×
Ad

ಎ.28ರಂದು ಒಡ್ಡೂರು ಫಾರ್ಮ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾಗಮ 'ಕಮಲೋತ್ಸವ'

Update: 2022-04-26 13:28 IST

ಮಂಗಳೂರು, ಎ. 26: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಒಡ್ಡೂರು ಫಾರ್ಮ್‌ನಲ್ಲಿ ಎ.28ರಂದು ಬಿಜೆಪಿ ಕಾರ್ಯಕರ್ತರ ಸಮಾಗಮ 'ಕಮಲೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಈ ಕಾರ್ಯಕ್ರಮ ಜಾತ್ರೋತ್ಸವ ಮಾದರಿಯಲ್ಲಿ ವಿವಿಧ ಆಟೋಟ ಸ್ಪರ್ಧೆ, ಮನೋರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕ್ಷೇತ್ರದ ಸುಮಾರು 15000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮಂಗಳೂರು ಉತ್ತರ ಕ್ಷೇತ್ರದ 500 ಕಾರ್ಯಕರ್ತರು ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಅಂಗಾರ ಹಾಗೂ ಜಿಲ್ಲೆಯ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಒಂದು ಗಂಟೆ ಅವಧಿಯ ಸಭಾ ಕಾರ್ಯಕ್ರಮದ ಬಳಿಕ ಜಾತ್ರೆ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಇದಲ್ಲದೆ ಪುರುಷರಿಗೆ ವಾಲಿಬಾಲ್ (7 ತಂಡಗಳು) , ಮಹಿಳೆಯರಿಗೆ ತ್ರೋಬಾಲ್ ಸ್ಪರ್ಧೆ (7 ತಂಡಗಳು), ಹಗ್ಗಜಗ್ಗಾಟ, ವಿವಿಧ ವಿಭಾಗದಲ್ಲಿ ಶಾಟ್‌ಪುಟ್, ಸಂಗೀತ ಕುರ್ಚಿ, ಮಕ್ಕಳಿಗಾಗಿ ಗೋಣಿಚೀಲ ಓಟ, ಲಿಂಬೆ ಚಮಚ ಮೊದಲಾದ ಆಟೋಟ ಸ್ಪರ್ಧೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜನಪದ ಹಾಗೂ ದೇಶಭಕ್ತಿ ಗೀತೆ ಗಾನ ಸ್ಪರ್ಧೆ, ಗಾಳಿಪಟ ಸ್ಪರ್ಧೆ ನಡೆಯಲಿದೆ. ಸಂಜೆ 4:30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.

ರಾಜೇಶ್ ನಾಯ್ಕ್ ಚುನಾವಣೆ ಸ್ಪರ್ಧೆ ಪಕ್ಷದ ತೀರ್ಮಾನ

ಶಾಸಕ ರಾಜೇಶ್ ನಾಯ್ಕ್ ಮುಂದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಅವರ ಸ್ಪರ್ಧೆ ಅವರ ಸ್ವಂತ ನಿರ್ಧಾರ ಅಲ್ಲ. ಅದೇನಿದ್ದರೂ ಪಕ್ಷದ ನಿರ್ಧಾರ. 2013ರಲ್ಲೂ ಅವರು ಚುನಾವಣೆಯಲ್ಲಿ ಸ್ಪರ್ಧೆಗೆ ಅಪೇಕ್ಷಿಸಿರಲಿಲ್ಲ. ಆ ಬಾರಿ ಸೋತರೂ ಮತ್ತೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸಿದ ಪರಿಣಾಮವಾಗಿ ಮತ್ತೆ ಗೆದ್ದು ಶಾಸಕರಾಗಿದ್ದಾರೆ. ಮುಂದೆಯೂ ಪಕ್ಷದ ನಿರ್ಧಾರಕ್ಕೆ ಅವರು ಬದ್ಧರಾಗಿರುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ದೇವಪ್ಪ ಪೂಜಾರಿ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದೇವದಾಸ ಶೆಟ್ಟಿ, ರೊನಾಲ್ಡ್ ಡಿಸೋಜ, ಯಶೋದರಾ, ಡೊಂಬಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News