×
Ad

ಬಿತ್ತನೆ ಸಮಯದಲ್ಲೇ ಕನಿಷ್ಟ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

Update: 2022-04-26 19:02 IST

ಮಂಗಳೂರು : ಬಿತ್ತನೆ ವೇಳೆಯಲ್ಲೇ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಕ್ರಮವಹಿಸಬೇಕು. ಇದರಿಂದ ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತದೆ ಎಂದು ಕೃಷಿಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಅಭಿಪ್ರಾಯಿಸಿದ್ದಾರೆ.

ದ.ಕ. ಕೃಷಿ  ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ನಿರ್ವಹಣಾ  ಸಮಿತಿ ,ಕೃಷಿ ಇಲಾಖೆ ಆಶ್ರಯದಲ್ಲಿ  ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ-ವಿಜ್ಞಾನಿ ಸಂವಾದ , ವಸ್ತುಪ್ರದರ್ಶನ  ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ  ಕನಿಷ್ಠ ಬೆಂಬಲ ಬೆಲೆಯನ್ನು  ಬೆಳೆ ಕೊಯ್ಲು ಆದ ಬಳಿಕ  ಘೋಷಿಸಲಾಗುತ್ತಿದೆ. ಇದರ ಬದಲು ನಾಟಿಯ ಸಂದರ್ಭದಲ್ಲೇ ಬೆಂಬಲ ಬೆಳೆಯನ್ನು ಘೋಷಿಸಬೇಕು, ಕೊಯ್ಲು ಪ್ರಾರಂಭವಾಗುವ ಮೊದಲೇ  ಖರೀದಿ ಕೇಂದ್ರಗಳನ್ನು ನಿಗದಿಪಡಿಸಬೇಕು .ಇದರಿಂದ ರೈತರ ಬೆಳೆಗಳಿಗೆ ಬೆಲೆ ಸ್ಥಿರತೆ ಲಭಿಸುತ್ತದೆ ಎಂದರು.

ಕೃಷಿಯಲ್ಲಿ ಭದ್ರತೆ ಇಲ್ಲದ ಕಾರಣ ಕೃಷಿಕರ ಮಕ್ಕಳು ಕುಟುಂಬದ ಮೂಲ ವೃತಿತಿ ಬಿಟ್ಟು, ಉದ್ಯೋಗಕ್ಕಾಗಿ ನಗರಕ್ಕೆ ಹೋಗುತಾತಿರೆ. ರೈತರ ಬಗ್ಗೆ ಸರ್ಕಾರ ಕಾಳಜಿ ತೋರುವ ಮೂಲಕ ಯುವಜನಾಂಗ ಕೃಷಿಯಲ್ಲಿ ಹೆಚ್ಚು ತೊಡಗುವಂತೆ ಮಾಡಬೇಕು ಎಂದರು.

ರಾಸಾಯನಿಕ ರಸಗೊಬ್ಬರದ ದರ ಗಣನೀಯವಾಗಿ ಏರಿಕೆಯಾಗಿದೆ. ಸರ್ಕಾರದ ಸಹಾಯಧನ ಹಾಗೂ ಗೊಬ್ಬರದ ಖರೀದಿ ದರಕ್ಕೆ ಬಹಳಷ್ಟು ವ್ಯತ್ಯಾಸವಿದ್ದು, ಕೇಂದ್ರ ಸರ್ಕಾರ ಸಹಾಯಧನದ ಮೊತ್ತ ಏರಿಕೆ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಮುಂದಾಳು ಮನೋಹರ ಶೆಟ್ಟಿ ಅವರು ಮಾತನಾಡಿ  ಕೃಷಿ  ಸ್ವಾಭಿಮಾನಿ, ಸ್ವಾವಲಂಬಿ ಬದುಕು  ನೀಡುವ ಕ್ಷೇತ್ರ.ಈ ಕ್ಷೇತ್ರಕ್ಕೆ  ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಸಿ.ಸೀತಾ ಅವರು ಮಾತನಾಡಿ ಸರಕಾರದ ವಿವಿಧ ಯೋಜನೆಗಳನ್ನು  ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಒಂದು ಆಂದೋಲನಾ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗುತ್ತಿದೆ ಎಂದರು.

ನಬಾರ್ಡ್‌ನ ಎಜಿಎಂ ಸಂಗೀತಾ ಕರ್ತಾ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಬಗ್ಗೆ ವಿವರಿಸಿದರು.
ಮೀನು ಮೌಲ್ಯವರ್ಧಿತ ಉತ್ಪನ್ನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ  ರೈತ ಮಹಿಳೆ, ಸಮಗ್ರ  ಸಂಜೀವಿನಿ  ಸ್ವಸಹಾಯ ಸಂಘದ  ಸಾವಿತ್ರಿ ಅವರನ್ನು  ಸಮ್ಮಾನಿಸಲಾಯಿತು.

ಹಿರಿಯ ವಿಜ್ಞಾನಿ ಹಾಗೂ ಕೆವಿಕೆ ಮುಖ್ಯಸ್ಥ ಡಾ. ಟಿ.ಜೆ. ರಮೇಶ್  ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟರ್ ಭರತ್‌ರಾಜ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್, ಕೃಷಿ ವಿಜ್ಞಾನಿ ವಸಂತ ಶೆಟ್ಟಿ  ಅತಿಥಿಯಾಗಿದ್ದರು. ಮೀನುಕಾರಿಕೆ  ವಿಜ್ಞಾನಿ  ಡಾ. ಚೇತನ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News