×
Ad

ಹೆಚ್ಚುತ್ತಿರುವ ಅಗ್ನಿ ಅವಘಡಗಳು: ತನ್ನ 1,441 ಇಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಾಪಸ್ ಪಡೆಯಲು ಓಲಾ ನಿರ್ಧಾರ

Update: 2022-04-24 23:03 IST
photo credit:THEWEEK

ಹೊಸದಿಲ್ಲಿ,ಎ.24: ವಾಹನಗಳು ಅಗ್ನಿ ಅವಘಡಗಳಿಗೆ ತುತ್ತಾಗುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ 1,441 ಇಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಾಪಸ್ ಪಡೆಯಲು ಓಲಾ ಇಲೆಕ್ಟ್ರಿಕ್ ನಿರ್ಧರಿಸಿದೆ ಎಂದು ಕಂಪನಿಯು ರವಿವಾರ ಹೇಳಿಕೆಯಲ್ಲಿ ತಿಳಿಸಿದೆ.

ಮಾ.26ರಂದು ಪುಣೆಯಲ್ಲಿ ಸಂಭವಿಸಿದ್ದ ಅಗ್ನಿ ಅವಘಡ ಕುರಿತು ತನ್ನ ತನಿಖೆಯು ಮುಂದುವರಿದಿದೆ ಮತ್ತು ಪ್ರಾಥಮಿಕ ತನಿಖೆಯಿಂದ ಅದೊಂದು ಪ್ರತ್ಯೇಕ ಘಟನೆಯಾಗಿತ್ತು ಎನ್ನುವುದು ಕಂಡುಬಂದಿದೆ ಎಂದು ತಿಳಿಸಿರುವ ಓಲಾ,ಆದಾಗ್ಯೂ ಮುನೆಚ್ಚರಿಕೆ ಕ್ರಮವಾಗಿ ನಿರ್ದಿಷ್ಟ ಬ್ಯಾಚ್‌ನಲ್ಲಿಯ ಸ್ಕೂಟರ್‌ಗಳನ್ನು ಸಮಗ್ರ ತಪಾಸಣೆಗೆ ಒಳಪಡಿಸಲಿದ್ದೇವೆ ಮತ್ತು ಇದಕ್ಕಾಗಿ ಸ್ವಯಂಪ್ರೇರಿತವಾಗಿ 1,441 ವಾಹನಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ.

‘ನಮ್ಮ ಸರ್ವಿಸ್ ಇಂಜಿನಿಯರ್‌ಗಳು ಈ ವಾಹನಗಳನ್ನು ಪರಿಶೀಲಿಸಲಿದ್ದಾರೆ. ಎಲ್ಲ ಬ್ಯಾಟರಿ ವ್ಯವಸ್ಥೆಗಳು,ಥರ್ಮಲ್ ಮತ್ತು ಸುರಕ್ಷಾ ವ್ಯವಸ್ಥೆಗಳನ್ನು ಸಮಗ್ರ ತಪಾಸಣೆಗೆ ಒಳಪಡಿಸಲಾಗುವುದು ’ ಎಂದು ಹೇಳಿರುವ ಓಲಾ,ತನ್ನ ಬ್ಯಾಟರಿ ವ್ಯವಸ್ಥೆಯು ಭಾರತದ ಇತ್ತೀಚಿನ ಪ್ರಸ್ತಾವಿತ ಎಐಎಸ್ 156 ಮಾನದಂಡದಂತೆ ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿದೆ,ಜೊತೆಗೆ ಐರೋಪ್ಯ ಮಾನದಂಡ ಇಸಿಇ 136ಕ್ಕೆ ಅನುಗುಣವಾಗಿದೆ ಎಂದು ತಿಳಿಸಿದೆ.

ಇತ್ತೀಚಿಗೆ ದೇಶದ ವಿವಿಧ ಭಾಗಗಳಲ್ಲಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಅಗ್ನಿ ಆಕಸ್ಮಿಕದ ಘಟನೆಗಳು ವ್ಯಾಪಕವಾಗಿದ್ದು,ತಯಾರಕರು ತಮ್ಮ ವಾಹನಗಳನ್ನು ವಾಪಸ್ ಪಡೆಯುವುದನ್ನು ಅನಿವಾರ್ಯವಾಗಿಸಿದೆ. ಒಕಿನಾವಾ ಆಟೊಟೆಕ್ 3,000ಕ್ಕೂ ಅಧಿಕ ಮತ್ತು ಪ್ಯುರ್‌ಇವಿ ಸುಮಾರು 2,000 ವಾಹನಗಳನ್ನು ವಾಪಸ್ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News