×
Ad

ಮಂಗಳೂರಿನಲ್ಲಿ ನಡೆದ ಅಪಘಾತ ಪ್ರಕರಣ; ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ

Update: 2022-04-23 20:10 IST
ಪ್ರೀತಿ ಮನೋಜ್

ಮಂಗಳೂರು : ಎರಡು ವಾರದ ಹಿಂದೆ ನಗರದ ಬಲ್ಲಾಳ್‌ ಬಾಗ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೀತಿ ಮನೋಜ್ ಕಲ್ಯ (47) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಕರಂಗಲ್ಪಾಡಿ ನಿವಾಸಿಯಾಗಿರುವ ಪ್ರೀತಿ ಮನೋಜ್ ಎ.9ರಂದು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಪಾರ್ಟ್‌ಮೆಂಟ್‌ನತ್ತ ತೆರಳುತ್ತಿದ್ದರು. ಈ ಸಂದರ್ಭ ಬಿಎಂಡಬ್ಲ್ಯು ಕಾರು ಢಿಕ್ಕಿ ಹೊಡೆದಿತ್ತು.  ಗಂಭೀರ ಗಾಯಗೊಂಡಿದ್ದ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಗರದ ಮಣ್ಣಗುಡ್ಡ ನಿವಾಸಿ, ಇಂಟೀರಿಯರ್ ಡೆಕೊರೇಟರ್ ಶ್ರವಣ್ ಕುಮಾರ್‌ನ ನಿರ್ಲಕ್ಷ್ಯದಿಂದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ದಾಟಿ ಸ್ಕೂಟರ್ ಮತ್ತು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ಪ್ರೀತಿ ಮನೋಜ್, ಕಾರಿನಲ್ಲಿದ್ದ ಬಾಲಕ ಅಮಯ್ ಜಯದೇವನ್ ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರೀತಿ ಮನೋಜ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆ ನಡೆದ ತಕ್ಷಣ ಆರೋಪಿ ಕಾರು ಚಾಲಕನಿಗೆ ಸಾರ್ವಜನಿಕರು ಹಲ್ಲೆಗೈದಿದ್ದರು. ಅಪಘಾತದ ಮತ್ತು ಹಲ್ಲೆಗೈದ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚಾಲಕನ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದರು.

ಅಂಗಾಂಗ ದಾನ: ಪ್ರೀತಿ ಮನೋಜ್ ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ಶನಿವಾರ ಅಂಗಾಂಗವನ್ನು ದಾನ ಮಾಡಲಾಯಿತು.

ಸುಮಾರು 14 ದಿನಗಳ ಜೀವನ್ಮರಣ ಹೋರಾಟ ನಡೆಸಿದ ಪ್ರೀತಿ ಮನೋಜ್‌ರ ಮೆದುಳು ನಿಷ್ಕ್ರಿಯವಾಗಿತ್ತು. ಇದರಿಂದ ಕುಟುಂಬವು ಪ್ರೀತಿ ಮನೋಜ್‌ ಅವರ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.

4 ಮಂದಿಗೆ ದಾನ: ಪ್ರೀತಿ ಮನೋಜ್‌ರ ಹೃದಯ ಕವಾಟ ಒಬ್ಬರಿಗೆ, ಕಿಡ್ನಿ ಇಬ್ಬರಿಗೆ, ಲಿವರ್ ಒಬ್ಬರಿಗೆ ದಾನ ಮಾಡಲಾಗಿದೆ. ಅಂಗಾಂಗಗಳನ್ನು ಮಂಗಳೂರು, ಮಣಿಪಾಲ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಆಸ್ಪತ್ರೆಯಲ್ಲಿ ಗೌರವಾರ್ಪಣೆ: ಅಂಗಾಂಗ ದಾನದ ಬಳಿಕ ಪ್ರೀತಿ ಮನೋಜ್ ಅವರ ಮೃತದೇಹವನ್ನು ಆಸ್ಪತ್ರೆ ಸಿಬ್ಬಂದಿ ಗೌರವಾರ್ಪಣೆ ಸಲ್ಲಿಸಿದರು. ಸಂಜೆ ನಂದಿಗುಡ್ಡ ಸ್ಮಶಾನದಲ್ಲಿ ಅಂತಿಮ ವಿಧಾನಗಳು ನಡೆದವು.

ಆರೋಪಿ ಕಾರು ಚಾಲಕನಿಗೆ ಜಾಮೀನು: ಸರಣಿ ಅಪಘಾತಕ್ಕೆ ಕಾರಣವಾದ ಕಾರು ಚಾಲಕ, ಶ್ರವಣ್ ಕುಮಾರ್ (30)ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅಪಘಾತಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 308ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಜತೆಗೆ ಕಲಂ 279, 337, 338ರ ಅನ್ವಯವೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಆರೋಪಿಗೆ ಎ.22ರಂದು ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. 

ಇಂತಹ ಅನ್ಯಾಯ ಯಾರಿಗೂ ಆಗದಿರಲಿ: ಜನನಿಬಿಡ ಮತ್ತು ವಾಹನ ಸಂಚಾರ ದಟ್ಟವಿರುವ ನಗರದ ಪ್ರಮುಖ ರಸ್ತೆಯಲ್ಲೇ ತೀರಾ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿದ ಕಾರಣ ಪತ್ನಿ ಇಹಲೋಕ ತ್ಯಜಿಸುವಂತಾಗಿದೆ. ಹಾಗಾಗಿ ಆರೋಪಿ ಕಾರು ಚಾಲಕನಿಗೆ ತಕ್ಕ ಶಿಕ್ಷೆಯಾಗಬೇಕು. ಮುಂದೆ ಯಾರೂ ಇಂತಹ ಕೃತ್ಯ ಎಸಗಬಾರದು ಎಂದು ಪ್ರೀತಿ ಅವರ ಪತಿ ಮನೋಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News