ಖೇಲೋ ಇಂಡಿಯಾದಲ್ಲಿ ಮಲ್ಲಕಂಬ
ಬೆಂಗಳೂರು ನಗರ ದಲ್ಲಿ ಎ. 24ರಿಂದ ಆರಂಭ ಗೊಂಡು ಮೇ 3ರವರೆಗೆ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಕರ್ನಾಟಕ ಸರಕಾರ ಮೊದಲ ಬಾರಿಗೆ ಮರೆಯಾಗುತ್ತಿರುವ ಕ್ರೀಡೆಯೊಂದಕ್ಕೆ ಮರುಜೀವ ತುಂಬುವ ಕೆಲಸವನ್ನು ಮಾಡಿದೆ. ಮೊದಲ ಬಾರಿಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಲ್ಲಕಂಬ ಸ್ಪರ್ಧೆ ಕಾಣಿಸಿಕೊಳ್ಳುತ್ತಿದೆ. 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಮಲ್ಲಕಂಬ ಕ್ರೀಡೆಯನ್ನು ಭಾರತೀಯರು ಪ್ರದರ್ಶಿಸಿದ್ದರು. ಜರ್ಮನಿಯ ದೊರೆ ಅಡಾಲ್ಫ್ ಹಿಟ್ಲರ್ ಮಲ್ಲಕಂಬ ಕ್ರೀಡೆಯನ್ನು ಮೆಚ್ಚಿ, ಭಾರತ ತಂಡಕ್ಕೆ ವಿಶೇಷ ಔತಣ ಕೂಟವನ್ನು ನೀಡಿ ಗೌರವಿಸಿದ್ದರು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮಲ್ಲಕಂಬ ಕ್ರೀಡೆ ಜನಪ್ರಿಯತೆಯನ್ನು ಕಳೆದುಕೊಂಡಿತು. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗರಡಿ ಮನೆಗಳಲ್ಲಿ ಕುಸ್ತಿಪಟುಗಳು ಮಲ್ಲಕಂಬವನ್ನು ಅಭ್ಯಾಸ ಮಾಡುತ್ತ ಬಂದರು. ಮಹಾರಾಷ್ಟ್ರದ ವಿದರ್ಭ ಜಿಲ್ಲೆಯ ಅಮರಾವತಿಯಲ್ಲಿರುವ ಹನುಮಾನ್ ವ್ಯಾಯಾಮ ಪ್ರಸಾರಕ ಮಂಡಳಿಯ 35 ಮಲ್ಲಕಂಬ ಪಟುಗಳು ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದರು. ಆನಂತರ, ಜಗತ್ತಿನ ಅನೇಕ ದೇಶಗಳು ಮಲ್ಲಕಂಬದ ಬಗ್ಗೆ ಆಸಕ್ತಿ ತೋರಿ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳುತ್ತಿವೆ.
ಮಲ್ಲಕಂಬ ಅಂದರೆ ಕಂಬದಲ್ಲಿ ಕಸರತ್ತು ಮಾಡುವ ಕುಸ್ತಿಪಟು. ಮಲ್ಲ ಅಂದರೆ ಜಟ್ಟಿ, ಕುಸ್ತಿಪಟು. ನೆಲದ ಮೇಲೆ ನೇರವಾಗಿ ನಿಂತ ಬೀಟೆ ಮರದ ಕಂಬ, ಅದಕ್ಕೆ ಹರಳೆಣ್ಣೆಯನ್ನು ಸವರಿರುತ್ತಾರೆ, ಆ ಕಂಬದ ಮೇಲೆ ಮಲ್ಲರು ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಾರೆ. ಅಲ್ಲಿ ಯೋಗದ ಹೆಚ್ಚಿನ ಆಸನಗಳನ್ನು ಪ್ರದರ್ಶಿಸುತ್ತಾರೆ. ಕುಸ್ತಿಯ ಅಭ್ಯಾಸದ ವೇಳೆ ಅಂಕಣದಿಂದ ಹೊರಭಾಗದಲ್ಲಿ ಆಡುವ ಈ ಕ್ರೀಡೆ ನಂತರದ ದಿನಗಳಲ್ಲಿ ಎಲ್ಲರ ಆಕರ್ಷಣೆಯಾಗಿ ಬೆಳೆಯಿತು. ಮಲ್ಲಕಂಬದ ಇತಿಹಾಸವನ್ನು ಹುಡುಕಿದರೆ ಸ್ಪಷ್ಟವಾಗಿ ಸಿಗುವುದಿಲ್ಲ. 12ನೇ ಶತಮಾನದಲ್ಲಿ ಕನ್ನಡ ನಾಡನ್ನು ಆಳಿದ ಕಲ್ಯಾಣಿ ಚಾಲುಕ್ಯ ದೊರೆ ಮೂರನೇ ಸೋಮವರ್ಮನ ಕೃತಿ, ‘ಮಾನಸೋಲ್ಲಾಸ’’ದಲ್ಲಿ ಮಲ್ಲಕಂಬದ ಬಗ್ಗೆ ತಿಳಿಸಿರುವುದರಿಂದ ಆ ಕಾಲದಿಂದಲೂ ಈ ಕ್ರೀಡೆ ಕನ್ನಡ ನಾಡಿನಲ್ಲಿ ಜನಪ್ರಿಯಗೊಂಡಿತ್ತು ಎಂಬುದು ಸ್ಪಷ್ಟ. ಆನಂತರ, ಮರಾಠ ದೊರೆಗಳಾದ ಪೇಶ್ವೆಗಳ ಪ್ರೋತ್ಸಾಹದಿಂದ ಈ ಕ್ರೀಡೆ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿತ್ತು. ಸಮತೋಲನ, ದಕ್ಷತೆ ಹಾಗೂ ಶಿಸ್ತು ಇದು ಸೇನೆಯಲ್ಲಿ ಇರಬೇಕಾದ ಪ್ರಮುಖ ಅಂಶ. ಈ ಕಾರಣಕ್ಕಾಗಿ ಮಲ್ಲಕಂಬವನ್ನು ಮರಾಠ ದೊರೆಗಳು ತಮ್ಮ ಸೈನಿಕರಿಗೆ ಕಡ್ಡಾಯಗೊಳಿಸಿದ್ದರು. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯವಾಯಿತು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆಯ ಮಲ್ಲಕಂಬ ತಂಡ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಕರ್ನಾಟಕದ ಗದುಗಿನ ಲಕ್ಷ್ಮೇಶ್ವರದಲ್ಲಿ ಕರ್ನಾಟಕ ರಾಜ್ಯ ಮಲ್ಲಕಂಬ ಸಂಸ್ಥೆ ಸ್ಥಾಪನೆಗೊಂಡಿತು. ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚಾಂಪಿಯನ್‌ಷಿಪ್ ನಡೆದ ನಂತರ 2019ರಲ್ಲಿ ಮುಂಬೈಯಲ್ಲಿ ಮೊದಲ ವಿಶ್ವ ಮಲ್ಲಕಂಬ ಚಾಂಪಿಯನ್‌ಶಿಪ್ ನಡೆಯಿತು. ಅಲ್ಲಿ ಭಾರತ ನಿರೀಕ್ಷೆಯಂತೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಜಗತ್ತಿನ ಅನೇಕ ದೇಶಗಳನ್ನು ಆಕರ್ಷಿಸಿರುವ ನಮ್ಮ ನಾಡಿನ ಕ್ರೀಡೆಯನ್ನು ನಾವು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ.