ಉಡುಪಿ: ಸಾಮರಸ್ಯ ನಡಿಗೆ-ಸಹಬಾಳ್ವೆ ಸಮಾವೇಶ ಮೇ 14ಕ್ಕೆ ಮುಂದೂಡಿಕೆ

Update: 2022-04-23 06:18 GMT

ಉಡುಪಿ: ಉಡುಪಿ ಸಹಬಾಳ್ವೆ ವತಿಯಿಂದ ಉಡುಪಿಯಲ್ಲಿ ಮೇ 7ರಂದು ನಡೆಸಲು ತೀರ್ಮಾನಿಸಲಾಗಿದ್ದ ಸಾಮರಸ್ಯ ನಡಿಗೆ -ಸಹಬಾಳ್ವೆ ಸಮಾವೇಶವನ್ನು ಮೇ 14ಕ್ಕೆ ಮುಂದೂಡಲಾಗಿದೆ.

ಶುಕ್ರವಾರ ಉಡುಪಿಯಲ್ಲಿ ನಡೆದ  ಸಹಬಾಳ್ವೆ ಉಡುಪಿಯ ಸಭೆಯಲ್ಲಿ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಉಡುಪಿಯಲ್ಲಿ ಸಾಮರಸ್ಯ-ಸಹಬಾಳ್ವೆ ಸಮಾವೇಶವನ್ನು ಮೇ 7ರಂದು ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಎಲ್ಲಾ ತಯಾರಿಗಳೂ ನಡೆದಿದ್ದವು. ಆದರೆ ಸಮಾವೇಶಕ್ಕೆ ಆಹ್ವಾನಿಸಲು ಉದ್ದೇಶಿಸಿದ್ದ ಧಾರ್ಮಿಕ ಗುರುಗಳು ಮತ್ತು ಸ್ವಾಮೀಜಿಗಳಲ್ಲಿ ಹಲವರು ಆ ದಿನ ಲಭ್ಯವಿರುವುದಿಲ್ಲ ಎಂದು ತಿಳಿದು ಬಂದಿದೆ.

ಹೀಗಾಗಿ ಒಂದು ವಾರ ತಡೆದು ಅಂದರೆ ಮೇ 14ರ ಶನಿವಾರದಂದು ಈ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಭೆಯನ್ನು ನಡೆಸಲು ತೀರ್ಮಾನವಾಗಿದೆ. ಈಗಾಗಲೇ ಈ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸಾಮರಸ್ಯ ಬಯಸುವ ಜನರು ಬರುವ ಉತ್ಸಾಹ ತೋರುತ್ತಿರುವುದು ನಮಗೆ ಮತ್ತಷ್ಟು ಹುರುಪು ತಂದಿದೆ. ಈ ಬದಲಾವಣೆಯನ್ನು ಗಮನಿಸಿಕೊಂಡು, ಅದರಂತೆ ಮೇ 14 ಕ್ಕೆ ಕಡಲಿನೂರು ಉಡುಪಿಯತ್ತ ಹೆಜ್ಜೆ ಹಾಕಬೇಕೆಂದು ಸಂಘಟಕರು ಕೋರಿದ್ದಾರೆ.

ದ್ವೇಷ ಕ್ರೌರ್ಯಗಳಿಗೆ ಪ್ರೀತಿ, ಸಾಮರಸ್ಯ-ಸಹಬಾಳ್ವೆಯ ಸಂದೇಶದಿಂದಲೇ ಉತ್ತರಿಸಬೇಕು. ನಮ್ಮ ನೆಲದ ಬಹುತ್ವ ಪರಂಪರೆಯನ್ನು ದೇಶಕ್ಕೇ ಸಾರಿ ಹೇಳಬೇಕು. ನಾಡಿನ ನಿಜವಾದ ಏಳಿಗೆ ಇರುವುದು ಸಾಮರಸ್ಯದಲ್ಲೇ ಹೊರತು ಮತದ್ವೇಷದಲ್ಲಿ ಅಲ್ಲ ಎಂದು ಸರ್ವಜನರೂ ಒಕ್ಕೊರಲಿನಿಂದ ಗಟ್ಟಿಯಾಗಿ ಹೇಳಬೇಕಾಗಿದೆ.  ಉಡುಪಿ ಮಾತ್ರವಲ್ಲ ಇಡೀ ರಾಜ್ಯದ ಪ್ರತಿ ಊರುಗಳಲ್ಲಿ ಸಾಮರಸ್ಯ-ಸಹಬಾಳ್ವೆಯ ಸಂದೇಶ ಸಾರಬೇಕು. ಈ ನಿಟ್ಟಿನಲ್ಲಿ ಉಡುಪಿ ಸಮಾವೇಶ ಒಂದು ಮಾದರಿಯಾಗಲಿ ಎಂಬುದು ನಮ್ಮ ಆಶಯ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News