×
Ad

ಕಾನೂನು ಉಲ್ಲಂಘಿಸಿ ಪಜಾತಿ, ಪಂಗಡದ ಜಮೀನು ಪರಭಾರೆ; ದಲಿತ್ ಸೇವಾ ಸಮಿತಿ ಹೋರಾಟ

Update: 2022-04-23 16:47 IST

ಪುತ್ತೂರು: ದ.ಕ. ಜಿಲ್ಲೆಯಲ್ಲಿ ಪ.ಜಾತಿ ಹಾಗೂ ಪಂಗಡದವರ ವರ್ಗ ಜಮೀನಿಗೆ ಪರಭಾರೆ ನಿಷೇಧವಿದ್ದರೂ ಕೆಲವು ವಕೀಲರ ಮೂಲಕ ಸರಕಾರದ ನಿರಪೇಕ್ಷಣಾ ಪತ್ರ ಇಲ್ಲದೆ ಒಪ್ಪಿಗೆ ಪತ್ರ, ಬಾಡಿಗೆ ಪತ್ರದ ಲೀಸ್, ಎಗ್ರಿಮೆಂಟ್ ಮಾಡಿಕೊಂಡು ವಂಚಿಸುವ ಪ್ರಕರಣಗಳು ನಡೆಯುತ್ತಿದ್ದು, ಸರಕಾರದ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. ಇಂತಹ ಜಮೀನುಗಳನ್ನು ಹಿಂದಿರುಗಿಸಲು ದಲಿತ್ ಸೇವಾ ಸಮಿತಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.

ಅವರು ಶನಿವಾರ ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಮೊರಂಕಲ ಮನೆ ನಿವಾಸಿ ಆಣ್ಣು ನಾಯ್ಕ ಆವರ ಜಮೀನು ಸರ್ವೆ ನಂ. 13-15 ಎಫ್ಪಿ, 0-06 ಹಾಗೂ 13/5 ಎಫ್ಪಿ ವಿಸ್ತೀರ್ಣ 1.18 ಎಕ್ರೆ ಜಮೀನನ್ನು ಪ್ರಕಾಶ್ ಕೆ.ಜೆ., ಸುಂದರ ಶೆಟ್ಟಿ, ಅದ್ರಾಮ, ಜೋಸೆಫ್ ಯಾನೆ ಬೇಬಿ ಜೆಮ್ಮಿ, ಪಿ.ಪಿ. ವರ್ಗೀಸ್ ಅವರು ಅಲ್ಪ ಮೊತ್ತ ನೀಡಿ ಜಮೀನು ಪಡೆದುಕೊಂಡಿರುವ ಕುರಿತು ಅಣ್ಣು ನಾಯ್ಕ ಅವರು ಸಂಘಟನೆಗೆ ದೂರು ನೀಡಿದ್ದಾರೆ.

ಅಣ್ಣು ನಾಯ್ಕ ಆವರ ಪುತ್ರಿ ವಾರಿಜ ಆವರು ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ಈ ಕುರಿತು ದಾವೆ ದಾಖಲಿಸಿದ್ದಾರೆ. ತನ್ನ ತಂದೆಗೆ ಅಮಿಷ ಒಡ್ಡಿ ನಮ್ಮನ್ನು ಕೂಡ ತಂದೆಯ ಮೂಲಕ ಬೆದರಿಸಿ ಜಮೀನು ಆವರಿಗೆ ಕೊಡುವಂತೆ ಒತ್ತಾಯಿಸಿ ಸಹಿ ಕೂಡ ಪಡೆದುಕೊಂಡಿದ್ದಾರೆ. ಸದ್ರಿ ಜಾಗವನ್ನು ಆವರ ಸ್ವಾಧೀನಕ್ಕೆ ನೀಡಲಾಗಿದೆ. ನಿರಪೇಕ್ಷಣಾ ಪತ್ರ ಪಡೆಯದೆ ಮಾರಾಟ ಮಾಡಿರುವುದು ಕಾನೂನು ಉಲ್ಲಂಘನೆ ಎಂಬುದು ಗಮನಕ್ಕೆ ಬಂದಿರುವುದರಿಂದ ನ್ಯಾಯಾಲಯದಲ್ಲಿ ದೂರು ನೀಡಿದ್ದೇವೆ ಎಂದು ತಿಳಿಸಿದರು.

ಹಾಲಿ ಅಣ್ಣು ನಾಯ್ಕ ಅವರ ಮನೆಯವರಿಗೆ 7 ಸೆಂಟ್ಸ್ ಜಾಗ ಮಾತ್ರ ಉಳಿಸಿದ್ದಾರೆ. ಕಾನೂನು ಉಲ್ಲಂಘಿಸಿ ಮಾಡಿರುವ ಈ ವ್ಯವಹಾರದ ವಿರುದ್ಧ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಬೇಕಾದ ಜಿ.ಪಂ. ಸದಸ್ಯರಾಗಿಯೂ ಗಣ್ಯರೆನಿಸಿಕೊಂಡಿರುವ ಸ್ಥಳೀಯ ನಿವಾಸಿಯೂ ಈ ಪ್ರಕರಣದಲ್ಲಿ ಅರೋಪಿಯಾಗಿರುವುದು ಅತ್ಯಂತ ಬೇಸರದ ವಿಚಾರ. ಈ ಹಿಂದೆಯೂ ಇಂತಹ 4 ವಂಚನೆ ಪ್ರಕರಣಗಳು ಸಂಘಟನೆಯ ಮೂಲಕ ಇತ್ಯರ್ಥಗೊಂಡಿದ್ದು, ಅಣ್ಣು ನಾಯ್ಕ ಆವರ ಪುತ್ರಿಯರಿಗೂ ನ್ಯಾಯ ಸಿಕ್ಕಿ ಜಮೀನು ಆವರಿಗೆ ವಾಪಾಸ್ ಸಿಗುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು ಎಂದು  ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಅಣ್ಣಪ್ಪಕಾರೆಕ್ಕಾಡು, ಚಂದ್ರಶೇಖರ ವಿಟ್ಲ, ಅಣ್ಣು ನಾಯ್ಕ ಅವರ ಪುತ್ರಿಯರಾದ ವಾರಿಜ ಮತ್ತು ಮಂಜುಳಾ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News