×
Ad

ತಾಳೆ ಎಣ್ಣೆ ಕೊರತೆ: ರಫ್ತು ನಿಷೇಧಕ್ಕೆ ಇಂಡೊನೇಶ್ಯಾ ನಿರ್ಧಾರ

Update: 2022-04-23 21:22 IST

ಜಕಾರ್ತ, ಎ.23: ವಿಶ್ವದಲ್ಲಿ ಅತ್ಯಧಿಕ ತಾಳೆ ಎಣ್ಣೆ ಉತ್ಪಾದಿಸುವ ದೇಶವೆನಿಸಿರುವ ಇಂಡೊನೇಶ್ಯಾದಲ್ಲಿ ತಾಳೆಎಣ್ಣೆ ಕೊರತೆಯಾಗಿರುವುದರಿಂದ ಈ ಅಡುಗೆ ಅನಿಲದ ರಫ್ತಿನ ಮೇಲೆ ಮುಂದಿನ ವಾರದಿಂದ ನಿಷೇಧ ಹೇರಲಾಗುವುದು ಎಂದು ಸರಕಾರ ಘೋಷಿಸಿದೆ.

  ಅಡುಗೆ ಎಣ್ಣೆಯ ಕಚ್ಛಾವಸ್ತು ಮತ್ತು ಅಡುಗೆ ಎಣ್ಣೆಯ ರಫ್ತಿನ ಮೇಲೆ, ಮುಂದಿನ ಆದೇಶದವರೆಗೆ ನಿಷೇಧ ಹೇರಲಾಗುವುದು. ಈ ಆದೇಶದ ಸೂಕ್ತ ಅನುಷ್ಟಾನದ ಬಗ್ಗೆ ಸರಕಾರ ನಿಗಾ ವಹಿಸಲಿದೆ ಮತ್ತು ದೇಶದ ಜನರ ಬಳಕೆಗೆ ಕಡಿಮೆ ದರದಲ್ಲಿ ಸಾಕಷ್ಟು ತಾಳೆಎಣ್ಣೆ ಲಭಿಸುವುದನ್ನು ಖಾತರಿಪಡಿಸಲಿದೆ ಎಂದು ಪ್ರಧಾನಿ ಜೋಕೊ ವಿಡೊಡೊ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರ ಗಗನಕ್ಕೇರಿದ್ದರಿಂದ ಆಗ್ನೇಯ ಏಶ್ಯಾ ದ್ವೀಪಸಮೂಹವಾದ ಇಂಡೊನೇಶ್ಯಾದ ತಾಳೆಎಣ್ಖೆ ಉತ್ಪಾದಕರು ರಫ್ತಿಗೆ ಆದ್ಯತೆ ನೀಡಿದ್ದರಿಂದ ಕಳೆದ ನವೆಂಬರ್‌ನಿಂದ ದೇಶಿಯ ಬಳಕೆಗೆ ತಾಳೆಎಣ್ಣೆಯ ಕೊರತೆ ಕಾಣಿಸಿಕೊಂಡಿದೆ. ತಾಳೆ ಎಣ್ಣೆಯ ಕೊರತೆಯಿಂದಾಗಿ ದೇಶದಲ್ಲಿ ತಾಳೆಎಣ್ಣೆಯ ದರ ಗರಿಷ್ಟ ಮಟ್ಟಕ್ಕೇರಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಇದೀಗ ರಫ್ತಿನ ಮೇಲೆ ನಿಷೇಧ ಹೇರುವ ಮೂಲಕ ದೇಶೀಯ ಬಳಕೆಗೆ ತಾಳೆಎಣ್ಣೆಯನ್ನು ಖಾತರಿಪಡಿಸುವ ಉದ್ದೇಶವಿದೆ ಎಂದು ಮೂಲಗಳು ಹೇಳಿವೆ. ತಾಳೆ ಎಣ್ಣೆ ರಫ್ತಿನ ಮೇಲೆ ಜನವರಿಯಲ್ಲಿ ಸೀಮಿತ ನಿಷೇಧ ಜಾರಿಗೊಳಿಸಲಾಗಿತ್ತು ಮತ್ತು ಸಬ್ಸಿಡಿ ದರದಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೂ ತಾಳೆಎಣ್ಣೆಯ ಕೊರತೆ ಸಮಸ್ಯೆ ಬಿಗಡಾಯಿಸಿದ್ದರಿಂದ ಸರಕಾರ ಈಗ ಪೂರ್ಣಪ್ರಮಾಣದಲ್ಲಿ ರಫ್ತು ನಿಷೇಧಕ್ಕೆ ನಿರ್ಧರಿಸಿದೆ.

   ಈ ಮಧ್ಯೆ, ದೇಶದಲ್ಲಿ ತೀವ್ರ ಕೊರತೆಯಿದ್ದರೂ ವಾಣಿಜ್ಯ ಇಲಾಖೆಯ ಕೆಲವು ಅಧಿಕಾರಿಗಳು ತಾಳೆಎಣ್ಣೆ ರಫ್ತಿಗೆ ಉತ್ಪಾದಕರಿಗೆ ಅಕ್ರಮವಾಗಿ ಲೈಸೆನ್ಸ್ ಮಂಜೂರುಗೊಳಿಸಿದ್ದಾರೆ ಎಂದು ಅಟಾರ್ನಿ ಜನರಲ್ ಕಚೇರಿ ಆರೋಪಿಸಿದ ಬಳಿಕ ಹಲವು ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಳೆ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಕಚ್ಛಾ ತಾಳೆ ಎಣ್ಣೆಯು ಚೋಕೊಲೇಟ್, ಸೌಂದರ್ಯವರ್ಧಕ ಉತ್ಪನ್ನಗಳಿಗೂ ಬಳಸುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News