ್ಕೃತ್ಯಗಳಲ್ಲಿ ಈತನ ಕೈವಾಡವಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಸಮಾಜದಲ್ಲಿ ಉದ್ವಿಗ್ನ ವಾತಾವರಣ ಮೂಡಿಸುವುದಕ್ಕಾಗಿ ಸಿಂಧಗಿಯಲ್ಲಿ ಈತನ ಸಂಘಟನೆಗೆ ಸೇರಿದ ಕಾರ್ಯಕರ್ತರು ‘ಪಾಕಿಸ್ತಾನದ ಧ್ವಜ’ ಹಾರಿಸಿ ತಮ್ಮ ದೇಶದ್ರೋಹವನ್ನು ಜಗಜ್ಜಾಹೀರುಗೊಳಿಸಿದ್ದರು. ಸಮಾಜದಲ್ಲಿ ಅಶಾಂತಿ ಹಬ್ಬಿಸುವುದಕ್ಕೆ ತನ್ನ ತಾಯ್ನೆಡಿಗೆ ವಂಚಿಸಲು ಹೇಸದವರಿವರು ಎನ್ನುವುದನ್ನು ಸಿಂಧಗಿ ಪ್ರಕರಣದಲ್ಲಿ ಸಾಬೀತು ಮಾಡಿದ್ದಾರೆ. ಹುಬ್ಬಳ್ಳಿ ನ್ಯಾಯಾಲಯದ ಆವರಣವೊಂದರಲ್ಲಿ ಸ್ಫೋಟ ನಡೆಸಿದ ಆರೋಪವೂ ಈತನ ಕಾರ್ಯಕರ್ತರ ಮೇಲಿದೆ. ಹಲವು ಕೊಲೆ, ದರೋಡೆ ಮೊದಲಾದ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸಿದ ಹೆಮ್ಮೆ ಈ ಕಾರ್ಯಕರ್ತರದು. ಈತನ ಒಡನಾಡಿಯಾಗಿದ್ದ ಜಂಬಗಿ ಎಂಬಾತ ಜೈಲು ಸೇರಿ, ಅಲ್ಲಿ ನಿಗೂಢವಾಗಿ ಕೊಲೆಗೀಡಾಗಿದ್ದ. ಆತನೇನಾದರೂ ಬದುಕಿದ್ದಿದ್ದರೆ ಪ್ರಮೋದ್ ಮುತಾಲಿಕ್ ಎಸಗಿದ ಹಲವು ಕೃತ್ಯಗಳು ಬಯಲಿಗೆ ಬರುವ ಸಾಧ್ಯತೆಗಳಿದ್ದವು.

ಉಳಿದಂತೆ ಸಮಾಜದಲ್ಲಿ ದ್ವೇಷ ಭಾಷಣಗಳನ್ನು ಉಗುಳುತ್ತಿರುವ ಇತರರ ಹಿನ್ನೆಲೆಗಳನ್ನು ನೋಡಿದರೆ ಸಾಕು. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ಹೂಡುತ್ತಿರುವವರು ಯಾರು ಎನ್ನುವುದು ಬೆಳಕಿಗೆ ಬರುತ್ತದೆ. ಇತ್ತೀಚೆಗೆ ‘ಹಲಾಲ್-ಜಟ್ಕಾ’ ಹೆಸರಿನಲ್ಲಿ ಗದ್ದಲ ಎಬ್ಬಿಸಿದ್ದ ಪುನೀತ್ ಕೆರೇಹಳ್ಳಿ ಎಂಬಾತ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿ, ಈತನ ಮೇಲೆ ಎಫ್‌ಐಆರ್ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಇಂತಹ ಚಾರಿತ್ರಹೀನರು ಹಿಂದೂಧರ್ಮದ ಹೆಸರಿನಲ್ಲಿ ತಮ್ಮ ಅಕ್ರಮ ವ್ಯವಹಾರಗಳನ್ನು ಮುಚ್ಚಿಡುತ್ತಿದ್ದಾರೆ. ಕಾನೂನಿಂದ ರಕ್ಷಣೆ ಪಡೆಯುವುದಕ್ಕೆ ಹಿಂದೂ ಧರ್ಮದ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇವರಿಂದ ಹಿಂದೂ ಧರ್ಮವನ್ನು ರಕ್ಷಿಸಬೇಕಾದ ಅಗತ್ಯವಿದೆ ಎನ್ನುವುದು ಜನರಿಗೆ ಅರ್ಥವಾಗತೊಡಗಿದೆ.

ಇದೇ ಸಂದರ್ಭದಲ್ಲಿ ಕೇಸರಿ ಶಾಲು-ಹಿಜಾಬ್ ಹೆಸರಿನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಯತ್ನಿಸಿದ ಈಶ್ವರಪ್ಪ ‘ಶೇ. 40 ಕಮಿಷನ್ ಮೂಲಕ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ’ ಆರೋಪ ಹೊತ್ತು ರಾಜೀನಾಮೆ ನೀಡಿದರು. ಸರಕಾರ ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು, ತನ್ನ ಆಡಳಿತದ ವೈಫಲ್ಯಗಳ ಕಡೆಗೆ ಜನರ ಗಮನ ಹರಿಯದಂತೆ ನೋಡಿಕೊಳ್ಳಲು ಪರೋಕ್ಷವಾಗಿ ಉದ್ವಿಗ್ನ ವಾತಾವರಣಗಳನ್ನು ಸೃಷ್ಟಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸತೊಡಗಿವೆ. ಕರ್ನಾಟಕದಲ್ಲೂ ‘ಬುಲ್ಡೋಜರ್’ ಪ್ರಯೋಗಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ಎಚ್ಚರಿಸಿದ್ದಾರೆ. ಕರ್ನಾಟಕದಲ್ಲಿ ಬುಲ್ಡೋಜರ್ ಪ್ರಯೋಗಿಸಬೇಕಾಗಿರುವುದು ಜನಸಾಮಾನ್ಯರ ಮನೆಗಳ ಮೇಲಲ್ಲ. ಪಿಎಎಸ್ಸೈ ನೇಮಕಾತಿಯ ಅಕ್ರಮದಲ್ಲಿ ಭಾಗವಹಿಸಿ ಇದೀಗ ತಲೆಮರೆಸಿಕೊಂಡಿರುವ ರಾಜಕೀಯ ಮುಖಂಡರ ಮನೆಗಳ ಮೇಲೆ ಮೊದಲು ಈ ಬುಲ್ಡೋಜರ್‌ಗಳನ್ನು ಹರಿಸಬೇಕಾಗಿದೆ. ಗೋಶಾಲೆಗಳಿಗೆ ಬೇಕಾಗುವ ಹುಲ್ಲಿನಲ್ಲೂ ಕಮಿಷನ್ ಹೊಡೆಯುವ ಸಚಿವರ ಮನೆಯ ಮೇಲೆ ತಕ್ಷಣ ಬುಲ್ಡೋಜರ್ ಹರಿಸುವ ಅಗತ್ಯವಿದೆ. ಮಠಗಳಿಗೆ ನೀಡುವ ಅನುದಾನದಲ್ಲೂ ಕಮಿಷನ್ ವಸೂಲಿ ಮಾಡಿದ ಆರೋಪ ಹೊತ್ತಿರುವವರ ಮೇಲೆ ಬುಲ್ಡೋಜರ್ ಹರಿಸಬೇಕಾಗಿದೆ. ಅಶ್ಲೀಲ ಸಿಡಿಗಳಲ್ಲಿ ಸಿಲುಕಿ ಸರಕಾರದ ಮಾನ, ಮರ್ಯಾದೆಗಳನ್ನು ಬೀದಿಪಾಲು ಮಾಡಿದ ಶಾಸಕರ, ಸಂಸದರ ಮನೆಗಳ ಮೇಲೆ ಬುಲ್ಡೋಜರ್‌ಗಳನ್ನು ಕೊಂಡೊಯ್ಯಬೇಕಾಗಿದೆ. ವಕ್ಫ್ ಆಸ್ತಿಗಳನ್ನು ನುಂಗಿ ನೀರು ಕುಡಿದು ಸಭ್ಯರಂತೆ ಬದುಕುತ್ತಿರುವ ಶಾಸಕರ ನಿವಾಸಗಳ ಮೇಲೆ ಬುಲ್ಡೋಜರ್ ಹರಿಸಿ, ಅವುಗಳನ್ನು ಉರುಳಿಸಬೇಕಾಗಿದೆ. ಆಗ ಮಾತ್ರ ಜನಸಾಮಾನ್ಯ ಆರೋಪಿಗಳ ಮೇಲೆ ಬುಲ್ಡೋಜರ್ ಹರಿಸುವ ನೈತಿಕತೆ ರಾಜಕಾರಣಿಗಳಿಗೆ ಬರುತ್ತದೆ.

ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ತನಿಖೆ ಸರಿಯಾದ ದಾರಿಯಲ್ಲಿ ನಡೆಯಬೇಕಾಗಿದೆ. ಪೊಲೀಸ್ ಠಾಣೆಯ ಮುಂದೆ ಅತಿಕ್ರಮಣಗಳನ್ನು ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಅವರನ್ನು ಪ್ರಚೋದಿಸಿ ಅಂತಹ ಕೃತ್ಯಗಳನ್ನು ಎಸಗಲು ಕಾರಣರಾಗಿರುವ ಜನರನ್ನು ಗುರುತಿಸುವ ಕೆಲಸವೂ ನಡೆಯಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕವಾದ ಸಂದೇಶಗಳನ್ನು, ತಿರುಚಿದ ಚಿತ್ರಗಳನ್ನು ಹಾಕುವುದರ ಹಿಂದೆ ವ್ಯವಸ್ಥಿತ ಹುನ್ನಾರಗಳಿವೆ. ಇವರ ಹಿಂದೆ ರಾಮಸೇನೆಯಂತಹ ಕುಖ್ಯಾತ ಸಂಘಟನೆಗಳ ಕೈವಾಡಗಳಿರುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಇದೀಗ ರಾಜ್ಯಾದ್ಯಂತ ಅಝಾನ್ ಹೆಸರಿನಲ್ಲಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವ ಈ ರಾಮಸೇನೆಯ ಮುಖಂಡನನ್ನು ಬಂಧಿಸಿ ವಿಚಾರಣೆ ನಡೆಸಿದರೆ, ಮುಂದಿನ ದಿನಗಳಲ್ಲಿ ರಾಜ್ಯದೊಳಗೆ ಎಸಗಬಹುದಾದ ಹತ್ತು ಹಲವು ಕ್ರಿಮಿನಲ್ ಯೋಜನೆಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News