×
Ad

ಇನ್ಯಾವುದೋ ದೇಶದಲ್ಲಿ ಭಾರತದ ಬಗ್ಗೆ ಚರ್ಚೆಯಾಗುವಂತೆ ಮಾಡುತಿದ್ದಾರೆ: ಹಿಜಾಬ್ ಬಾಲಕಿಯರ ಕುರಿತು ಶೋಭಾ ಕರಂದ್ಲಾಜೆ

Update: 2022-04-23 19:28 IST

ಉಡುಪಿ : ಹಾಲ್ ಟಿಕೆಟ್ ಪಡೆದು ಹಿಜಾಬ್ ತೆಗೆಯದೇ ಪರೀಕ್ಷೆ ಬರೆಯಲು ಮುಂದಾಗುವ ಮೂಲಕ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದೇ ಹಿಜಾಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಪಿಯುಸಿ ವಿದ್ಯಾರ್ಥಿನಿಯರ ಉದ್ದೇಶವಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 

ಉಡುಪಿಯ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ತಾಲೂಕು ಆರೋಗ್ಯ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತಿದ್ದರು. ಈ ಮೂಲಕ ಭಾರತದ ಕುರಿತಂತೆ ಯಾವುದೋ ದೇಶದಲ್ಲಿ ಚರ್ಚೆ ಆಗುವಂತೆ ಮಾಡುವುದು ಇವರ ಉದ್ದೇಶವಾಗಿದೆ. ಭಾರತದಲ್ಲಿ ಈ ರೀತಿ ನಡೆಯುತ್ತಿದೆ ಎಂಬುದನ್ನು ಬಿಂಬಿಸಲು ಹೊರಟಿದ್ದಾರೆ. ಭಯೋತ್ಪಾದಕರು ಬೆಂಬಲ ನೀಡುವ ರೀತಿಯಲ್ಲಿ ಇವರು ನಡೆದುಕೊಳ್ಳುತಿದ್ದಾರೆ ಎಂದು ಶೋಭಾ ಕಿಡಿಕಾರಿದರು.

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಹೈಕೋರ್ಟ್ ಹಾಗೂ ಸರಕಾರದ ಆದೇಶವನ್ನು ಮೀರಿ ಹಿಜಾಬ್‌ಗೆ ಬೆಂಬಲ ನೀಡಲಾಗುತ್ತಿದೆ ಎಂದ ಶೋಭಾ, ಇವರು ಈ ನೆಲದ ಕಾನೂನು ಪಾಲಿಸುತ್ತಿಲ್ಲ. ಮನಬಂದಂತೆ ನಡೆದುಕೊಳ್ಳಬಹುದು ಎಂದು ತಿಳಿದಂತಿದೆ ಎಂಬುದು ಸಾಬೀತಾಗಿದೆ ಎಂದರು.

ಸರಕಾರ, ಪೊಲೀಸ್ ವ್ಯವಸ್ಥೆ, ಕೋರ್ಟು ಯಾವುದಕ್ಕೂ ಇವರು ಗೌರವ ನೀಡುತ್ತಿಲ್ಲ. ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡುವುದು ಇವರ ಮಾನಸಿಕತೆ. ಈ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬುದು ನಮ್ಮ ಸಂಕಲ್ಪ. ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ, ಗೌರವ ಬೇಕಾಗಿದೆ. ಮಹಿಳೆಯರು ಶಿಕ್ಷಣ ಪಡೆದು ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು  ಉಡುಪಿ-ಚಿಕ್ಕಮಗಳೂರು ಸಂಸದೆ ನುಡಿದರು.

ಹಿಜಾಬ್‌ಗೆ ಬೆಂಬಲ ಕೊಟ್ಟ ಸಂಘಟನೆ ನಿಮ್ಮ ಬದುಕಿನ ಜೊತೆ ಬರುವುದಿಲ್ಲ. ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕೆಲ ಸಂಘಟನೆಗಳು ಹೋರಾಟ ಮಾಡುತ್ತಿವೆ. ಭಾರತದಲ್ಲಿ ನಿಮ್ಮದು ಏನು ನಡೆಯುವುದಿಲ್ಲ ಇಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ ಎಂದ ಅವರು, ಪರೀಕ್ಷೆ ಬರೆಯಿರಿ ಡಿಗ್ರಿ ಓದಿ ಕೆಲಸ ಗಿಟ್ಟಿಸಿಕೊಳ್ಳಿ ಎಂದು ಸಲಹೆ ನೀಡಿದರು.

ರಾಜ್ಯಾದ್ಯಂತ ಪೊಲೀಸರ ಮೇಲೆ ದಾಳಿ ನಡೆಯುತ್ತಿರುವ ಕುರಿತು ಮಾತನಾಡಿದ ಅವರು, ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ, ಶಿವಮೊಗ್ಗ ಮತ್ತು ಹುಬ್ಬಳ್ಳಿ ಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ. ಇದು ಅವರ ದರ್ಪ ಅಹಂಕಾರವನ್ನು ತೋರಿಸುತ್ತದೆ. ಸಂಖ್ಯೆ ಜಾಸ್ತಿ ಇದ್ದಲ್ಲಿ ಪೊಲೀಸರನ್ನು ಬೆದರಿಸುವ ಸಂದೇಶವನ್ನು ಕೊಡುತ್ತಿದ್ದಾರೆ. ಬಹುಸಂಖ್ಯಾತರು ಅಲ್ಪಸಂಖ್ಯಾತರು ಒಟ್ಟಾಗಿ ಬದುಕಬೇಕು ಇದು ನಮ್ಮ ಸಂದೇಶ ಎಂದರು.

ಸರಕಾರಿ ವ್ಯವಸ್ಥೆಯ ಮೇಲೆ ದೌರ್ಜನ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗ ಬೇಕು. ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಮಚ್ಚು ಲಾಂಗು ಹಿಡಿದು ರಸ್ತೆಯಲ್ಲಿ ಹೋರಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ವ್ಯವಸ್ಥಿತವಾಗಿ ಕಲ್ಲು ಸಂಗ್ರಹಮಾಡಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗೆ ಕಲ್ಲು ತೂರಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News