ಉಡುಪಿ: ಹೈಕೋರ್ಟ್ ಮೆಟ್ಟಿಲೇರಿದ್ದ ಮೂವರು ಸೈನ್ಸ್ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

Update: 2022-04-23 05:42 GMT

ಉಡುಪಿ : ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಪೈಕಿ ಮೂವರು ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಶನಿವಾರದ ಗಣಿತಶಾಸ್ತ್ರ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಲ್ಮಾಸ್ ಎ.ಎಚ್., ಹಝ್ರಾ ಶಿಫಾ, ಆಯಿಷಾ ಪಲ್ಲವ್ಕರ್ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಇವರಲ್ಲಿ ಅಲ್ಮಾಸ್ ಶುಕ್ರವಾರ ಸಂಜೆ ಕಾಲೇಜಿಗೆ ಆಗಮಿಸಿ ಹಾಲ್ ಟಿಕೆಟ್ ಪಡೆದುಕೊಂಡು ಹೋಗಿದ್ದಾರೆ. ಆದರೆ ಉಳಿದ ಇಬ್ಬರು ಇಂದು ಬೆಳಗ್ಗೆ ಕೂಡ ಹಾಲ್ ಟಿಕೆಟ್ ಪಡೆದುಕೊಳ್ಳಲು ಆಗಮಿಸಿಲ್ಲ ಎಂದು ತಿಳಿದುಬಂದಿದೆ.

ಅಲ್ಮಾಸ್ ಹಾಲ್ ಟಿಕೆಟ್ ಪಡೆದುಕೊಂಡಿದ್ದರೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವ ಸಾಧ್ಯತೆ ಇಲ್ಲದ ಕಾರಣಕ್ಕಾಗಿ ಅವರು ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಬಂದಿಲ್ಲ. ಹಾಗಾಗಿ ಈ ಮೂವರು ಇಂದಿನ ಪರೀಕ್ಷೆಗೆ ಗೈರುಹಾಜರಾಗಿದ್ದಾರೆ.‌

ಶುಕ್ರವಾರ ದ್ವಿತೀಯ ಪಿಯು ಕಾಮರ್ಸ್ ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಹಾಗೂ ರೇಶಮ್, ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದೆ ಮನೆಗೆ  ವಾಪಾಸ್ಸಾಗಿದ್ದರು.

ಈ ಸಂಬಂಧ ಶುಕ್ರವಾರ ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರತಿಕ್ರಿಯಿಸಿ, ಈ ವಿದ್ಯಾರ್ಥಿನಿಯರು ನಾಳೆ ಕೂಡ ಪರೀಕ್ಷಾ ಕೇಂದ್ರಕ್ಕೆ ಹೋಗಿ ನಾಟಕ ಮಾಡಿದರೆ, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಆಲಿಯಾ ಅಸ್ಸಾದಿ ಟ್ವೀಟ್ 

‘ನನಗೆ ಮತ್ತು ರೇಶಮ್‌ಗೆ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ. ಇದರಿಂದ ನಾವು ಮತ್ತೆ ಮತ್ತೆ ನಿರಾಶೆಯನ್ನು ಎದುರಿಸುತ್ತಿದ್ದೇವೆ. ನಾಳೆ ಪರೀಕ್ಷೆಗೆ ಹಾಜರಾಗಲು ಹೋದರೆ ನಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ. ಇಲ್ಲಿ ನಾವು ಮಾಡಿರುವ ಅಪರಾಧ ಏನು ? ನಮ್ಮ ದೇಶ ಎಲ್ಲಿಗೆ ಹೋಗುತ್ತಿದೆ’ ಎಂದು ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಶುಕ್ರವಾರ ರಾತ್ರಿ ಮಾಡಿರುವ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News